ಪಿಡಿಒ ಮನೆ ಮುಂದಿನ ಸಿಸಿ ಕ್ಯಾಮೆರಾದಲ್ಲಿ ಕಳ್ಳನ ಮುಖ ಸೆರೆಯಾಗಿದೆ.
- ವಿದ್ಯಾನಗರದಲ್ಲಿ ಪಿಡಿಒ ದಂಪತಿ ಮನೆಯ ಬೀಗ ಮುರಿದ ಕಳ್ಳ
- ಹಾಡುಹಗಲೇ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳವು
- ಕಳ್ಳತನದ ದೃಶ್ಯ ಮನೆ ಮುಂದಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ
ಶಿವಮೊಗ್ಗ: ವಿದ್ಯಾನಗರದಲ್ಲಿ ಪಿಡಿಒ ದಂಪತಿ ಮನೆಯ ಬೀಗ ಮುರಿದ ಕಳ್ಳನೊಬ್ಬ ಹಾಡುಹಗಲೇ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ(Jewelry) ಮತ್ತು ನಗದು ಕಳವು ಮಾಡಿದ್ದು, ಕಳ್ಳತನದ ದೃಶ್ಯ ಮನೆ ಮುಂದಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕೆ.ಎನ್.ನಟರಾಜ್(K.N.Nataraj) ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ. ನಟರಾಜ್ ಮತ್ತು ಅವರ ಪತ್ನಿ ಇಬ್ಬರೂ ಪಿಡಿಒಗಳಾಗಿದ್ದು, ಆ.28ರಂದು ದಂಪತಿ ಕೆಲಸಕ್ಕೆ ತೆರಳಿದ್ದರು. ಸಂಜೆ ಅವರ ಮಗಳು ಕರೆ ಮಾಡಿ ಮನೆಯಲ್ಲಿ ಕಳ್ಳತನವಾಗಿರುವ ಕುರಿತು ತಿಳಿಸಿದ್ದರು. ಕೂಡಲೆ ದಂಪತಿ ಮನೆಗೆ ಬಂದು ಪರಿಶೀಲಿಸಿದಾಗ ಮನೆಯ ಬಾಗಿಲಿನ ಬೀಗ ಮುರಿದು ಕಳ್ಳ ಒಳಗೆ ನುಗ್ಗಿದ್ದು, ಬೆಡ್ ರೂಂ(Bedroom)ನಲ್ಲಿದ್ದ ಬೀರು ಒಡೆದು ಕಳ್ಳತನ ಮಾಡಿದ್ದ.
ಬೀರುವಿನಲ್ಲಿದ್ದ 110 ಗ್ರಾಂ ತೂಕದ ಚಿನ್ನದ ಸರ, 69 ಗ್ರಾಂ ತೂಕದ 3 ನೆಕ್ಲೇಸ್‌ಗಳು(Necklace), 240 ಗ್ರಾಂ ತೂಕದ 6 ಬಳೆಗಳು, ಹ್ಯಾಂಗಿಂಗ್ಸ್, ಕಿವಿಯೋಲೆಗಳು, 40 ಗ್ರಾಂ ಹಾಗೂ 16 ಗ್ರಾಂ ತೂಕದ ಉಂಗುರಗಳು, ಬ್ರೇಸ್‌ಲೆಟ್‌ಗಳು(Bracelets), ಚಿನ್ನದ ಗಟ್ಟಿ, ಲಕ್ಷ್ಮಿ ತಾಳಿ ಹಾಗೂ ವಿವಿಧ ಮೌಲ್ಯದ ಚಿನ್ನದ ಸರಗಳು, 500 ಗ್ರಾಂ ಬೆಳ್ಳಿ ವಸ್ತು, 86 ಸಾವಿರ ರೂ. ನಗದು ಹಾಗೂ 15 ಕೈಗಡಿಯಾರಗಳು(Watches) ಸೇರಿ 1,42,29,900 ರೂ. ಮೌಲ್ಯದ 943 ಗ್ರಾಂ ಚಿನ್ನದ ಒಡವೆ ಕಳ್ಳತನವಾಗಿವೆ. ಘಟನೆ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.