ರಿಪ್ಪನ್‌ಪೇಟೆಯ ಶ್ರೀ ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಸಂಘ ಮತ್ತು ಪಾಲಕರ ಸಭೆಯಲ್ಲಿ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿದರು. ಗಣಪತಿ, ಚಂದ್ರಶೇಖರಯ್ಯ, ದಾನೇಶಪ್ಪ, ಚಂದ್ರಪ್ಪ ಇತರರಿದ್ದರು. 
ಶಿವಮೊಗ್ಗ

ಮಕ್ಕಳ ನಡತೆ ಮೇಲಿರಲಿ ಗಮನ

ರಿಪ್ಪನ್‌ಪೇಟೆ: ಪಾಲಕರು ಮಕ್ಕಳ ಮನಸ್ಸು ಅರ್ಥ ಮಾಡಿಕೊಳ್ಳಬೇಕು. ಮಕ್ಕಳ ಭಾವನೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಆನಂದಪುರ ಮುರುಘಾ ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಸಂಘ ಉದ್ಘಾಟನೆ ಹಾಗೂ ಪಾಲಕರ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಪ್ರಜಾಪ್ರಭುತ್ವದ ಆಡಳಿತಾತ್ಮಕ ವಿಷಯಗಳನ್ನು ಬಾಲ್ಯದಲ್ಲೇ ಅರಿತುಕೊಳ್ಳಬೇಕು ಎಂಬ ಉದ್ದೇಶದಿಂದ ಚುನಾವಣೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆಮಾಡಿ ವಿದ್ಯಾರ್ಥಿ ಸಂಘ ರಚಿಸಲಾಗುತ್ತಿದೆ ಎಂದು ತಿಳಿಸಿದರು.
ದೊಡ್ಡ ಕಟ್ಟಡ, ಹೆಚ್ಚಿನ ಡೊನೇಷನ್ ಇದ್ದ ಮಾತ್ರಕ್ಕೆ ಒಳ್ಳೆಯ ಶಾಲೆಯಾಗಲಾರದು. ಗುಣಮಟ್ಟದ ಕಲಿಕೆ, ಸಂಸ್ಕಾರ ನೀಡಿದರೆ ಅದೇ ಉತ್ತಮ ಶಾಲೆ. ಪಾಲಕರು ಶಾಲೆಗಳನ್ನು ಆಯ್ಕೆ ಮಾಡುವಾಗ ಕಾಳಜಿ ವಹಿಸಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕೌಶಲ ಕಲಿಕೆಗೂ ಆದ್ಯತೆ ನೀಡಬೇಕು. ತಾಂತ್ರಿಕ ಕಾಲಕ್ಕೆ ಅನುಗುಣವಾಗಿ ಬದಲಾವಣೆ ಆಗಬೇಕು ಎಂದರು.
ನಿವೃತ್ತ ಡಿಡಿಪಿಐ ಗಣಪತಿ, ಚಂದ್ರಶೇಖರಯ್ಯ, ಚಂದ್ರಪ್ಪ, ದಾನೇಶಪ್ಪ, ವರ್ತೇಶ್, ಮಂಜುನಾಥ್, ಸುಧಾಕರ, ಶಿಕ್ಷಕ ಚಂದ್ರಪ್ಪ, ಶ್ರೀಕಾಂತ್, ಗುರುಪ್ರಕಾಶ್ ಇತರರಿದ್ದರು.