ಸೊರಬ ಎಚ್‌ಪಿಆರ್ ನರ್ಸಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ಶುಶ್ರೂಷಕಿಯರ ದಿನಾಚರಣೆಯನ್ನು ಸಂಸ್ಥೆ ಅಧ್ಯಕ್ಷ ಹರಿಪ್ರಸಾದ್ ರೈ ಉದ್ಘಾಟಿಸಿದರು. ಜಿ.ಭಾಗ್ಯಾ, ಡಾ. ಪ್ರಭು ಸಾಹುಕಾರ್, ಎಚ್.ಕೆ.ಶಿಲ್ಪಾ, ಜ್ಯೋತಿ ಇತರರಿದ್ದರು.
ಸೊರಬ: ಆರೋಗ್ಯ ಕ್ಷೇತ್ರದಲ್ಲಿ ಶುಶ್ರೂಷಕಿಯರ ಕಾಯಕವು ತಾಯಿ ಮಾಡುವಂತಹ ಔದಾರ್ಯದ ಕಾರ್ಯಕ್ಕೆ ಸಮಾನ. ಅವರ ಕರ್ತವ್ಯ ದುಡಿಮೆಗಾಗಿ ಮೀಸಲಾಗದೆ ಸೇವೆಗೆ ಮೀಸಲು ಎಂದು ಭಾವಿಸಬೇಕು ಎಂದು ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಪ್ರಸೂತಿ ತಜ್ಞ ಡಾ. ನಾಗೇಂದ್ರಪ್ಪ ಹೇಳಿದರು.
ಪಟ್ಟಣದ ರಂಗಮಂದಿರದಲ್ಲಿ ಬುಧವಾರ ಎಚ್‌ಪಿಆರ್ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಆ್ಯಂಡ್ ಪ್ಯಾರಾಮೆಡಿಕಲ್ ಕಾಲೇಜ್‌ನಿಂದ ಆಯೋಜಿಸಿದ್ದ ದಾದಿಯರ ದಿನ, ವಿದ್ಯಾರ್ಥಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭಲ್ಲಿ ಮಾತನಾಡಿದರು.
ಫ್ಲಾರೆನ್ಸ್ ನೈಟಿಂಗೇಲ್ ಸೇವೆಯನ್ನು ಪರಿಗಣಿಸಿ ಈ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಅವರು ಪ್ರತಿಯೊಬ್ಬ ದಾದಿಯರಿಗೂ ಮಾದರಿ. ಸರ್ಕಾರದಿಂದ ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಲಾಗುತ್ತಿದೆ. ದಾದಿಯರು ಯಾವುದೇ ಸಮಸ್ಯೆಗಳು ಎದುರಾಗದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಪ್ಯಾರಾಮೆಡಿಕಲ್ ಶಿಕ್ಷಣ ಪಡೆಯಲು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಗರಗಳತ್ತ ತೆರಳಬೇಕಿತ್ತು. ಆದರೆ ಪಟ್ಟಣದಲ್ಲಿ ಕಾಲೇಜು ಆರಂಭವಾಗಿರುವುದು ಹಲವರಿಗೆ ಅನುಕೂಲವಾಗಿದೆ. ದಾದಿಯರಾಗಿ ಹೊರಹೋಗುವವರು ಶಿಸ್ತು, ತಾಳ್ಮೆ, ನಂಬಿಕೆ ಮತ್ತು ಗೌಪ್ಯತೆ ಕಾಪಾಡಿಕೊಳ್ಳಬೇಕು. ರೋಗಿಗಳಲ್ಲಿ ಆತ್ಮಸ್ಥೈರ್ಯ ತುಂಬುವ ವರ್ತನೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ದಾದಿಯರಾಗಿ ಸೇವೆ ಸಲ್ಲಿಸಿದ ಅರುಂಧತಿ, ಜಯಲಕ್ಷ್ಮೀ, ಯಾಲಿಸಮ್ಮ ಸೀಮಾ ನಾಯಕ್, ರಶ್ಮಿ, ಶ್ವೇತಾ ಅವರನ್ನು ಗೌರವಿಸಲಾಯಿತು. ಸಂಸ್ಥೆ ಅಧ್ಯಕ್ಷ ಹರಿಪ್ರಸಾದ್ ರೈ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಚಾರ್ಯೆ ಜಿ.ಭಾಗ್ಯಾ, ಡಾ. ಪ್ರಭು ಸಾಹುಕಾರ್, ಡಾ. ನಾಗರಾಜ್ ನಾಯಕ್, ಡಾ. ಗುಡ್ಡಪ್ಪ, ಡಾ. ಶ್ರೀಕೃಷ್ಣ, ಡಾ. ಹರ್ಷವರ್ಧನ್, ಸಿ.ಕೆ.ಬಲೀಂದ್ರಪ್ಪ, ಎಚ್.ಕೆ.ಶಿಲ್ಪಾ, ಜ್ಯೋತಿ ಇತರರಿದ್ದರು.