ಆನಂದಪುರ ಸಮೀಪದ ಆಚಾಪುರದಲ್ಲಿ ಭತ್ತ ನಾಟಿ ಮಾಡುತ್ತಿರುವುದು.
ಆನಂದಪುರ: ಕಳೆದ ಮೂರು ದಿನಗಳಿಂದ ಸಾಧಾರಣ ಮಳೆಯಾಗಿರುವುದರಿಂದ ಭತ್ತ ನಾಟಿ ಕಾರ್ಯ ಆರಂಭವಾಗಿದೆ. ಸುಮಾರು ಎರಡು ಸಾವಿರ ಎಕರೆ ಇರುವ ಇಲ್ಲಿನ ಗುಂಡಿ ಗದ್ದೆ ಬಯಲು ಪ್ರದೇಶದಲ್ಲಿ ಕೆಲವು ರೈತರು ಸೋಮವಾರ ಭತ್ತದ ನಾಟಿ ಆರಂಭಿಸಿದ್ದಾರೆ.
ಮಳೆ ಕೊರತೆ ನಡುವೆಯೂ ಜೂನ್ ಎರಡನೇ ವಾರದಲ್ಲಿ ರೈತರು ಬೋರ್‌ವೆಲ್, ಕೃಷಿ ಹೊಂಡಗಳ ನೀರಿನಿಂದ ಭತ್ತದ ಬೀಜ ಅಗೆ ಹಾಕಿದ್ದರು. ಟ್ರಾೃಕ್ಟರ್ ಮತ್ತು ಟಿಲ್ಲರ್‌ಗಳ ಮೂಲಕ ಗದ್ದೆ ಹದಗೊಳಿಸಿ ಭತ್ತದ ನಾಟಿ ಆರಂಭಿಸಿದ್ದಾರೆ. ಉಳಿದಂತೆ ಸುತ್ತಮುತ್ತಲ ವಿವಿಧ ಗ್ರಾಮದ ರೈತರು ಈಗ ಭೂಮಿ ಹದಗೊಂಡ ಕಾರಣ ಅಗೆ ಹಾಕುವ ಕಾರ್ಯ ಆರಂಭಿಸಿದ್ದಾರೆ. ಆಗಸ್ಟ್‌ನಲ್ಲಿ ನಾಟಿ ಕಾರ್ಯ ಜೋರಾಗಿ ನಡೆಯಲಿದೆ.
ಕಳೆದ ಮೂರು ದಿನದಿಂದ ಮಳೆ ಜತೆಗೆ ಜೋರಾಗಿ ಗಾಳಿ ಬೀಸುತ್ತಿರುವುದರಿಂದ ಹೆದ್ದಾರಿ, ಜಿಲ್ಲಾ ರಸ್ತೆ ಬದಿಯ ಮರಗಳ ರೆಂಬೆ, ಕೊಂಬೆಗಳು ಮುರಿದು ಬೀಳುತ್ತಿವೆ. ಸ್ಥಳೀಯರು ಕೂಡಲೇ ತೆರವು ಮಾಡುತ್ತಿರುವುದರಿಂದ ಸಂಚಾರ ಯಾವುದೇ ಅಡಚಣೆಯಾಗಿಲ್ಲ. ಆದರೆ ವಿದ್ಯುತ್ ಕಂಬಗಳ ಮೇಲೆ ಒಣಗಿದ ಮರಗಳ ರೆಂಬೆಗಳು ಬಿದ್ದು ಆಗಾಗ್ಗೆ ವಿದ್ಯುತ್ ವ್ಯತ್ಯಯವಾಗುತ್ತಿದೆ.