ಸಾಗರದಲ್ಲಿ ಬ್ಲಾಕ್ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ಸಂಘಟನ್ ಸೃಜನ್ ಕಾರ್ಯಕ್ರಮದಲ್ಲಿ ಎಐಸಿಸಿ ರಾಷ್ಟ್ರೀಯ ವಕ್ತಾರ ಶರತ್ ಕೇರಳ ಮಾತನಾಡಿದರು. ಪ್ರಸನ್ನಕುಮಾರ್, ಕಲಸೆ ಚಂದ್ರಪ್ಪ, ಸುರೇಶಬಾಬು, ಉಷಾ ಇತರರಿದ್ದರು.
ಸಾಗರ: ದೇಶಾದ್ಯಂತ ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸಲು ಎಐಸಿಸಿ ನಿರ್ದೇಶನದಂತೆ ಸಂಘಟನಾ ಸೃಜನ್ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಎಐಸಿಸಿ ರಾಷ್ಟ್ರೀಯ ವಕ್ತಾರ ಶರತ್ ಕೇರಳ ಹೇಳಿದರು.
ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ದ ಸಂಘಟನ್ ಸೃಜನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ 19 ರಾಜ್ಯಗಳಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ ಎಂದರು.
ಕರ್ನಾಟಕ, ಪಶ್ಚಿಮ ಬಂಗಾಳ, ಒಡಿಶಾ, ಉತ್ತರ ಪ್ರದೇಶ ಇನ್ನಿತರೆ ರಾಜ್ಯಗಳಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಅನುಷ್ಠಾನವಾಗುತ್ತಿದೆ. ಎಐಸಿಸಿ ನೀಡಿರುವ ನಿರ್ದೇಶನ ಹಿನ್ನೆಲೆಯಲ್ಲಿ ಅಧ್ಯಕ್ಷರ ಆಯ್ಕೆ ಸಂಬಂಧ ಜಿಲ್ಲೆ, ತಾಲೂಕು, ಹೋಬಳಿ ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಹಾಗೂ ಸಾಮಾಜಿಕ ನ್ಯಾಯದ ಅನುಸಾರ ಪಟ್ಟಿ ತಯಾರಿಸಿ ಎಐಸಿಸಿಗೆ ತಲುಪಿಸಲಾಗುತ್ತದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಪಕ್ಷವನ್ನು ತಳಮಟ್ಟದಿಂದ ಗಟ್ಟಿಗೊಳಿಸಲು ಇಂತಹ ಕಾರ್ಯಕ್ರಮದ ಅಗತ್ಯತೆ ಹೆಚ್ಚು ಇದೆ. ಪಕ್ಷ ಬೆಳವಣಿಗೆ ಆಗಬೇಕಾದರೆ ಕಾರ್ಯಕರ್ತರ ಅಭಿಪ್ರಾಯ ಹಾಗೂ ಪಾಲ್ಗೊಳ್ಳುವಿಕೆ ಅಗತ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ನಾವು ಒಟ್ಟಾಗಿ ಕೆಲಸ ಮಾಡುವ ಕಾಲಘಟ್ಟವಿದು. ನೀವು ನೀಡಿರುವ ಅಭಿಪ್ರಾಯವನ್ನು ಗೌಪ್ಯವಾಗಿಡಲಾಗುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರಸನ್ನಕುಮಾರ್, ಬ್ಲಾಕ್ ಅಧ್ಯಕ್ಷ ಕಲಸೆ ಚಂದ್ರಪ್ಪ, ನಗರ ಅಧ್ಯಕ್ಷ ಸುರೇಶಬಾಬು, ಪ್ರಮುಖರಾದ ಎಲ್.ಚಂದ್ರಪ್ಪ , ನಾಗೇಂದ್ರ, ಉಷಾ, ಪ್ರಭಾವತಿ ಇತರರಿದ್ದರು.