ಸೊರಬದಲ್ಲಿ ಏರ್ಪಡಿಸಿದ್ದ 73ನೇ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಉತ್ತಮ ಸಹಕಾರ ಸಂಘಗಳ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಸಿ.ಹನುಮಂತಪ್ಪ, ಕೆ.ಪಿ.ರುದ್ರಗೌಡ, ಎಂ.ಆರ್.ಅಶೋಕ ಹೆಗಡೆ ಇತರರಿದ್ದರು. 
ಶಿವಮೊಗ್ಗ

ಆರ್ಥಿಕವಾಗಿ ಬಲಗೊಳ್ಳಲು ಸಂಘಟಿತರಾಗಿ

ಸೊರಬ: ಸಹಕಾರ ಕ್ಷೇತ್ರಕ್ಕೆ ಸಹಕಾರಿಗಳು ಅಗತ್ಯ ಬೆಂಬಲ ನೀಡಿದಾಗ ಬಲಗೊಳ್ಳಲು ಸಾಧ್ಯ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಸಿ.ಹನುಮಂತಪ್ಪ ಹೇಳಿದರು.

ಸೊರಬ: ಸಹಕಾರ ಕ್ಷೇತ್ರಕ್ಕೆ ಸಹಕಾರಿಗಳು ಅಗತ್ಯ ಬೆಂಬಲ ನೀಡಿದಾಗ ಬಲಗೊಳ್ಳಲು ಸಾಧ್ಯ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಸಿ.ಹನುಮಂತಪ್ಪ ಹೇಳಿದರು.

ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಹಾಲು ಒಕ್ಕೂಟ, ತಾಲೂಕಿನ ಎಲ್ಲ ಸಹಕಾರ ಸಂಘ ಹಾಗೂ ಬ್ಯಾಂಕ್‌ಗಳ ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ 73ನೇ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವ ಅಗತ್ಯವಿದೆ. ಬದುಕಿನಲ್ಲಿ ಪ್ರತಿ ಹಂತದಲ್ಲೂ ಸಹಕಾರ ಭಾವನೆ ಹೊಂದಿದಾಗ ಆರ್ಥಿಕವಾಗಿ ಬಲಗೊಳ್ಳಲು ಸಾಧ್ಯ ಎಂದು ತಿಳಿಸಿದರು.

ಪ್ರಸ್ತುತ ದಿನಗಳಲ್ಲಿ ಕೃಷಿ ಪತ್ತಿನ ಸಹಕಾರ ಸಂಘಗಳು ಸೇರಿ ಹಾಲು ಉತ್ಪಾದಕರ ಸಂಘಗಳು ಬಲಗೊಳ್ಳದಿದ್ದರೆ ರೈತರು ಆರ್ಥಿಕವಾಗಿ ಸಬಲರಾಗಲು ಸಾಧ್ಯ ಇರಲಿಲ್ಲ. ರೈತರು ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಿದಾಗ ಕುಟುಂಬದ ಆರ್ಥಿಕ ಅಭಿವೃದ್ಧಿ ಸಾಧ್ಯವಿದೆ. ಗ್ರಾಮೀಣ ಭಾಗದಲ್ಲಿ ಸಹಕಾರ ಸಂಘದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದರು.

ಸಹಕಾರ ಸಂಘಗಳು ಬೆಳೆದರೆ ಷೇರುದಾರರಿಗೆ ಲಾಭ ದೊರೆಯಲಿದೆ. ಸಂಘಟನೆಗೆ ಸರ್ಕಾರಗಳು ಕೂಡ ಹೆದರಬಲ್ಲವು. ಒಗ್ಗಟ್ಟಾಗಿ ಒಂದೇ ಮನಸ್ಸಿನಿಂದ ಸಂಘ ಬೆಳೆಸುವಲ್ಲಿ ತೊಡಗಿಸಿಕೊಂಡರೆ ಭವಿಷ್ಯದಲ್ಲಿ ಆರ್ಥಿಕ ಮಟ್ಟ ಸುಧಾರಣೆಗೊಳ್ಳಲು ಸಾಧ್ಯ.

ಅಶೋಕ ನಾಯಕ್, ರಾಜ್ಯ ಅಡಿಕೆ ಬೆಳೆಗಾರರ ಮಾರಾಟ ಮಹಾಮಂಡಳ ಜಿಲ್ಲಾಧ್ಯಕ್ಷ

ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಕೆ.ಪಿ.ರುದ್ರಗೌಡ ಮಾತನಾಡಿ, ಸಹಕಾರ ಸಂಘಗಳ ಬೆಳವಣಿಗೆ ಕುಂಠಿತಗೊಳ್ಳದಂತೆ ಪದಾಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಸಹಕಾರ ಕ್ಷೇತ್ರದ ಮೇಲೆ ನಂಬಿಕೆ ಹೆಚ್ಚಿಸಬೇಕು. ಆಡಳಿತ ಮಂಡಳಿ ದುರುಪಯೋಗ ಹೆಚ್ಚಾಗಿ ಹಲವು ಸಂಘಗಳು ಮುಚ್ಚುವ ಹಂತದಲ್ಲಿವೆ. ಬಡ್ಡಿ ಮತ್ತು ಸಾಲಮನ್ನಾಕ್ಕೆ ಸಂಘಗಳನ್ನು ನಡೆಸಿದರೆ ಯಾವುದೇ ಕಾರಣಕ್ಕೂ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.

ಭಾರತದಲ್ಲಿ ಸಹಕಾರ ಕ್ಷೇತ್ರದ ಬಗ್ಗೆ ಶೇ. 20ರಷ್ಟು ಜನರು ಮಾತ್ರ ಆಸಕ್ತಿ ತೋರುತ್ತಿದ್ದಾರೆ. ಎಲ್ಲ ರೀತಿ ಸಹಕಾರ ಸಂಘಗಳನ್ನು ರಚಿಸಲು ಅವಕಾಶವಿದೆ. 4 ಲಕ್ಷ ರೂ., 200 ಸದಸ್ಯರು ಇದ್ದರೆ ಸಹಕಾರ ಸಂಘ ಸ್ಥಾಪನೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಶ್ರೀನಿವಾಸ್, ಸಹಕಾರ ಸಂಘಗಳ ಸಹಾಯಕ ನಿಬಂಧಕ

ಮಳಲಗದ್ದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಆರ್.ಅಶೋಕ ಹೆಗಡೆ, ಕಾರ್ಯದರ್ಶಿ ವಿನಯ್ ಅವರನ್ನು ಸನ್ಮಾನಿಸಲಾಯಿತು. ಲಾಭಾಂಶ ಗಳಿಸಿ ಅಭಿವೃದ್ಧಿ ಸಾಧಿಸಿರುವ ಸಂಘಗಳ ಪದಾಧಿಕಾರಿಗಳನ್ನು ಗೌರವಿಸಲಾಯಿತು.

ಶಿವಮೊಗ್ಗ ಸಹಕಾರ ಹಾಲು ಒಕ್ಕೂಟದ ನಿರ್ದೇಶಕ ದಯಾನಂದ ಗೌಡ, ಟಿ.ಶಿವಶಂಕರಪ್ಪ, ಜಿಲ್ಲಾ ಸಹಕಾರ ಯೂನಿಯನ್ ಬ್ಯಾಂಕ್ ನಿರ್ದೇಶಕ ಅಶೋಕ ಹೆಗಡೆ, ಲೋಲಾಕ್ಷಮ್ಮ, ವಿಜೇಂದ್ರ, ಶಿವಶಂಕರಪ್ಪ, ಅಶೋಕ್ ನಾಯಕ, ಎಚ್.ಆರ್.ರಾಘವೇಂದ್ರ, ರವೀಂದ್ರ, ನರಸಿಂಹ ಗಂಧದಮನೆ, ಪ್ರಕಾಶ್, ಎಂ.ಡಿ.ಶೇಖರ್, ನಾಗರಾಜ್, ಹರೀಶ್, ಜಯಪ್ಪ, ವಿನಯ್ ಇತರರಿದ್ದರು.