ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಟ್ಟಡ  
ಶಿವಮೊಗ್ಗ

ಬುಕ್ ಮಾಡಿದ್ದೇ ಒಂದು, ಬಂದಿದ್ದೆ ಮತ್ತೊಂದು, ಆನ್‌ಲೈನ್‌ ಡೆಲಿವರಿ ಯಡವಟ್ಟು ! Consumer Commission

ಶಿವಮೊಗ್ಗ: ಗ್ರಾಹಕರು ಆನ್‌ಲೈನ್‌ನಲ್ಲಿ ಬುಕ್ ಮಾಡಿದ ಟಯರ್ ಬದಲಾಗಿ ಬೇರೆ ಮಾದರಿ ಟಯರ್ ಕಳುಹಿಸಿಕೊಟ್ಟು ಸೇವಾನ್ಯೂನ್ಯತೆ ಎಸಗಿದ ಕಾರಣಕ್ಕೆ ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಸಂಸ್ಥೆಗೆ ಆದೇಶಿಸಿದೆ.

ಶಿವಮೊಗ್ಗ: ಗ್ರಾಹಕರು ಆನ್‌ಲೈನ್‌ನಲ್ಲಿ ಬುಕ್ ಮಾಡಿದ ಟಯರ್ ಬದಲಾಗಿ ಬೇರೆ ಮಾದರಿ ಟಯರ್ ಕಳುಹಿಸಿಕೊಟ್ಟು ಸೇವಾನ್ಯೂನ್ಯತೆ ಎಸಗಿದ ಕಾರಣಕ್ಕೆ ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಸಂಸ್ಥೆಗೆ ಆದೇಶಿಸಿದೆ.

ಶಿವಮೊಗ್ಗದ ಸಿ.ಎ.ಮಹಬೂಬ್ ಮುದಾಸಿರ್ ಅವರು 2025ರ ಸೆ.12ರಂದು ಫ್ಲಿಪ್‌ಕಾರ್ಟ್ ಮೂಲಕ 2,211 ರೂ.ನೀಡಿ ಗುಡ್ ಇಯರ್ ಕಿಲ್ಲೆ ಟಯರ್ ಅನ್ನು ಕ್ಯಾಶ್ ಆನ್ ಡೆಲಿವರಿ ಮೂಲಕ ಬುಕ್ ಮಾಡಿದ್ದರು. ಆದರೆ ಸೆ.19ರಂದು ಸಂಸ್ಥೆಯು ಕಡಿಮೆ ಬೆಲೆಯ ಟಯರ್ ತಲುಪಿಸಿತ್ತು.

ಇದನ್ನು ಗಮನಿಸಿದ ಮುದಾಸಿರ್ ಅವರು ತಪ್ಪಾಗಿ ಬಂದ ಟಯರ್ ವಾಪಸ್ ಕಳುಹಿಸಿ ಬುಕ್ ಮಾಡಿದ್ದ ಟಯರ್ ನೀಡುವಂತೆ ಕೋರಿದ್ದರು. ಆದರೆ ಸಂಸ್ಥೆಯವರು ಮತ್ತೆ ಅದೇ ತಪ್ಪಾದ ಟಯರ್ ಅನ್ನೇ ಕಳುಹಿಸಿಕೊಟ್ಟಿದ್ದರು. ಈ ಬಗ್ಗೆ ಇ-ಮೇಲ್ ಹಾಗೂ ಲೀಗಲ್ ನೋಟಿಸ್ ನೀಡಿದರೂ ಸೂಕ್ತ ಸ್ಪಂದನೆ ಸಿಗದಿದ್ದಾಗ ಗ್ರಾಹಕ ಆಯೋಗದ ಮೆಟ್ಟಿಲೇರಿದ್ದರು. ದೂರುದಾರರು ಸಲ್ಲಿಸಿದ ದಾಖಲೆಗಳು ಹಾಗೂ ವಾದ-ವಿವಾದಗಳನ್ನು ಆಯೋಗದ ಅಧ್ಯಕ್ಷ ಟಿ.ಶಿವಣ್ಣ ಹಾಗೂ ಸದಸ್ಯ ಬಿ.ಡಿ.ಯೋಗಾನಂದ ಅವರನ್ನೊಳಗೊಂಡ ಪೀಠ ಆಲಿಸಿತ್ತು.

ಟಯರ್ ಬೆಲೆ 2,211 ರೂ. ಅನ್ನು 2025ರ ಅ.4/ರಿಂದ ಶೇ.9ರ ವಾರ್ಷಿಕ ಬಡ್ಡಿಯೊಂದಿಗೆ ಗ್ರಾಹಕರಿಗೆ ಪಾವತಿಸಬೇಕು. ಸೇವಾ ನ್ಯೂನ್ಯತೆ ಮತ್ತು ಮಾನಸಿಕ ಕಿರುಕುಳಕ್ಕಾಗಿ 25 ಸಾವಿರ ರೂ. ಪರಿಹಾರ ನೀಡಬೇಕು. ದೂರಿನ ಖರ್ಚು ವೆಚ್ಚವಾಗಿ 10 ಸಾವಿರ ರೂ. ಪಾವತಿಸಬೇಕು.ಈ ಆದೇಶವಾದ 45 ದಿನದೊಳಗೆ ಮೊತ್ತವನ್ನು ಪಾವತಿಸತಕ್ಕದ್ದು. ತಪ್ಪಿದ್ದಲ್ಲಿ ಒಟ್ಟು ಮೊತ್ತಕ್ಕೆ ಶೇ.12ರಷ್ಟು ವಾರ್ಷಿಕ ಬಡ್ಡಿಯನ್ನು ಸೇರಿಸಿ ಪೂರ್ಣ ಹಣ ಪಾವತಿಸುವವರೆಗೆ ನೀಡಬೇಕಾಗುತ್ತದೆ ಎಂದು ಆಯೋಗವು ಎಚ್ಚರಿಕೆ ನೀಡಿದೆ.