ಬಿ.ವೈ.ರಾಘವೇಂದ್ರ, ಲೋಕಸಭಾ ಸದಸ್ಯ
- ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಆಕ್ರೋಶ
- ಉದ್ಯೋಗ ಖಾತರಿಗೆ ಕೇಂದ್ರದಿಂದ ಹೊಸ ರೂಪ
- ಜಿ ರಾಮ್ ಜಿ ಬಗ್ಗೆ ಸಂಸದರ ವಿವರಣೆ
ಶಿವಮೊಗ್ಗ: ಕಾಂಗ್ರೆಸ್ (congress) ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ವೇಳೆ 450ಕ್ಕೂ ಹೆಚ್ಚು ಯೋಜನೆ (scheme) ಗಳಿಗೆ ನೆಹರು, ಇಂದಿರಾ, ರಾಜೀವ್ ಗಾಂಧಿ ಹೆಸರನ್ನು ನಾಮಕರಣ ಮಾಡಿತ್ತು. ಆಗ ಕಾಂಗ್ರೆಸ್‌ಗೆ ಗಾಂಧೀಜಿ ನೆನಪಾಗಿರಲಿಲ್ಲ. ಈಗ ಎನ್‌ಡಿಎ (nda) ಸರ್ಕಾರ ಉದ್ಯೋಗಖಾತ್ರಿ ಯೋಜನೆಯಲ್ಲಿ ಗಾಂಧೀಜಿ (gandhiji) ಹೆಸರನ್ನು ತೆಗೆಯಲಾಗಿದೆ ಎಂದು ಬೊಬ್ಬೆ ಹಾಕುತ್ತಿರುವುದು ವಿಪರ್ಯಾಸ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಗೆ ಹೊಸ ರೂಪ ನೀಡುವ ಸಂದರ್ಭದಲ್ಲಿ ವಿಬಿ-ಜಿ ರಾಮ್ ಜಿ ಎಂದಾಗಿದೆ. ಅಲ್ಲಿ ರಾಮನ ಹೆಸರು ಇದೆ ಎಂಬ ಕಾರಣಕ್ಕಾಗಿ ರಾಜಕೀಯ ಲಾಭಕ್ಕಾಗಿ ಯೋಜನೆ ಬಗ್ಗೆ ಕಾಂಗ್ರೆಸ್‌ನವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ವಿಬಿ-ಜಿ ರಾಮ್ ಜಿ ವಿಕಸಿತ ಭಾರತೆದೆಡೆಗೆ ದಿಟ್ಟ ಹೆಜ್ಜೆಯಾಗಿದೆ. ಇದಕ್ಕೆ ಕಾಂಗ್ರೆಸ್‌ನವರು ರಾಜಕೀಯ ಬಣ್ಣ ಬಳಿಯುವುದು ಸಲ್ಲ. ಹಿಂದೆ ಉದ್ಯೋಗ ಖಾತ್ರಿ ಯೋಜನೆಯಲ್ಲಿದ್ದ ಅನೇಕ ಲೋಪದೋಷಗಳನ್ನು ಸರಿಪಡಿಸಿ, ಯೋಜನೆಯನ್ನು ಪರಿಣಾಮಕಾರಿಯಾಗಿ ಮಾಡಿ ಅನುಷ್ಠಾನ ಮಾಡಲಾಗುತ್ತಿದೆ. ಇದನ್ನು ವಿರೋಧಿಸುತ್ತಿರುವುದು ಕಾಂಗ್ರೆಸ್‌ನವರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ ಎಂದರು.
2006ರಲ್ಲಿ ಯುಪಿಎ ಸರ್ಕಾರ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದಾಗ ಅದರಲ್ಲಿ ಗಾಂಧೀಜಿ ಹೆಸರು ಇರಲಿಲ್ಲ. 2009ರ ಚುನಾವಣೆಯಲ್ಲಿ ರಾಜಕೀಯ ಕಾರಣಕ್ಕಾಗಿ ಚುನಾವಣೆ ವೇಳೆ ಯೋಜನೆಗೆ ಗಾಂಧೀಜಿ ಹೆಸರು ಸೇರಿಸಲಾಯಿತು. ಈಗ ಮತ್ತೆ ಕಾಂಗ್ರೆಸ್ ನಾಯಕರಿಗೆ ದಿಢೀರ್ ಆಗಿ ಗಾಂಧೀಜಿ ಮೇಲೆ ಪ್ರೀತಿ ಉಕ್ಕಿ ಬಂದಿದೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಲತೇಶ್, ಹರಿಕೃಷ್ಣ, ಶಿವರಾಜ್, ಪ್ರಮುಖರಾದ ರಾಜೇಶ್ ಕಾಮತ್, ಎ.ಮಂಜುನಾಥ್, ಮಲ್ಲಿಕಾರ್ಜುನ ಹಕ್ರೆ, ಎಸ್.ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿದ್ದರು.
ಒಳ್ಳೆಯ ಅಂಶಗಳ ಅಳವಡಿಕೆ
ವಿಬಿ-ಜಿ ರಾಮ್ ಜಿ ಯೋಜನೆಯಲ್ಲಿ ಅನೇಕ ಒಳ್ಳೆಯ ಅಂಶಗಳನ್ನು ಸೇರಿಸಲಾಗಿದೆ. ಇದರಲ್ಲಿ ಹಿಂದಿನಂತೆ ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲ. ಯಂತ್ರೋಪಕರಣಗಳ ಮಿತಿ ಮೀರಿದ ಬಳಕೆ, ಮಧ್ಯವರ್ತಿಗಳಿಗೆ ಅವಕಾಶವಿಲ್ಲ. ದುಡಿಮೆದಾರರ ಕೈಗೆ ನೇರವಾಗಿ ಹಣ ಸೇರಲಿದೆ. ಕೃಷಿ ಸಂದರ್ಭದಲ್ಲಿ ಕಾರ್ಮಿಕರಿಗೆ 60 ದಿನ ವಿರಾಮ ಕಡ್ಡಾಯಗೊಳಿಸಿರುವುದರಿಂದ ಕೃಷಿ ಕೆಲಸ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಒಂದು ವೇಳೆ ಕೆಲಸ ಸಿಗದಿದ್ದರೆ ಅವರಿಗೆ ನಿರುದ್ಯೋಗ ಭತ್ಯೆ ನೀಡಲಾಗುವುದು. ಕೆಲಸ ಮಾಡುವ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ವಾಸ್ತವದಲ್ಲಿ ಕೆಲಸದ ಅವಧಿ ಹೆಚ್ಚಿಸಲಾಗಿದೆ. ಯಾವುದೇ ಕಾರಣಕ್ಕೂ ಗ್ರಾಪಂ ಅಧಿಕಾರವನ್ನು ಮೊಟಕುಗೊಳಿಸುವುದಿಲ್ಲ ಎಂದು ಬಿ.ವೈ.ರಾಘವೇಂದ್ರ ಸ್ಪಷ್ಟಪಡಿಸಿದರು.
ಎರಡು ವರ್ಷದ ಅವಧಿಯಲ್ಲಿ ಸಂಸದರ ಪ್ರದೇಶಾಭಿವೃದ್ಧಿ ನಿಧಿ ಮೂಲಕ 9.86 ಕೋಟಿ ರೂ. ಅನುದಾನ ಬಂದಿದೆ. 248 ಕಾಮಗಾರಿಗಳು ನಡೆಯುತ್ತಿವೆ. ಈಗಾಗಲೇ 36 ಕಾಮಗಾರಿ ಪೂರ್ಣಗೊಂಡಿವೆ. 3.10 ಕೋಟಿ ಅನುದಾನ ಬಳಕೆಯಾಗಿದೆ. ಕೆಲವು ತಾಂತ್ರಿಕ ಕಾರಣಗಳಿಂದ ಕೆಲ ಕಾಮಗಾರಿಗಳು ವಿಳಂಬವಾಗುತ್ತಿವೆ. ಎಲ್ಲವನ್ನೂ ಪೂರ್ಣಗೊಳಿಸಲಾಗುವುದು.