ನಗರದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ‘ಜಿಲ್ಲಾಮಟ್ಟದ ಯುವ ಸಂಸತ್’ನಲ್ಲಿ ಪ್ರತಿಪಕ್ಷ ನಾಯಕ ತನೂಜ್ ಮಾತನಾಡಿದರು. ಸಭಾಧ್ಯಕ್ಷೆ ಶಿವಮೊಗ್ಗ ಎಟಿಎನ್‌ಸಿ ಕಾಲೇಜಿನ ಎನ್.ಎಸ್.ಅನನ್ಯ, ಉಪ ಸಭಾಪತಿ ಶಿವರಾಜ್, ಡಿಸಿಎಂಗಳಾದ ಸುಭಾಷ್ ನಾಯ್ಕ ಮತ್ತು ಸಿ.ಮಧು, ಗೃಹಮಂತ್ರಿ ನಿರಂಜನ್ ಮತ್ತಿತರರು ಇದ್ದರು.
- ಹಲವು ವಿಚಾರ ಮುಂದಿಟ್ಟುಕೊಂಡು ಆಡಳಿತ ಪಕ್ಷದ ವಿರುದ್ಧ ಮುಗಿಬಿದ್ದ ಪ್ರತಿಪಕ್ಷಗಳ ಸದಸ್ಯರು
- ಮುಖ್ಯಮಂತ್ರಿಯಾದಿಯಾಗಿ ಸರ್ಕಾರದ ಯೋಜನೆ, ನಿರ್ಧಾರಗಳನ್ನು ಸಮರ್ಥಿಸಿಕೊಂಡ ಸಚಿವರು
- ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಆಯೋಜನೆಗೊಂಡಿದ್ದ ಜಿಲ್ಲಾಮಟ್ಟದ ಯುವ ಸಂಸತ್
ಶಿವಮೊಗ್ಗ: ಅಕ್ರಮ ವಲಸಿಗರ ಹಾವಳಿ, ಜಲಜೀವನ್ ಮಿಷನ್(Jaljeevan Mission)ನಲ್ಲಿ ಅಪೂರ್ಣ, ಗೃಹಲಕ್ಷ್ಮೀ ವಿತರಣೆಯಲ್ಲಿ ವಿಳಂಬ, ಸರ್ಕಾರಿ ಹುದ್ದೆಗಳ ಭರ್ತಿಗೆ ಮೀನಾಮೇಷ, ಗ್ಯಾರಂಟಿ ಯೋಜನೆ(Guarantee plan)ಗಳಿಗೆ ಜನರ ಮೇಲೆ ಸಾಲದ ಹೊರೆ, ನಿರುದ್ಯೋಗಿಗಳ ಕೈಸೇರದ ಯುವನಿಧಿ(Yuvanidhi).. ಹೀಗೆ.. ಹತ್ತು ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಆಡಳಿತ ಪಕ್ಷದ ವಿರುದ್ಧ ಪ್ರತಿಪಕ್ಷಗಳ ಸದಸ್ಯರು ಮುಗಿಬಿದ್ದರೆ, ಮುಖ್ಯಮಂತ್ರಿಯಾದಿಯಾಗಿ ಸಚಿವರು ಸರ್ಕಾರದ ಯೋಜನೆ, ನಿರ್ಧಾರಗಳನ್ನು ಸಮರ್ಥಿಸಿಕೊಂಡರು.
ಇದು ನಗರದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಶನಿವಾರ ಮೇರಾ ಯುವ ಭಾರತ್, ವಿಕಸಿತ ಭಾರತ್, ಸಹ್ಯಾದ್ರಿ ವಿಜ್ಞಾನ ಕಾಲೇಜಿ(Sahyadri Science College)ನ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು, ಐಕ್ಯೂಎಸಿ ಹಾಗೂ ಕೇಂದ್ರದ ಯುವ ಮತ್ತು ಕ್ರೀಡಾ ಸಚಿವಾಲಯದಿಂದ ಆಯೋಜನೆಗೊಂಡಿದ್ದ ‘ಜಿಲ್ಲಾಮಟ್ಟದ ಯುವ ಸಂಸತ್(Youth Parliament)’ನಲ್ಲಿ ಪ್ರತಿಪಕ್ಷ ಮತ್ತು ಸರ್ಕಾರದ ನಡುವಿನ ವಾಕ್ಸಮರದ ಝಲಕ್.
ಪ್ರಶ್ನೋತ್ತರ ವೇಳೆ ಆಡಳಿತ ಪಕ್ಷದ ಲೋಪ ಮತ್ತು ನಿರ್ಲಕ್ಷೃದ ವಿರುದ್ಧ ಟೀಕೆಗಳ ಸುರಿಮಳೆಗೈದ ಪ್ರತಿಪಕ್ಷ ಸದಸ್ಯರು ಸರ್ಕಾರವನ್ನು ಆರಂಭದಲ್ಲೇ ಇಕ್ಕಟ್ಟಿಗೆ ಸಿಲುಕಿಸಿದರು. ಕೆಲ ಸಚಿವರು ತಮ್ಮದೇ ಇಲಾಖೆ ಬಗ್ಗೆ ಸಮರ್ಪಕ ಉತ್ತರ ನೀಡದೇ ತಡಬಡಾಯಿಸಿದಾಗ ಸ್ವತಃ ಸಿಎಂ(ಸಿ.ಷಣ್ಮುಖ) ಅವರೇ ಇಲಾಖೆಗಳು ಕೈಗೊಂಡ ಯೋಜನೆಗಳ ಬಗ್ಗೆ ಉತ್ತರ ನೀಡುವ ಮೂಲಕ ಸರ್ಕಾರವನ್ನು ಸಮರ್ಥಿಸಿಕೊಂಡು ಗಮನ ಸೆಳೆದರು.
ಸರ್ಕಾರ ಕೃಷಿ ವಲಯಕ್ಕೆ ಆದ್ಯತೆ ನೀಡಿಲ್ಲ. ಬೆಂಬಲ ಬೆಲೆಗೆ ಕ್ರಮ ವಹಿಸಿಲ್ಲ. ಮಲೆನಾಡು ಸೇರಿ ರಾಜ್ಯದಲ್ಲಿ ಬಗರ್‌ಹುಕುಂ(Bagarhukkum) ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ. ಹೆಣ್ಣು ಮಕ್ಕಳಿಗೆ ಸುರಕ್ಷತೆ ಇಲ್ಲವಾಗಿದೆ. ಯುವ ಸಮೂಹದಲ್ಲೇ ಹೃದಯಾಘಾತ(Heart attack) ಹೆಚ್ಚಳ, ಉಚಿತ ಮತ್ತು ಕಡ್ಡಾಯ ಶಿಕ್ಷಣ ಜಾರಿ, ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟದ ಬಗ್ಗೆ ಪ್ರತಿಪಕ್ಷದ ಸದಸ್ಯರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಶಿವಮೊಗ್ಗ ಎಟಿಎನ್‌ಸಿ(Atnc) ಕಾಲೇಜಿನ ಎನ್.ಎಸ್.ಅನನ್ಯ ಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಶಿವರಾಜ್ (ಉಪ ಸಭಾಪತಿ), ಸುಭಾಷ್ ನಾಯ್ಕ ಮತ್ತು ಸಿ.ಮಧು(ಡಿಸಿಎಂ), ನಿರಂಜನ್ (ಗೃಹಮಂತ್ರಿ) ಮತ್ತಿತರರು ಉಪಸ್ಥಿತರಿದ್ದರು. ಸಹ್ಯಾದ್ರಿ ಕಲಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ, ಪ್ರೊ. ಕೆ.ಪ್ರಸನ್ನಕುಮಾರ್, ಪ್ರಾಧ್ಯಾಪಕ ಡಾ. ಕೆ.ಚಂದ್ರಪ್ಪ, ಹೊನ್ನಾಳಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ. ಬಿ.ಜಿ.ಧನಂಜಯ, ಬೆಂಗಳೂರಿನ ಕಾಸಂಸು, ಸಂಶೋಧನಾ ಮುಖ್ಯಸ್ಥ ಡಾ.ರೇವಯ್ಯ ಒಡೆಯರ್, ಕಲಾವಿದ ಗಣೇಶ್ ಕೆಂಚಿನಾಳ ತೀರ್ಪುಗಾರರಾಗಿದ್ದರು.