ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಬೆಂಬಲಿಸದ ಪ್ರತಿಪಕ್ಷಗಳ ನಡೆ ಖಂಡಿಸಿ ಜೆಡಿಎಸ್‌ನಿಂದ ಹಮ್ಮಿಕೊಡಿದ್ದ ಪ್ರತಿಭಟನೆಯಲ್ಲಿ ಶಾರದಮ್ಮ ಅಪ್ಪಾಜಿ ಮಾತನಾಡಿದರು. ಶಾರದಾ ಪೂರಾನಾಯ್ಕ, ಕೆ.ಬಿ.ಪ್ರಸನ್ನಕುಮಾರ್, ರಾಮಕೃಷ್ಣ, ಗೀತಾ ಸತೀಶ್, ದೀಪಕ್ ಸಿಂಗ್ ಇದ್ದರು. 
ಶಿವಮೊಗ್ಗ

ವಿಪಕ್ಷಗಳ ನಡೆಯಿಂದ ನಾರಿಶಕ್ತಿಗೆ ಹಿನ್ನಡೆ I oppostion moove

ಪ್ರಮುಖ ಮುಖ್ಯಾಂಶಗಳು

  • ಜೆಡಿಎಸ್‌ನಿಂದ ವ್ಯಾಪಕ ಆಕ್ರೋಶ
  • ಶಿವಮೊಗ್ಗದಲ್ಲಿ ಪ್ರತಿಭಟನೆ
ಶಿವಮೊಗ್ಗ: ಮಹಿಳಾ ಮೀಸಲಾತಿ (reservation) ಮಸೂದೆ ಸಂಸತ್‌ನಲ್ಲಿ ಅಂಗೀಕಾರ ಆಗಬಹುದೆಂದು ದೇಶದ ಮಹಿಳೆಯರು ಆಶಾಭಾವನೆ ಹೊಂದಿದ್ದರು. ಆದರೆ ಕಾಂಗ್ರೆಸ್ (congress) ಮತ್ತಿತರ ರಾಜಕೀಯ ಪಕ್ಷಗಳು ಮಸೂದೆ (bill) ಯನ್ನು ಬೆಂಬಲಿಸದೆ ಮಹಿಳೆಯರಿಗೆ ನಿರಾಸೆ ಮಾಡಿವೆ ಎಂದು ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಆಕ್ರೋಶ ವ್ಯಕ್ತಪಡಿಸಿದರು.
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಬೆಂಬಲಿಸದ ರಾಜಕೀಯ ಪಕ್ಷಗಳ ಕ್ರಮ ಖಂಡಿಸಿ ಜೆಡಿಎಸ್‌ನಿಂದ ಮಂಗಳವಾರ ನಗರದಲ್ಲಿ ಏರ್ಪಡಿಸಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ದೇಶದ ರಾಜಕೀಯದಲ್ಲಿ ಮಹಿಳೆಯರು ಶೇ.33ರಷ್ಟು ಮೀಸಲಾತಿ ಪಡೆದು ಕಾರ್ಯನಿರ್ವಹಿಸುವ ಅವಕಾಶವಿತ್ತು. ಆದರೆ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ಅದಕ್ಕೆ ಕಲ್ಲುಹಾಕಿದವು. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಮಹಿಳೆಯರನ್ನು ವೋಟ್‌ಬ್ಯಾಂಕ್‌ಗೆ ಬಳಕೆ ಮಾಡುತ್ತಿವೆಯೇ ಹೊರತು ನಿಜವಾಗಿಯೂ ಮಹಿಳೆಯರ ಬೆಳವಣಿಗೆಗೆ ಸಹಕಾರ ನೀಡುತ್ತಿಲ್ಲ ಎಂದು ದೂರಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿ, ದೇವೇಗೌಡರು ಪ್ರಧಾನಿಯಾಗಿದ್ದಾಗ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವಂತೆ ನೋಡಿಕೊಂಡಿದ್ದರು. ಅನೇಕ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರೇ ಮೇಯರ್, ಉಪಮೇಯರ್ ಆಗಿ ಉತ್ತಮ ಕೆಲಸ ಮಾಡಿದ್ದರು ಎಂದರು.
1971ರಲ್ಲೇ ಕ್ಷೇತ್ರ ಪುನರ್ವಿಂಗಡಣೆಗೆ ಮಸೂದೆ ಅಂಗೀಕಾರವಾಗಿತ್ತು. ಈಗ ಮತ್ತೆ ಪ್ರಧಾನಿ ನರೇಂದ್ರ ಮೋದಿ ನಾರಿಶಕ್ತಿ ಅಧಿನಿಯಮ ಮಸೂದೆ ಮಂಡಿಸುವ ಮೂಲಕ ಮಹಿಳೆಯರಿಗೆ ರಾಜಕೀಯ ಶಕ್ತಿ ತುಂಬುವ ಕೆಲಸವನ್ನು ಮುಂದುವರಿಸಿದ್ದರು. ಪ್ರಸ್ತುತ ಮಸೂದೆಗೆ ಸೋಲಾಗಿರಬಹುದು. ಆದರೆ ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಅಧಿಕಾರ ಹಾಗೂ ಶಕ್ತಿ ನೀಡುವ ಕೆಲಸ ನರೇಂದ್ರ ಮೋದಿ ಅವರಿಂದ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನೆಹರು ರಸ್ತೆಯಲ್ಲಿರುವ ಜೆಡಿಎಸ್ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಶಿವಪ್ಪನಾಯಕ ವೃತ್ತಕ್ಕೆ ತೆರಳಿ ಪ್ರತಿಭಟನೆ ನಡೆಸಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ರಾಮಕೃಷ್ಣ, ನಗರಾಧ್ಯಕ್ಷ ದೀಪಕ್ ಸಿಂಗ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಗೀತಾ ಸತೀಶ್, ಮುಖಂಡರಾದ ಶಾರದಮ್ಮ ಅಪ್ಪಾಜಿ, ನರಸಿಂಹ ಗಂಧದಮನೆ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.