ಬಿ.ವೈ.ರಾಘವೇಂದ್ರ, ಲೋಕಸಭಾ ಸದಸ್ಯ
- ಸಂಸದ ಬಿ.ವೈ.ರಾಘವೇಂದ್ರ ಒತ್ತಾಯ
- ಹೊಳೆಹೊನ್ನೂರು ಭಾಗದಲ್ಲಿ ಅಡಕೆ ತೋಟಗಳ ಹಾನಿ ಪ್ರಕರಣ
ಶಿವಮೊಗ್ಗ: ಬಿರುಗಾಳಿ-ಮಳೆ (rain) ಯಿಂದ ಶಿವಮೊಗ್ಗ ಹಾಗೂ ಭದ್ರಾವತಿ ಗ್ರಾಮಾಂತರ ಭಾಗದಲ್ಲಿ ಅಡಿಕೆ ತೋಟಗಳಿಗೆ ವ್ಯಾಪಕ ಹಾನಿಯಾಗಿದೆ. ಸಾವಿರಾರು ಅಡಿಕೆ ಮರಗಳು (trees) ಧರೆಗುರುಳಿವೆ. ನಷ್ಟ ಅನುಭವಿಸಿದ ರೈತರಿಗೆ ವಿಶೇಷ ಪ್ಯಾಕೇಜ್ (package) ಘೋಷಿಸಿ ಹೆಕ್ಟೇರ್‌ಗೆ ಒಂದು ಲಕ್ಷ ರೂ. ಪರಿಹಾರ ನೀಡಬೇಕೆಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಾನು ಸ್ವತಃ ಆ ತೋಟಗಳನ್ನು ಪರಿಶೀಲಿಸಿದ್ದೇನೆ. ಮಾಜಿ ಶಾಸಕ ಕೆ.ಬಿ.ಅಶೋಕ ನಾಯ್ಕ ನೇತೃತ್ವದಲ್ಲಿ ಬಿಜೆಪಿ ಪ್ರಮುಖರು ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದಾರೆ. 10 ಸಾವಿರ ಹೆಕ್ಟೇರ್ ಪ್ರದೇಶದ ಪೈಕಿ ಸುಮಾರು ಆರು ಸಾವಿರ ಹೆಕ್ಟೇರ್‌ನಲ್ಲಿ ಮರಗಳು ನೆಲಕ್ಕುರುಳಿವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎನ್‌ಡಿಆರ್‌ಎಫ್ (ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ) ಹಾಗೂ ಎಸ್‌ಡಿಆರ್‌ಎಫ್ (ರಾಜ್ಯ ವಿಪತ್ತು ಪರಿಹಾರ ನಿಧಿ) ಮೂಲಕ ಈಗಿರುವ ಕಾಯ್ದೆ ಪ್ರಕಾರ ಹೆಕ್ಟೇರ್‌ಗೆ 31 ಸಾವಿರ ರೂ. ಪರಿಹಾರ ನೀಡಲು ಅವಕಾಶವಿದೆ. ಇದರಲ್ಲಿ ಕೇಂದ್ರ ಸರ್ಕಾರದ ಪಾಲು ಶೇ.75 ಹಾಗೂ ರಾಜ್ಯ ಸರ್ಕಾರದ ಪಾಲು ಶೇ.25 ಆಗಿರುತ್ತದೆ. ರೈತರಿಗೆ ಆಗಿರುವ ನಷ್ಟಕ್ಕೆ ಇದು ಯಾವುದಕ್ಕೂ ಸಾಲುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಹೊಳೆಹೊನ್ನೂರು ಮತ್ತು ಹಾರನಹಳ್ಳಿ ಹೋಬಳಿಗಳಲ್ಲಿ ಹೆಚ್ಚಿನ ಹಾನಿ ಉಂಟಾಗಿದೆ. ಹೊಳೆಹೊನ್ನೂರು ಹೋಬಳಿಯಲ್ಲಿ 50ಕ್ಕೂ ಹೆಚ್ಚು ಗ್ರಾಮಗಳ ಅಡಿಕೆ ತೋಟ, ಮನೆಗಳಿಗೆ ಗಾಳಿ ಮಳೆಯಿಂದ ಹಾನಿಯಾಗಿದೆ. ಶಿವಮೊಗ್ಗ ತಾಲೂಕಿನ ಹೊಳಲೂರು, ಹಾರನಹಳ್ಳಿ ಹೋಬಳಿಯ 25ಕ್ಕೂ ಹೆಚ್ಚು ಗ್ರಾಮಗಳಲ್ಲಿ ಹಾನಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಮಾಜಿ ಶಾಸಕ ಕೆ.ಬಿ.ಅಶೋಕ ನಾಯ್ಕ, ಪ್ರಮುಖರಾದ ಎಸ್.ದತ್ತಾತ್ರಿ, ಮಾಲತೇಶ್, ಸುರೇಖಾ ಮುರಳೀಧರ್, ರಾಜೇಶ್ ಕಾಮತ್, ಚಂದ್ರಶೇಖರ್, ಎಂ.ಬಿ.ಹರಿಕೃಷ್ಣ, ಎಸ್.ಎಸ್.ಜ್ಯೋತಿಪ್ರಕಾಶ್, ಶಾಂತಾ ಸುರೇಂದ್ರ ಮುಂತಾದವರು ಉಪಸ್ಥಿತರಿದ್ದರು.
ಮನೆ ಹಾನಿಗೆ ಪರಿಹಾರ ಹೆಚ್ಚಿಸಿ
ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಮನೆ ಹಾನಿಗೆ 1.25 ಲಕ್ಷ ರೂ. ಪರಿಹಾರ ನೀಡಲು ಅವಕಾಶವಿದೆ. ಆದರೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಅದನ್ನು 5 ಲಕ್ಷ ರೂ.ಗೆ ಏರಿಸಿದ್ದರು. ವ್ಯತ್ಯಾಸ ಮೊತ್ತವನ್ನು ರಾಜ್ಯ ಸರ್ಕಾರದಿಂದಲೇ ಭರಿಸಿದ್ದರು. ಈಗಲೂ ರಾಜ್ಯ ಸರ್ಕಾರ ಅಂತಹ ದಿಟ್ಟತನವನ್ನು ಪ್ರದರ್ಶಿಸಬೇಕು. ಹೆಚ್ಚಿನ ಪರಿಹಾರ ನೀಡಿದರೆ ರಾಜ್ಯ ಸರ್ಕಾರಕ್ಕೆ ದೊಡ್ಡ ಮಟ್ಟದ ಆರ್ಥಿಕ ಹೊರೆ ಉಂಟಾಗುವುದಿಲ್ಲ ಎಂದು ಬಿ.ವೈ.ರಾಘವೇಂದ್ರ ಅಭಿಪ್ರಾಯಪಟ್ಟರು.
ವಿಮೆ ಮಾರ್ಗಸೂಚಿ ಬದಲಾಗಲಿ
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಮಾರ್ಗಸೂಚಿ ಸಮರ್ಪಕವಾಗಿಲ್ಲ. ಇದೇ ಕಾರಣದಿಂದ ಹೊಳೆಹೊನ್ನೂರು ಭಾಗದಲ್ಲಿ ಅಡಿಕೆ ಮರಗಳನ್ನು ಕಳೆದುಕೊಂಡ ರೈತರಿಗೆ ಸರಿಯಾದ ಪರಿಹಾರ ಸಿಗದಂತಾಗಿದೆ. ಈಗಿರುವ ಮಾರ್ಗಸೂಚಿಯಂತೆ ಏಪ್ರಿಲ್‌ನಲ್ಲಿ ಉಷ್ಣಾಂಶ ಹೆಚ್ಚಳವಾದರೆ ಮಾತ್ರ ಪರಿಹಾರ ಸಿಗುತ್ತದೆ. ಆಲಿಕಲ್ಲು ಮಳೆ, ಅಕಾಲಿಕ ಮಳೆ, ಗಾಳಿಯಿಂದ ನಷ್ಟವಾದರೆ ಪರಿಹಾರ ಸಿಗುವುದಿಲ್ಲ ಎಂದು ಬಿ.ವೈ.ರಾಘವೇಂದ್ರ ಹೇಳಿದರು. ಫಸಲ್ ಭಿಮಾ ಯೋಜನೆಯ ಮಾರ್ಗಸೂಚಿ ಬದಲಾವಣೆಗೆ ಸೂಕ್ತ ಸಲಹೆ ನೀಡುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ. ಒಂದು ವೇಳೆ ಮಾರ್ಗಸೂಚಿಯಂತೆ ಬದಲಾವಣೆಯಾದರೆ ರೈತರು ತುಸು ಹೆಚ್ಚಿನ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಅದನ್ನು ರೈತರ ಮೇಲೆ ಹೊರಿಸದೆ ಸರ್ಕಾರವೇ ಭರಿಸಬಹುದು. ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು ಎಂದು ಅಭಿಪ್ರಾಯಪಟ್ಟರು.
ಧರೆಗುರುಳಿದ ಅಡಿಕೆ ಮರಗಳನ್ನು ನೋಡಿದರೆ ಯುದ್ಧ ಭೂಮಿಯಲ್ಲಿ ಹೆಣಗಳ ರಾಶಿಯಂತೆ ಗೋಚರವಾಗುತ್ತಿವೆ. 350-400 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಮನೆಯ ಹೆಂಚುಗಳು, ತಗಡಿನ ಶೀಟುಗಳು ಹಾರಿಹೋಗಿವೆ. 10-20 ವರ್ಷ ಕಷ್ಟಪಟ್ಟು ಬೆಳೆಸಿದ ಅಡಿಕೆ ಮರಗಳನ್ನು ಕಳೆದುಕೊಂಡು ಬೆಳೆಗಾರ ಕಂಗಾಲಾಗಿದ್ದಾನೆ.