ಶಿವಮೊಗ್ಗ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಮೆಡಿಕಲ್‌ಗಳನ್ನು ಬಂದ್ ಮಾಡಿ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಎಸ್.ಪಿ.ಮಧುಕರ್, ಇ.ಜಿ.ವೆಂಕಟೇಶ್, ಎಂ.ಎಲ್.ಮಂಜುನಾಥ್, ಎಸ್.ಚಂದ್ರಶೇಖರ್, ವಿವೇಕಾನಂದ ನಾಯಕ್, ಎಂ.ಶಂಕರ್, ಗಜಾನನ ಹೆಗಡೆ ಇತರರಿದ್ದರು.
- ಆನ್‌ಲೈನ್ ಔಷಧ ಮಾರಾಟ ರದ್ದುಪಡಿಸುವಂತೆ ಒತ್ತಾಯ
- ನಕಲಿ ಮೆಡಿಸಿನ್ ಮಾರುಕಟ್ಟೆ ಪ್ರವೇಶಿಸುವ ಆತಂಕ
- ಶಿವಮೊಗ್ಗ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದಿಂದ ಪ್ರತಿಭಟನೆ
ಶಿವಮೊಗ್ಗ: ಆನ್‌ಲೈನ್(Online) ಮೂಲಕ ಔಷಧ ಮಾರಾಟದಿಂದ ಶೆಡ್ಯೂಲ್‌ಗಳ ದುರ್ಬಳಕೆ ಆಗುವುದನ್ನು ತಡೆಯುವಂತೆ ಒತ್ತಾಯಿಸಿ ಶಿವಮೊಗ್ಗ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಮೆಡಿಕಲ್(Medical)ಗಳನ್ನು ಬಂದ್ ಮಾಡಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಆನ್‌ಲೈನ್ ಇ-ಫಾರ್ಮಸಿಗಳು(E-Pharmacies) ಮತ್ತು ಕ್ವಿಕ್ ಕಾಮರ್ಸ್ ಆ್ಯಪ್(Quick Commerce App)ಗಳ ಮೂಲಕ ಕಾನೂನುಬಾಹಿರವಾಗಿ ಔಷಧ ಮಾರಾಟ ಮಾಡಲಾಗುತ್ತಿದೆ. ಅದನ್ನು ತಡೆಯಬೇಕು ಎಂದು ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ ಆ್ಯಂಡ್ ಟ್ರಗ್ಗಿಸ್ಟ್(ಎಐಒಸಿಡಿ) ಸಂಸ್ಥೆಯ ಕರೆ ಮೇರೆಗೆ ಜಿಲ್ಲಾದ್ಯಂತ ಒಂದು ದಿನ ಮೆಡಿಕಲ್‌ಗಳನ್ನು ಸ್ಥಗಿತಗೊಳಿಸಿ ಮುಷ್ಕರಕ್ಕೆ ಕೈಜೋಡಿಸಿದರು.
ಆನ್‌ಲೈನ್‌ನಲ್ಲಿ ನೀಡಲಾಗುವ ಭಾರಿ ರಿಯಾಯಿತಿ ಹಿನ್ನೆಲೆಯಲ್ಲಿ ಗುಣಮಟ್ಟವಿಲ್ಲದ ಹಾಗೂ ನಕಲಿ ಔಷಧಗಳು(Counterfeit medicines) ಸುಲಭವಾಗಿ ಮಾರುಕಟ್ಟೆ ಪ್ರವೇಶಿಸುತ್ತಿವೆ. ಇದು ಸಾರ್ವಜನಿಕರ ಆರೋಗ್ಯಕ್ಕೆ ಮಾರಕ. ಆನ್‌ಲೈನ್‌ನಲ್ಲಿ ಮಾರಾಟವನ್ನು ತಕ್ಷಣದಿಂದಲೇ ಸಂಪೂರ್ಣ ನಿಲ್ಲಿಸಬೇಕು. ಕಾರ್ಪೋರೇಟ್ ಮೆಡಿಕಲ್ ಶಾಪ್‌ಗಳು ಹಾಗೂ ಆನ್‌ಲೈನ್ ನೆಟ್‌ವರ್ಕ್‌ಗಳು ನೀಡುತ್ತಿರುವ ಭಾರಿ ರಿಯಾಯಿತಿಯಿಂದ ಸಾಂಪ್ರದಾಯಿಕ ಮತ್ತು ಸ್ಥಳೀಯ ಔಷಧ ವ್ಯಾಪಾರಿಗಳ ವ್ಯವಹಾರಕ್ಕೆ ಧಕ್ಕೆಯಾಗಿದೆ ಎಂದು ದೂರಿದರು.
ಆನ್‌ಲೈನ್‌ನಲ್ಲಿ ಕೃತಕ ಬುದ್ಧಿಮತ್ತೆ (ಎಐ)(Artificial Intelligence) ಬಳಸಿ ನಕಲಿ ಪ್ರಿಸ್ಕ್ರಿಪ್ಷೆನ್(ಸಲಹಾ ಚೀಟಿ)ಗಳನ್ನು ಬಳಸಬಹುದು. ಅಲ್ಲದೆ ಅಸುರಕ್ಷಿತ ಔಷಧಗಳ ಬಳಕೆ ಸಾಧ್ಯತೆಯೂ ಹೆಚ್ಚಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಅನೇಕ ಬಾರಿ ಮನವಿ ಸಲ್ಲಿಸಿದ್ದು, ಅಲ್ಲಿಂದ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿಲ್ಲ. ಹಾಗಾಗಿ 2018ರ ಆ.20ರ ಜಿಎಸ್‌ಆರ್ 817 ಆದೇಶವನ್ನು ಹಿಂತೆಗೆದುಕೊಳ್ಳಬೇಕು ಮತ್ತು 2020ರ ಮಾ.26ರ ಜಿಎಸ್‌ಆರ್-220 ಆದೇಶ ರದ್ದುಪಡಿಸಬೇಕು ಎಂದು ಆಗ್ರಹಿಸಿ ಎಡಿಸಿ ವಿ.ಅಭಿಷೇಕ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾಧ್ಯಕ್ಷ ಎಸ್.ಪಿ.ಮಧುಕರ್, ಜಿಲ್ಲಾ ಕಾರ್ಯದರ್ಶಿ ಇ.ಜಿ.ವೆಂಕಟೇಶ್, ಜಂಟಿ ಕಾರ್ಯದರ್ಶಿ ಎಂ.ಎಲ್.ಮಂಜುನಾಥ್, ನಿಕಟಪೂರ್ವ ಕಾರ್ಯದರ್ಶಿ ಎಸ್.ಚಂದ್ರಶೇಖರ್, ಪದಾಧಿಕಾರಿಗಳಾದ ವಿವೇಕಾನಂದ ನಾಯಕ್, ಎಂ.ಶಂಕರ್, ಗಜಾನನ ಹೆಗಡೆ, ಮಹಮ್ಮದ್ ಕೈಮ್, ರಮೇಶ್, ಪ್ರಕಾಶ್, ಭವಾನಿ, ಉಮೇಶ್, ಸತೀಶ್, ಅನಿಲ್ ಇತರರಿದ್ದರು.
ಜಿಲ್ಲಾದ್ಯಂತ ಮೆಡಿಕಲ್ಸ್ ಬಂದ್
ಜಿಲ್ಲೆಯಲ್ಲಿ ಸುಮಾರು ಒಂದೂವರೆ ಸಾವಿರ ಮೆಡಿಕಲ್ ಶಾಪ್‌ಗಳಿವೆ. ಈ ಪೈಕಿ ಸುಮಾರು 600 ಮೆಡಿಕಲ್ ಶಾಪ್‌ಗಳು ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿವೆ. ದೇಶಾದ್ಯಂತ ಮುಷ್ಕರದ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವು ಮೆಡಿಕಲ್ ಶಾಪ್‌ಗಳನ್ನು ಬಂದ್ ಮಾಡಲಾಗಿತ್ತು. ಎಲ್ಲ ತಾಲೂಕುಗಳಲ್ಲಿ ಮೆಡಿಕಲ್ ಶಾಪ್‌ಗಳನ್ನು ಬಂದ್ ಮಾಡಿ ಮಾಲೀಕರು ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಜನೌಷಧ ಕೇಂದ್ರಗಳು ಹಾಗೂ ಆಸ್ಪತ್ರೆಗಳಲ್ಲಿರುವ ಮೆಡಿಕಲ್ ಶಾಪ್‌ಗಳು ಕಾರ್ಯನಿರ್ವಹಿಸಿದವು.