ತನ್ವಿಕಾ ಹಾಗೂ ಸಾನ್ವಿಕಾ ಪತ್ತೆಗೆ ಅಗ್ನಿಶಾಮಕ ದಳ ಸಿಬ್ಬಂದಿ ಮಂಗಳವಾರ ಶೋಧಕಾರ್ಯ ನಡೆಸಿದರು.
- ಜೀವ ಉಳಿಸಿದ ಸ್ಥಳದಲ್ಲಿದ್ದ ಯುವಕರು
- ಮತ್ತಿಬ್ಬರಿಗಾಗಿ ಮುಂದುವರಿದ ಶೋಧ
- ಗಂಡ-ಹೆಂಡತಿ ಜಗಳದಿಂದ ಆತ್ಮಹತ್ಯೆ ಪ್ರಯತ್ನ
ಶಿವಮೊಗ್ಗ: ಆತ್ಮಹತ್ಯೆಗಾಗಿ (suicide) ತುಂಗಾ ನದಿಗೆ ಹಾರಿ ಅದೃಷ್ಟವಶಾತ್ ಬದುಕಿಳಿದ ತಾಯಿ (mother) ಈಗ ತನ್ನ ಇಬ್ಬರು ಮಕ್ಕಳಿಗಾಗಿ (childrens) ಪರಿತಪಿಸುತ್ತಿದ್ದಾಳೆ.
ಸೋಮವಾರ ರಾತ್ರಿ ನಗರದ ಹೊಳೆ ಬಸ್ ನಿಲ್ದಾಣದ ಸಮೀಪ ರೈಲ್ವೆ ಹಳಿ ಮೇಲಿಂದ ಇಬ್ಬರು ಮಕ್ಕಳನ್ನು ತುಂಗಾ ನದಿಗೆ ತಳ್ಳಿ ಇನ್ನೊಂದು ಮಗುವಿನೊಂದಿಗೆ ತಾನೂ ನದಿಗೆ ಹಾರಿದ ಭವಾನಿ ಎಂಬ ಮಹಿಳೆ ಬದುಕುಳಿದಿದ್ದು, ಈಗ ಮಕ್ಕಳನ್ನು ಕಳೆದುಕೊಂಡು ಸಂಕಟ ಪಡುತ್ತಿದ್ದಾಳೆ. ಇನ್ನೊಂದೆಡೆ ಇಬ್ಬರು ಮಕ್ಕಳ ಮೃತದೇಹಕ್ಕಾಗಿ ಮಂಗಳವಾರ ದಿನವಿಡೀ ನಡೆಸಿದ ಶೋಧ ಕಾರ್ಯ ಯಾವುದೇ ಫಲ ನೀಡಿಲ್ಲ.
ಚಿತ್ರದುರ್ಗ ಜಿಲ್ಲೆ ಹೊಸೂರಿನ ಭವಾನಿ ಎಂಬ ಮಹಿಳೆ ಸೋಮವಾರ ಸಂಜೆ ತನ್ನಿಬ್ಬರು ಪುತ್ರಿಯರಾದ ಸಾನ್ವಿಕಾ(6), ತನ್ವಿಕಾ(4) ಅವರನ್ನು ನದಿಗೆ ತಳ್ಳಿ 11 ತಿಂಗಳ ಮಗನನ್ನು ಎದೆಗೆ ಅವುಚಿಕೊಂಡು ನದಿಗೆ ಹಾರಿದ್ದಳು. ಸ್ಥಳದಲ್ಲಿದ್ದ ಯುವಕರು ಭವಾನಿ ಹಾಗೂ 11 ತಿಂಗಳ ಮಗುವನ್ನು ರಕ್ಷಿಸಿದ್ದರು. ಆಕೆ ಮೆಗ್ಗಾನ್‌ನಲ್ಲಿ ಚಿಕಿತ್ಸೆ ಪಡೆದು ಕೊಂಚ ಚೇತರಿಸಿಕೊಂಡಿದ್ದು, ಈಗ ಸಾನ್ವಿಕಾ ಹಾಗೂ ತನ್ವಿಕಾಗೆ ಪರಿತಪಿಸುತ್ತಿದ್ದಾಳೆ.
ಸೋಮವಾರ ಸಂಜೆ ಘಟನೆ ನಡೆದ ಕಾರಣ ಇಬ್ಬರು ಮಕ್ಕಳ ಶೋಧ ಕಾರ್ಯ ನಡೆಸಲು ಸಾಧ್ಯವಾಗಿರಲಿಲ್ಲ. ಮಂಗಳವಾರ ಅಗ್ನಿ ಶಾಮಕ ದಳದ ಸಿಬ್ಬಂದಿ ಕೆಲವು ಕಿಮೀವರೆಗೆ ನೀರಿನಲ್ಲಿ ಶೋಧ ನಡೆಸಿದರೂ ಮಕ್ಕಳು ಪತ್ತೆಯಾಗಲಿಲ್ಲ.
ನಾಲ್ಕು ತಿಂಗಳ ಹಿಂದೆ ಬಂದಿದ್ದರು
ಜೆಸಿಬಿ ಮತ್ತು ಲಾರಿ ಡ್ರೈವರ್ ಆಗಿದ್ದ ದುಗ್ಗಪ್ಪ, ಪತ್ನಿ ಭವಾನಿಯೊಂದಿಗೆ ಕುಟುಂಬ ಸಮೇತ ನಾಲ್ಕು ತಿಂಗಳ ಹಿಂದೆ ಶಿವಮೊಗ್ಗ ಬಂದಿದ್ದ. ಇಲ್ಲಿ ಬಾಡಿಗೆ ಮನೆಯಲ್ಲಿ ಕುಟುಂಬ ವಾಸವಿತ್ತು. ಆತ ನ್ಯಾಮತಿ ತಾಲೂಕಿನ ಸವಳಂಗದಲ್ಲಿ ಕೆಲಸ ಮಾಡುತ್ತಿದ್ದ. ಭವಾನಿ ಹಾಗೂ ದುಗ್ಗಪ್ಪ ನಡುವೆ ಸಣ್ಣ ಜಗಳವಾಗಿತ್ತು. ಇದರಿಂದ ಬೇಸರಗೊಂಡು ಭವಾನಿ ಮಕ್ಕಳೊಂದಿಗೆ ಆತ್ಮಹತ್ಯೆ ನಿರ್ಧಾರ ಮಾಡಿದ್ದಳು.
ಸೋಮವಾರ ರಾತ್ರಿ 7.15ರ ಸುಮಾರಿಗೆ ಮಹಿಳೆ ಮೂರು ಮಕ್ಕಳೊಂದಿಗೆ ತುಂಗಾ ನದಿಗೆ ಹಾರಿದ್ದನ್ನು ಸ್ಥಳೀಯರಾದ ದಾದಾಪೀರ್ ಹಾಗೂ ನವೀನ್ ಗಮನಿಸಿದ್ದಾರೆ. ಕೂಡಲೇ ತಾವೂ ನದಿಗೆ ಜಿಗಿದಿದ್ದಾರೆ. ಉಕ್ಕಿ ಹರಿಯುವ ತುಂಗೆಯನ್ನೂ ಲೆಕ್ಕಿಸದೆ ತಾಯಿ ಹಾಗೂ 11 ತಿಂಗಳ ಮಗುವನ್ನು ರಕ್ಷಿಸಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಆದರೆ ಇನ್ನಿಬ್ಬರು ಮಕ್ಕಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂಬ ಕೊರಗು ಇವರನ್ನು ಕಾಡುತ್ತಿದೆ.