ರಿಪ್ಪನ್‌ಪೇಟೆ ಸಮೀಪ ಹಿರೇಮೈತಿಯಲ್ಲಿ ತಾಲೂಕು ಕುಂಬಾರ ಸಮಾವೇಶವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. ಶೇಖರಪ್ಪ, ಕಲಗೋಡು ರತ್ನಾಕರ್, ಪುಟ್ಟಸ್ವಾಮಿ ಇತರರಿದ್ದರು.
ರಿಪ್ಪನ್‌ಪೇಟೆ: ಹೊಸನಗರ ತಾಲೂಕಿನ ಕುಂಬಾರ ಸಮಾಜದವರ ಶ್ರೇಯೋಭಿವೃದ್ಧಿಗಾಗಿ ಸರ್ಕಾರದಿಂದ ಒಂದು ಎಕರೆ ಜಾಗ ಮಂಜೂರು ಮಾಡಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಚಿಕ್ಕಜೇನಿ ಗ್ರಾಪಂ ವ್ಯಾಪ್ತಿ ಹಿರೇಮೈತಿ ಗ್ರಾಮದಲ್ಲಿ ಆಯೋಜಿಸಿದ್ದ ಹೊಸನಗರ ತಾಲೂಕು ಕುಂಬಾರ ಸಮಾಜದ ಸಮಾವೇಶ ಉದ್ಘಾಟಿಸಿ ಮಾತನಾಡಿ, ಬದಲಾದ ಕಾಲಘಟ್ಟದಲ್ಲಿ ಜೀವನಕ್ಕೆ ಆಸರೆಯಾಗಿದ್ದ ಸಾಂಪ್ರದಾಯಿಕ ಕುಂಬಾರಿಕೆ ನೇಪತ್ಯಕ್ಕೆ ಸರಿದಿದೆ. ಬದುಕಿಗಾಗಿ ಕೃಷಿ ಚಟುವಟಿಕೆಯೊಂದಿಗೆ ಜನರು ಬೇರೆ ಬೇರೆ ಮಾರ್ಗಗಳನ್ನು ಹುಡುಕಿಕೊಂಡಿದ್ದಾರೆ ಎಂದರು.
ಸಣ್ಣ ಜನಾಂಗವಾಗಿದ್ದರೂ ಕೌಶಲದಲ್ಲಿ ನಿಪುಣರಾಗಿದ್ದಾರೆ. ಇವರ ಕಲೆ ನಶಿಸಬಾರದು. ಬದಲಾದ ತಂತ್ರಜ್ಞಾನ ಅಳವಡಿಸಿಕೊಂಡು ಆಕರ್ಷಣೀಯ ವಸ್ತು ತಯಾರಿಕೆ ಮಾಡುವತ್ತ ಗಮನಹರಿಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಬೇರೆ ಬೇರೆ ಔದ್ಯೋಗಿಕ ಕ್ಷೇತ್ರಗಳನ್ನು ಆಯ್ಕೆಮಾಡಿಕೊಂಡು ದುಡಿಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಕುಂಬಾರರು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತೆ ಆಗಬೇಕು. ಸಂಘಟಿತರಾದರೆ ಸಮುದಾಯ ಬಲಿಷ್ಠ ಆಗುತ್ತದೆ. ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆ ನಡೆಸಲು ಒಂದು ಸ್ಥಳಾವಕಾಶ ಅಗತ್ಯವಿದೆ. ಬೇಡಿಕೆಯಂತೆ ಸೂಕ್ತ ಪ್ರದೇಶದಲ್ಲಿ ಜಾಗ ಮಂಜೂರು ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.
ಸಮುದಾಯದ ಹಿರಿಯರು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಮಾಜಿ ಶಾಸಕ ಹರತಾಳು ಹಾಲಪ್ಪ, ತಾಲೂಕು ಕುಂಬಾರ ಸಂಘದ ಅಧ್ಯಕ್ಷ ಶೇಖರಪ್ಪ, ಗೌರವಾಧ್ಯಕ್ಷ ಸಳ್ಳಿ ಪುಟ್ಟಸ್ವಾಮಿ, ಮುಖಂಡರಾದ ಚಂದ್ರಮೌಳಿ, ಕಲಗೋಡು ರತ್ನಾಕರ, ವೆಂಕಟಾಚಲ, ಎನ್.ಪಿ.ರಾಜು, ಭದ್ರಪ್ಪ ಗೌಡ, ಕೆ.ಆರ್.ರವಿ ಇತರರಿದ್ದರು.