ಕುವೆಂಪು ವಿವಿ ಕುಲಪತಿ ಕಚೇರಿ ಎದುರಿನ ಹೂವಿನ ಕುಂಡಗಳನ್ನು ಪುಡಿ ಮಾಡಿರುವುದು. 
ಶಿವಮೊಗ್ಗ

ಕುವೆಂಪು ವಿವಿಯಲ್ಲಿ ಎನ್‌ಎಸ್‌ಯುಐ ಕಾರ್ಯಕರ್ತರ ಆಕ್ರೋಶ | NSUI protest

ಪ್ರಮುಖ ಮುಖ್ಯಾಂಶಗಳು

  • ಫಲಿತಾಂಶ ಪ್ರಕಟಿಸಲು ವಿಳಂಬ ನೀತಿ ಹಿನ್ನೆಲೆಯಲ್ಲಿ ಪ್ರತಿಭಟನೆ
  • ಕುವೆಂಪು ವಿವಿ ಕುಲಪತಿ ಕಚೇರಿ ಪೀಠೋಪಕರಣ ಧ್ವಂಸ
  • ವಿವಿಯ ಆಂತರಿಕ ಕಲಹದಿಂದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯ(Kuvempu University)ದಲ್ಲಿ ನಿರಂತರವಾಗಿ ನಡೆಯುತ್ತಿರುವ ವಿದ್ಯಾರ್ಥಿ ವಿರೋಧಿ ಧೋರಣೆ ಹಾಗೂ ಆಡಳಿತಾತ್ಮಕ ವೈಫಲ್ಯಗಳನ್ನು ಖಂಡಿಸಿ ಬುಧವಾರ ಎನ್‌ಎಸ್‌ಯುಐ ಕಾರ್ಯಕರ್ತರು ವಿವಿಯ ಶತಮಾನೋತ್ಸವ ಭವನದ ಎದುರು ತೀವ್ರ ಸ್ವರೂಪದ ಪ್ರತಿಭಟನೆ ನಡೆಸಿದರು.
ವಿವಿಯ ಆಂತರಿಕ ಕಲಹ(Internal strife)ದಿಂದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗುತ್ತಿದೆ. ಐದು ತಿಂಗಳ ಹಿಂದೆ ನಡೆದ 1, 3 ಮತ್ತು 5ನೇ ಸೆಮಿಸ್ಟರ್ ಪರೀಕ್ಷೆ ಫಲಿತಾಂಶ ಪ್ರಕಟಿಸಿಲ್ಲ. ಮೂರು ವರ್ಷಗಳಿಂದ ಪದವಿ ಅಂಕಪಟ್ಟಿ ವಿತರಿಸಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿ ಕಾರ್ಯಕರ್ತರು, ಕುಲಪತಿ ಕಚೇರಿಗೆ ಮುತ್ತಿಗೆ ಹಾಕಿ ಪೀಠೋಪಕರಣ ಹಾಗೂ ನಾಮಫಲಕಗಳನ್ನು ಕಿತ್ತೆಸೆದರು.
ಅಂಕಪಟ್ಟಿ ಇಲ್ಲದೆ ಪದವೀಧರರು ಉನ್ನತ ವ್ಯಾಸಂಗ ಹಾಗೂ ಉದ್ಯೋಗಕ್ಕೆ ಸೇರಲು ಪರದಾಡುವಂತಾಗಿದೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಕುಲಪತಿ(vice Chancellor)ಗಳು ಸ್ಪಂದಿಸದೆ, ಆಂತರಿಕ ಕಚ್ಚಾಟದಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ಸಿಟ್ಟಿಗೆದ್ದರು. ಪರಿಸ್ಥಿತಿ ನಿಯಂತ್ರಿಸಲು ಬಂದ ಭದ್ರತಾ ಸಿಬ್ಬಂದಿಯನ್ನು ಪ್ರತಿಭಟನಾಕಾರರು ತಡೆದಿದ್ದರಿಂದ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ವಿವಿಯು ಏಕಾಏಕಿ ಪರೀಕ್ಷಾ ಹಾಗೂ ಪ್ರವೇಶ ಶುಲ್ಕವನ್ನು ಸಾವಿರಾರು ರೂ. ಹೆಚ್ಚಿಸಿದೆ. ಇದು ಬಡ ವಿದ್ಯಾರ್ಥಿಗಳಿಗೆ ಹೊರೆಯಾಗಲಿದೆ. ಡಿಜಿಟಲ್ ಮೌಲ್ಯಮಾಪನದ ತಾಂತ್ರಿಕ ಲೋಪ(Technical error)ಗಳಿಂದ ಫಲಿತಾಂಶಗಳಲ್ಲಿ ಗೊಂದಲ ಏರ್ಪಟ್ಟಿದ್ದು, ಪಾಸ್ ಆದವರಿಗೂ ಫೇಲ್ ಎಂದು ತೋರಿಸುತ್ತಿದೆ. ಇದು ವಿದ್ಯಾರ್ಥಿಗಳ ನಿದ್ದೆಗೆಡಿಸಿದೆ. ಈ ಅವ್ಯವಸ್ಥೆ ಸರಿಪಡಿಸಲು ವಿಫಲರಾಗಿರುವ ಕುಲಪತಿಯನ್ನು ವಜಾಗೊಳಿಸಬೇಕು. ರಾಜ್ಯಪಾಲರು ಮಧ್ಯೆ ಪ್ರವೇಶಿಸಬೇಕು ಎಂದು ಆಗ್ರಹಿಸಿದರು. ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ವಿಜಯ್, ಕಾರ್ಯಾಧ್ಯಕ್ಷ ರವಿ ಕಾಟಿಕೆರೆ, ಮಧುಸೂದನ್ ಮತ್ತಿತರರು ಹಾಜರಿದ್ದರು.

ಠಾಣೆಯಲ್ಲಿ ದೂರು ದಾಖಲಿಸುವೆ

ಕುವೆಂಪು ವಿವಿಯಲ್ಲಿ ವಿದ್ಯಾರ್ಥಿ ಸಂಘಟನೆ(Student organization) ನಡೆಸಿದ ಪ್ರತಿಭಟನೆ ಹಿಂದೆ ಯಾರೋ ಇದ್ದಾರೆಂಬ ಶಂಕೆಯನ್ನು ಕುಲಪತಿ ಪ್ರೊ. ಶರತ್ ಅನಂತಮೂರ್ತಿ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಕಚೇರಿ ಹಾನಿ ಮಾಡಿರುವವರ ವಿರುದ್ಧ ಎಐಆರ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. 
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬೇರೊಂದು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾಗ ಕುವೆಂಪು ಶತಮಾನೋತ್ಸವ ಭವನದಲ್ಲಿರುವ ನಮ್ಮ ಕಚೇರಿಗೆ ವಿದ್ಯಾರ್ಥಿಗಳಲ್ಲದ ಕೆಲವರು ಬಂದು ಪಾಟ್‌ಗಳನ್ನು ಒಡೆದಿದ್ದಾರೆ. ಈ ವಿಚಾರ ತಿಳಿದು ನಾನು ಕಚೇರಿಗೆ ಬಂದೆ. ಆಗ ನನಗೆ ಕೆಲವರು ಮುತ್ತಿಗೆ ಹಾಕಿದರು. ನನ್ನನ್ನ ಎಳೆದಾಡಲು ಯತ್ನಿಸಿ ನಂತರ ದಾರಿ ಬಿಟ್ಟರು ಎಂದರು.
ನ್ಯಾಕ್ ರ‌್ಯಾಂಕ್‌ನಲ್ಲಿ ರಾಜ್ಯದಲ್ಲಿಯೇ ಕುವೆಂಪು ವಿವಿಗೆ ಎರಡನೇ ಸ್ಥಾನ ದೊರೆತಿದೆ. ಇಂತಹ ಸಂದರ್ಭದಲ್ಲಿ ಕೆಲವರ ಪ್ರತಿಭಟನೆ ವಿವಿ ಹೆಸರಿಗೆ ಮಸಿ ಬಳಿಯುವ ಪ್ರಯತ್ನವಾಗಿದೆ. ವಿವಿಯಲ್ಲಿ ಗದ್ದಲ ಮಾಡುವುದು ಸರಿಯಲ್ಲ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದು ಹೇಳಿದರು.