ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್  
ಶಿವಮೊಗ್ಗ

ಕೇಂದ್ರದಿಂದ ನರೇಗಾ ಯೋಜನೆಗೆ ಸಮಾಧಿ । NREGA scheme

ನವೀನ ಬಿ.ಎಂ
ಶಿವಮೊಗ್ಗ: ಅಂದು ಮಹಾತ್ಮ ಗಾಂಧೀಜಿ(Mahatma Gandhi) ಅವರನ್ನೇ ಹತ್ಯೆ ಮಾಡಿದರು ಇಂದು ಅವರ ಹೆಸರು ತೆಗೆಯುವ ಮೂಲಕ ನರೇಗಾ(Narega) ಯೋಜನೆಗೆ ಸಮಾಧಿ ಕಟ್ಟುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಿಡಿಕಾರಿದರು.
ಶಿವಮೊಗ್ಗದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾತ್ಮ ಗಾಂಧಿ ಹೆಸರನ್ನು ತೆಗೆದುಹಾಕಿರುವ ಸಂಬಂಧ ಈಗಾಗಲೇ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಗಾಂಧಿ ಪ್ರತಿಮೆ ಎದುರು ಹೋರಾಟ ಮಾಡಿದ್ದೇವೆ. ನರೇಗಾ ವಿಚಾರದಲ್ಲಿ ಮುಂದಿನ ದಿನಗಳಲ್ಲೂ ನಮ್ಮ ಹೋರಾಟ ಮುಂದುವರಿಯಲಿದೆ. ವಿಶೇಷ ಅಧಿವೇಶನ(Special session)ದಲ್ಲಿ ಈ ಬಗ್ಗೆಯೇ ಚರ್ಚೆ ಆಗಿದ್ದು, ನಮ್ಮ ನಿರ್ಣಯ ಕೈಗೊಂಡು ಕಳಿಸಿ ಕೊಡುತ್ತೇವೆ ಎಂದರು.
ನರೇಗಾಕ್ಕೆ ಕೇಂದ್ರದಿಂದ 7 ಸಾವಿರ ಕೋಟಿ ರೂ. ಬರುತ್ತಿತ್ತು. ಗ್ರಾಪಂ(Grapam) ಮಟ್ಟದಲ್ಲಿ ಉದ್ಯೋಗ ಕೊಡುವ ಸಂಬಂಧ ತೀರ್ಮಾನ ಆಗುತ್ತಿತ್ತು. ಆ ಅಧಿಕಾರವನ್ನು ಕೇಂದ್ರದವರು ಕಿತ್ತುಕೊಂಡಿದ್ದಾರೆ. ಬಿವಿಜಿ ರಾಮ್ ಜಿ ಮೂಲಕ 100 ದಿನದ ಬದಲಾಗಿ 125 ದಿನ ಕೆಲಸ ಕೊಡುತ್ತೇವೆ ಎಂದಿದ್ದಾರೆ. ಆದರೆ ಅದು ಸಾಧ್ಯವೇ ಇಲ್ಲ. ದೆಹಲಿ(Delhi)ಯಲ್ಲಿ ಕುಳಿತು ಸ್ಯಾಟಲೈಟ್(Satellite) ಮೂಲಕ ತೀರ್ಮಾನ ಮಾಡುತ್ತಾರಂತೆ ಎಂದು ವ್ಯಂಗ್ಯವಾಡಿದರು.
ಗ್ರಾಪಂ ವ್ಯಾಪ್ತಿಗಳಲ್ಲಿ ತೋಟದ ಕೆಲಸ, ಕೊಟ್ಟಿಗೆ, ಇಂಗು ಗುಂಡಿಯಂತ ಕೆಲಸ ಆಗುತ್ತಿತ್ತು. ನೂರಾರು ಕೋಟಿ ರೂ. ವೆಚ್ಚದಲ್ಲಿ ಚೆಕ್ ಡ್ಯಾಂ ಅನ್ನು ನನ್ನ ಕ್ಷೇತ್ರದಲ್ಲೇ ಕಟ್ಟಿದ್ದೇವೆ. ಪಂಚಾಯತ್‌ಗಳು ಉತ್ತಮ ಕೆಲಸ ಮಾಡುವುದನ್ನು ಮುಚ್ಚಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಪಂಚಾಯತ್‌ಗಳಿಗೆ ಮಹಾತ್ಮ ಗಾಂಧಿ ಹೆಸರಿಡಲು ತೀರ್ಮಾನಿಸಲಾಗಿದೆ ಎಂದ ಅವರು, ನರೇಗಾ ಬಗ್ಗೆ ಮಾಹಿತಿಯನ್ನು ನಮ್ಮದೇ ಶೈಲಿಯಲ್ಲಿ ಜನರಿಗೆ ಜಾಗೃತಿ ಮೂಡಿಸುತ್ತಿದ್ದೇವೆ. ಮೊದಲು ಹೇಗೆ ಹೇಗಿತ್ತು. ಏನು ಬದಲಾಗಿದೆ ತಿಳಿಸುತ್ತಿದ್ದೇವೆ. ಈ ವಿಚಾರದಲ್ಲಿ ಜಾಹೀರಾತು ಕೊಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.