ಬಿಕೋ ಎನ್ನುತ್ತಿರುವ ಶಿವಪ್ಪ ನಾಯಕ ಅರಮನೆ
- 16.83 ಕೋಟಿ ರೂ. ವೆಚ್ಚದಲ್ಲಿ ನವೀಕರಣ
- ಸದ್ಯಕ್ಕಿರುವುದು ಇಬ್ಬರೇ ಕೆಲಸಗಾರರು
- ಬಿಕೋ ಎನ್ನುತ್ತಿದೆ ಶಿವಪ್ಪ ನಾಯಕ ಮ್ಯೂಸಿಯಂ
ಶಿವಮೊಗ್ಗದ ತುಂಗಾ ನದಿ ತಟದಲ್ಲಿರುವ ಶಿವಪ್ಪ ನಾಯಕ ಅರಮನೆ ಮತ್ತು ವಸ್ತು ಸಂಗ್ರಹಾಲಯವು ಸ್ಮಾರ್ಟ್‌ಸಿಟಿ(SmartCity)ಯೋಜನೆಯಡಿ 16.83 ಕೋಟಿ ರೂ. ವೆಚ್ಚದಲ್ಲಿ ಅದ್ದೂರಿಯಾಗಿ ನವೀಕರಣಗೊಂಡಿದೆ. ಸ್ಮಾರ್ಟ್‌ಸಿಟಿಯಿಂದ ಈಗಾಗಲೇ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಗೂ ಹಸ್ತಾಂತರವಾಗಿದೆ. ಐದು ಶತಮಾನಗಳ ಇತಿಹಾಸ ಹೊಂದಿರುವ ಅರಮನೆ ಮತ್ತು ವಸ್ತು ಸಂಗ್ರಹಾಲಯದ ನಿರ್ವಹಣೆಗೆ ಸಿಬ್ಬಂದಿ ಕೊರತೆಯೇ ಸವಾಲಾಗಿದೆ.
ನಗರದ ಹೃದಯ ಭಾಗದಲ್ಲಿರುವ ಶಿವಪ್ಪ ನಾಯಕ ಅರಮನೆ(Shivappa Nayaka Palace)ಯು 508 ವರ್ಷಗಳ ಇತಿಹಾಸ ಹೊಂದಿದೆ. 17ನೇ ಶತಮಾನದ ಮಧ್ಯಭಾಗದಿಂದ ಅಸ್ತಿತ್ವದಲ್ಲಿದೆ. ಕೆಳದಿ ರಾಜವಂಶದ ದೊರೆ ವೆಂಕಟಪ್ಪ ನಾಯಕನಿಂದ ನಿರ್ಮಾಣಗೊಂಡಿರುವ ಅರಮನೆಯು 19 ಮತ್ತು 20ನೇ ಶತಮಾನದ ಅವಧಿಯಲ್ಲೂ ಜೀರ್ಣೋದ್ಧಾರವಾಗಿತ್ತು. ಇದೀಗ ಸ್ಮಾರ್ಟ್‌ಸಿಟಿಯಿಂದ ನವೀಕರಣಗೊಂಡು ಝಗಮಗಿಸುತ್ತಿದೆ. ಆದರೆ ಇಬ್ಬರೇ ಸಿಬ್ಬಂದಿ ಇರುವುದರಿಂದ ನಿರ್ವಹಣೆ ಕಷ್ಟಕರವಾಗಿದೆ.
ಸಹಾಯಕ ನಿರ್ದೇಶಕರನ್ನು ಒಳಗೊಂಡಂತೆ 6 ಹುದ್ದೆಗಳು ಮಂಜೂರಾಗಿವೆ. ಈ ಪೈಕಿ ನಾಲ್ಕು ಹುದ್ದೆಗಳು ಖಾಲಿ ಇವೆ. ಹೆಚ್ಚುವರಿಯಾಗಿ ಹೊರಗುತ್ತಿಗೆ(Outsource) ಆಧಾರದ ಮೇಲೆ ಇನ್ನೂ 10 ಹುದ್ದೆಗಳ ಅವಶ್ಯತೆ ಇದೆ. ಆದರೆ ಹಾಲಿ ದ್ವಿತೀಯ ದರ್ಜೆ ಸಹಾಯಕ ಮತ್ತು ‘ಡಿ’ ಗ್ರೂಪ್ ನೌಕರ ಮಾತ್ರ ನಿರ್ವಹಣೆ ಮಾಡುತ್ತಿದ್ದು, ಅರಮನೆ ಇತಿಹಾಸವನ್ನು ಪ್ರವಾಸಿಗರಿಗೆ ತಿಳಿಸಿಕೊಡುವ ಕೆಲಸ ಸಾಧ್ಯವಾಗುತ್ತಿಲ್ಲ. ಹಾಗಾಗಿ ಅರಮನೆಗೆ ಬಂದ ಪ್ರವಾಸಿಗರು ನಿರಾಸೆಯೊಂದಿಗೆ ಮರಳುವಂತಾಗಿದೆ.
ವಿಶಿಷ್ಟವಾದ ವಾಸ್ತುಶಿಲ್ಪ: ರಾಜ್ಯದ ಅತ್ಯಂತ ಪ್ರಾಚೀನ ಅರಮನೆಗಳಲ್ಲಿ ಶಿವಪ್ಪ ನಾಯಕ ಅರಮನೆಯೂ ಒಂದು. ಅರಣ್ಯ ಇಲಾಖೆ(Forest Department) ಅಧೀನದಲ್ಲಿದ್ದ ಅರಮನೆಯನ್ನು 1984ರ ಫೆ.1ರ ಬಳಿಕ ರಾಜ್ಯ ಸರ್ಕಾರ ಅಂದಿನ ಪ್ರಾಚ್ಯವಸ್ತು ಇಲಾಖೆಗೆ ಹಸ್ತಾಂತರ ಮಾಡಿತ್ತು. ಬಳಿಕ ಅರಮನೆಯನ್ನು ವಸ್ತು ಸಂಗ್ರಹಾಲಯವನ್ನಾಗಿ ಮಾರ್ಪಡಿಸಿ ಜಿಲ್ಲೆಯ ಕ್ಷೇತ್ರಕಾರ್ಯದಲ್ಲಿ ಸಂಗ್ರಹಿಸಿದ್ದ ಪ್ರಾಚ್ಯವಸ್ತುಗಳು, ಆಯುಧಗಳು, ತಾಳೆಗರಿಗಳು, ಹಲವರು ದಾನವಾಗಿ ನೀಡಿದ ಮುದ್ರಿತ ಪ್ರಾಚ್ಯವಸ್ತುಗಳು, ಗಂಧದ ಕುಸರಿ ಕೆತ್ತನೆಯ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದ್ದು, ಭಾರತೀಯ ನಗರ ವಾಸ್ತುಶಿಲ್ಪದ ಇತಿಹಾಸದಲ್ಲೇ ಅರಮನೆಯು ವಿಶಿಷ್ಟ ಸ್ಥಾನ ಪಡೆದಿದೆ.
ಮೂಲವಿನ್ಯಾಸಕ್ಕೆ ಧಕ್ಕೆ ಆಗದಂತೆ ನವೀಕರಣ
ಹಲವು ವರ್ಷಗಳ ಐತಿಹ್ಯ ಹೊಂದಿರುವ ಅರಮನೆ ಮತ್ತು ವಸ್ತು ಸಂಗ್ರಹಾಲಯವನ್ನು ಮೂಲ ವಿನ್ಯಾಸಕ್ಕೆ ಧಕ್ಕೆ ಆಗದಂತೆ ಪರಿಣಿತ ಕೆಲಸಗಾರರು ಮತ್ತು ಇತಿಹಾಸಕಾರರನ್ನು ಒಳಗೊಂಡು ಮೂಲ ಅರಮನೆ ಕಟ್ಟಡ ಮತ್ತು ಅದಕ್ಕೆ ಹೊಂದಿಕೊಂಡಿರುವ ಸಿ ಆಕಾರದ ಕಟ್ಟಡವನ್ನು ಸ್ಮಾರ್ಟ್‌ಸಿಟಿಯಿಂದ ಪುನರುತ್ಥಾನಗೊಳಿಸಲಾಗಿದೆ. ಹೊಸ ಕಚೇರಿ(New Office), ಉಗ್ರಾಣ(ಸಂಗ್ರಹಣಾ ಕೊಠಡಿ), ಪಾರ್ಕಿಂಗ್, ಟಿಕೆಟ್ ಕೌಂಟರ್(Ticket counter), ಪಾಥ್‌ವೇ, ಹೊರಾಂಗಣ ಆಸನ ವ್ಯವಸ್ಥೆ, ಹೂದೋಟ(ಲಾನ್), ಡಿಜಿಟಲ್ ಇಂಟರ್‌ಪ್ರಿಟೇಷನ್‌ಗಳನ್ನು ಒಳಗೊಂಡಂತೆ ಅರಮನೆ ಮತ್ತು ವಸ್ತು ಸಂಗ್ರಹಾಲಯವನ್ನು 2025ರ ನ.28ರಂದೇ ಪುರತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಗೆ ಹಸ್ತಾಂತರ ಕೂಡ ಮಾಡಲಾಗಿದೆ.
ತೆರೆಯದ ಮ್ಯೂಸಿಯಂ ಬಾಗಿಲು
ಅರಮನೆ ಮತ್ತು ವಸ್ತು ಸಂಗ್ರಹಾಲಯದ ನವೀಕರಣದ ಬಳಿಕ ಸಾರ್ವಜನಿಕರಿಗೆ ಮುಕ್ತವಾಗಿದೆ. ಆದರೆ ಜಿಲ್ಲೆಯನ್ನಾಳಿದ ಅರಸರ ಇತಿಹಾಸ, ಆಳ್ವಿಕೆ, ಗಡಿ, ಆಡಳಿತದ ಸಂಭ್ರಮ, ಸ್ಮಾರಕಗಳು, ಶಾಸನಗಳು, ವೀರಗಲ್ಲುಗಳು, ದೇವತೆಗಳು, ನಾಣ್ಯಗಳು, ರಾಜಮನೆತನಗಳ ಲಾಂಛನಗಳು, ಲಿಪಿಗಳು, ಯುದ್ಧದ ಗುರುತುಗಳು, ದೇವಾಲಯಗಳು(Temple) ಸೇರಿ ಅನೇಕ ಮಹತ್ವದ ಅಂಶಗಳು ವಸ್ತು ಸಂಗ್ರಹಾಲಯದಲ್ಲಿವೆ. ಆದರೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿಲ್ಲ. ಶಿವಪ್ಪ ನಾಯಕ ಅರಮನೆಯ ವಸ್ತು ಸಂಗ್ರಹಾಲಯವು ಪ್ರವಾಸಿಗರು, ಇತಿಹಾಸಕ್ತರಿಗೆ ಲಭ್ಯವಾಗುತ್ತಿಲ್ಲ ಎಂಬುದು ಬೇಸರದ ಸಂಗತಿ.
ಯಾವೆಲ್ಲ ಸಿಬ್ಬಂದಿ ಬೇಕಿದೆ ?
ಖಾಲಿ ಇರುವ ಸಹಾಯಕ ನಿರ್ದೇಶಕ ಹುದ್ದೆಯಲ್ಲಿ ಪ್ರಭಾರ ಅಧಿಕಾರಿಯಾಗಿ ಹಾಸನದ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯದ ಸಹಾಯಕ ನಿರ್ದೇಶಕ ಎಚ್.ಸಿ.ಕುಮಾರ್ ನಿರ್ವಹಿಸುತ್ತಿದ್ದಾರೆ. ದ್ವಿತೀಯ ದರ್ಜೆ ಸಹಾಯಕ/ಡೇಟಾ ಎಂಟ್ರಿ ಆಪರೇಟರ್ ಮತ್ತು ‘ಡಿ’ ಗ್ರೂಪ್‌ನ ತಲಾ ಒಬ್ಬರು ಕಾಯಂ ಸಿಬ್ಬಂದಿ ಇದ್ದಾರೆ. ‘ಡಿ’ ಗ್ರೂಪ್‌ನ ಇನ್ನೂ ಮೂವರು ಕಾಯಂ ಸಿಬ್ಬಂದಿ ಹುದ್ದೆ ಖಾಲಿ ಇದೆ. ಉಳಿದಂತೆ ಸಹಾಯಕ ಕ್ಯೂರೇಟರ್, ದ್ವಿತೀಯ ದರ್ಜೆ ಸಹಾಯಕ, ಎಲೆಕ್ಟ್ರೀಷಿಯನ್, ಪ್ಲಂಬರ್ ತಲಾ ಒಂದೊಂದು ಹುದ್ದೆ, ‘ಡಿ’ ಗ್ರೂಪ್‌ನ ಆರು ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಕೇಂದ್ರ ಕಚೇರಿ ಮೂಲಕ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಸರ್ಕಾರದ ಹಂತದಲ್ಲಿ ಅನುಮೋದನೆ ಬಾಕಿ ಇದೆ.
ಸಾರ್ವಜನಿಕರು, ಇತಿಹಾಸಕಾರರ ಬೇಸರ
ಶಿವಪ್ಪ ನಾಯಕ ಅರಮನೆಯು ವೈವಿಧ್ಯದೊಂದಿಗೆ ಪಾರಂಪರಿಕ ವಸ್ತುಗಳನ್ನೂ ಒಳಗೊಂಡಿದೆ. ರಾಜ ಮಹಾರಾಜರು ಆಳ್ವಿಕೆ ಮಾಡಿರುವ ಇತಿಹಾಸ ಪ್ರಸಿದ್ಧ ಅರಮನೆಯೂ ಇದಾಗಿದೆ. ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದರೆ ಜಿಲ್ಲೆಯ ಇತಿಹಾಸ ಕಣ್ಮುಂದೆ ಬರುತ್ತಿತ್ತು. ರಾಜಮನೆತನಗಳು, ಜೈನ ಬಸದಿಗಳು ಸೇರಿ ಅನೇಕ ಐತಿಹಾಸಿಕ ಪುರಾವೆಗಳು ಇಲ್ಲಿದ್ದು, ನವೀಕರಣಗೊಂಡ ಬಳಿಕ ಮ್ಯೂಸಿಯಂ ಬಾಗಿಲು ತೆರೆಯುತ್ತಿಲ್ಲ. ಹಾಗಾಗಿ ಸಾರ್ವಜನಿಕರು ಅರಮನೆ ಕಟ್ಟಡವನ್ನು ಮಾತ್ರ ವೀಕ್ಷಿಸಿ ಬರುವಂತಾಗಿದೆ ಎಂದು ಸಾರ್ವಜನಿಕರು ಮತ್ತು ಇತಿಹಾಸಕಾರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
"
ಕಳೆದೆರಡು ತಿಂಗಳಿಂದ ಶಿವಪ್ಪ ನಾಯಕ ಅರಮನೆ ಪ್ರವೇಶಕ್ಕೆ ಸಾರ್ವಜನಿಕರಿಗೆ ಮುಕ್ತವಾಗಿದೆ. ಸಿಬ್ಬಂದಿ ಕೊರತೆ ಕಾರಣದಿಂದ ವಸ್ತು ಸಂಗ್ರಹಾಲಯವನ್ನು ಸ್ಥಗಿತಗೊಳಿಸಲಾಗುತ್ತದೆ. ಪ್ರವಾಸಿಗರು ಹೆಚ್ಚಿದ್ದಾಗ ಮ್ಯೂಸಿಯಂ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ. ಹೊರಗುತ್ತಿಗೆ ಆಧಾರದ ಮೇಲೆ 10 ಸಿಬ್ಬಂದಿ ನೇಮಕಕ್ಕೆ ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಅದು ಸಚಿವಾಲಯದ ಹಂತದಲ್ಲಿದೆ. ಸದ್ಯ ಅರಮನೆಗೆ ಉಚಿತ ಪ್ರವೇಶವಿದೆ.
— ಎಚ್.ಸಿ.ಕುಮಾರ್, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯ ಸಹಾಯಕ ನಿರ್ದೇಶಕ(ಪ್ರಭಾರ)