ಶಿವಮೊಗ್ಗ: ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಪ್ರಯತ್ನಗಳಿಗೆ ಅವಕಾಶ ನೀಡುವುದಿಲ್ಲ. ಪ್ರಜಾಪ್ರಭುತ್ವವನ್ನು ಉಳಿಸುವುದರ ಜತೆಗೆ ಸಂವಿಧಾನದ ಆಶಯಗಳನ್ನು ಈಡೇರಿಸುತ್ತೇವೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
‘ಅರಾಜಕತೆ ಅಳಿಸಿ, ಪ್ರಜಾಪ್ರಭುತ್ವ ಉಳಿಸಿ’ ಎಂಬ ಘೋಷಣೆಯೊಂದಿಗೆ ಬಿಜೆಪಿ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಯುವ ಸಮುದಾಯದ ಶಕ್ತಿಯನ್ನು ರಾಷ್ಟ್ರದ ಅಭಿವೃದ್ಧಿಗೆ ಬಳಸಿಕೊಳ್ಳುವ ಅಗತ್ಯವಿದೆ. ಸಂವಿಧಾನದ ಆಶಯವನ್ನು ನಾವು ಎತ್ತಿಹಿಡಿಯಬೇಕು. ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸಿದರೆ ಅದನ್ನು ಸಹಿಸುವುದಿಲ್ಲ ಎಂದರು.
ದೇಶದ ಯುವಕರು ಸದಾ ರಾಷ್ಟ್ರದ ಬಗ್ಗೆ ಬದ್ಧರಾಗಿದ್ದಾರೆ. ಯುವ ಸಮುದಾಯದ ಶಕ್ತಿಯನ್ನು ರಾಷ್ಟ್ರೀಯ ಪ್ರಭಾವದಲ್ಲಿ ಬಳಸಿಕೊಂಡು ಭಾರತವನ್ನು ಜಗತ್ತಿಗೆ ಗುರುವಾಗುವಂತಹ ಸ್ಥಿತಿಗೆ ಕೊಂಡೊಯ್ಯಬೇಕು. ಕಮ್ಯುನಿಸ್ಟ್ ಹಾಗೂ ಕಾಂಗ್ರೆಸ್ ಪಕ್ಷಗಳು ಅರಾಜಕತೆ ಸೃಷ್ಟಿಸಲು ಪ್ರಯತ್ನಿಸಿದರೂ ಜಾಗೃತ ಪ್ರಜೆಗಳು ಇರುವವರೆಗೆ ಅದು ಸಾಧ್ಯವಿಲ್ಲ. ಬಿಜೆಪಿ ಕೂಡ ಅರಾಜಕತೆ ನಡೆಯಲು ಬಿಡುವುದಿಲ್ಲ ಎಂಬುದನ್ನು ಶಿವಮೊಗ್ಗ ವಿಭಾಗದ ಈ ಪಾದಯಾತ್ರೆ ತೋರಿಸಿಕೊಟ್ಟಿದೆ ಎಂದು ಹೇಳಿದರು.
ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆ ಸೇರಿ ರಾಜ್ಯದ ಕಾಂಗ್ರೆಸ್ ನಾಯಕರಿಗೆ ನಿಮ್ಮ ಆಡಳಿತಾವಧಿ ಮುಗಿದಿದೆ ಎಂಬುದನ್ನು ತಿಳಿಸಬೇಕಿದೆ. ಮನಬಂದಂತೆ ಹಾಲು, ಮೊಸರು, ಬಸ್ ಟಿಕೆಟ್ ದರ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದ್ದು, ಈ ಬೆಲೆ ಏರಿಕೆಗಳಿಗೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಂತಿಮ ಮೊಳೆ ಹೊಡೆಯಲಿದೆ ಎಂದು ವಾಗ್ದಾಳಿ ನಡೆಸಿದರು.