ಪೋಕ್ಸೋ ಕುರಿತ ಸಾಂದರ್ಭಿಕ ಚಿತ್ರ
- ವಿದ್ಯಾವಂತರು, ಸುಶಿಕ್ಷಿತರ ಜಿಲ್ಲೆಯಲ್ಲಿ 350ಕ್ಕೂ ಅಧಿಕ ಕೇಸ್ ಪತ್ತೆ
- ಶತಕದಂಚಿಗೆ ತಲುಪಿದ ಬಾಲಗರ್ಭಿಯರ ಸಂಖ್ಯೆ
- ಬಾಲ್ಯ ವಿವಾಹ ಆಗಿದ್ದು 113, ಅಧಿಕಾರಿಗಳು ತಡೆದದ್ದು 76
ವಿದ್ಯಾವಂತರು, ಸುಶಿಕ್ಷಿತರ ಜಿಲ್ಲೆ ಎಂದು ಕರೆಸಿಕೊಳ್ಳುವ ಶಿವಮೊಗ್ಗದಲ್ಲಿ ಪೋಕ್ಸೋ(POCSO) ಪ್ರಕರಣಗಳಿಗೆ ಕಡಿವಾಣ ಬೀಳುತ್ತಿಲ್ಲ. ಅಪ್ರಾಪ್ತೆಯರ(Minor) ಮೇಲಿನ ದೌರ್ಜನ್ಯಗಳು ದಿನೇದಿನೆ ಹೆಚ್ಚಾಗುತ್ತಿವೆ. ಕಳೆದ ಒಂದೂವರೆ ವರ್ಷದಲ್ಲಿ 350ಕ್ಕೂ ಅಧಿಕ ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಇನ್ನು ಬಾಲಗರ್ಭಿಣಿಯರ ಸಂಖ್ಯೆ ಶತಕದ ಅಂಚಿನಲ್ಲಿರುವುದು ಕಳವಳಕಾರಿ.
ನಿರಂತರ ಜಾಗೃತಿ, ಪೊಲೀಸರಿಂದ ಬಿಗಿ ಕ್ರಮದ ಹೊರತಾಗಿಯೂ ಲೈಂಗಿಕ ದೌರ್ಜನ್ಯ(Sexual assault)ಗಳು ಕಡಿಮೆ ಆಗುತ್ತಿಲ್ಲ. ಅದರಲ್ಲೂ ಅಪ್ರಾಪ್ತೆಯರ ಮೇಲಿನ ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ಬಹುತೇಕ ಪ್ರಕರಣಗಳಲ್ಲಿ ಕುಟುಂಬದ ಸದಸ್ಯರು ಅಥವಾ ಅಕ್ಕಪಕ್ಕದವರಿಂದಲೇ ದೌರ್ಜನ್ಯಗಳು ನಡೆಯುತ್ತಿರುವುದು ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ.
2024-25ರಲ್ಲಿ 231 ಮತ್ತು 2025-26ರಲ್ಲಿ ಸೆಪ್ಟೆಂಬರ್‌ವರೆಗೆ 143 ಪೋಕ್ಸೊ ಪ್ರಕರಣಗಳು ದಾಖಲಾಗಿವೆ. ಒಬ್ಬ ಅಪ್ರಾಪ್ತ ಸೇರಿದಂತೆ 372 ಅಪ್ರಾಪ್ತೆಯರ ಮೇಲೆ ದೌರ್ಜನ್ಯ ಎಸಗಿರುವ ಬಗ್ಗೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿವೆ. ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿ ಚಾರ್ಜ್‌ಶೀಟ್ ಸಲ್ಲಿಸಿದ್ದರೆ, ಕೆಲವರನ್ನು ಶಿಕ್ಷೆಗೂ ಒಳಪಡಿಸಲಾಗಿದೆ. ಆದರೂ ದಿನದಿಂದ ದಿನಕ್ಕೆ ಪೋಕ್ಸೋ ಪ್ರಕರಣಗಳು ಹೆಚ್ಚಾಗುತ್ತಿದ್ದು ಪೊಲೀಸ್ ಇಲಾಖೆ, ಮಹಿಳಾ ರಕ್ಷಣಾ ಘಟಕದ ಅಧಿಕಾರಿಗಳಿಗೂ ತಲೆಬಿಸಿ ತಂದಿದೆ.
ಪರಿಚಿತರಿಂದಲೇ ದೌರ್ಜನ್ಯ ಹೆಚ್ಚು
ಶಾಲೆಗೆ ಹೋಗುವ ಕೆಲವು ವಾಹನಗಳಲ್ಲಿ, ಟ್ಯೂಷನ್ ಕೇಂದ್ರಗಳಲ್ಲಿ ಹಾಗೂ ಮನೆಗಳಲ್ಲೇ ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಸಂಬಂಧಿಗಳು, ಪರಿಚಿತರೇ ಈ ಕೃತ್ಯ ನಡೆಸುವುದರಿಂದ ಪಾಲಕರಿಗೆ ಹೇಳಲು ಹಿಂದೇಟು ಹಾಕುತ್ತಾರೆ. ಕೆಲವು ಪಾಲಕರಿಗೆ ವಿಷಯ ಗೊತ್ತಾದರೂ ಮರ್ಯಾದೆಗೆ ಅಂಜಿ ಪ್ರಕರಣಗಳನ್ನು ಮುಚ್ಚಿಡುತ್ತಾರೆ. ಮತ್ತೆ ಕೆಲವು ಪ್ರಕರಣಗಳಲ್ಲಿ ಬೆದರಿಕೆಯಿಂದ ದೌರ್ಜನ್ಯ ವಿಷಯ ಬೆಳಕಿಗೆ ಬರುತ್ತಿಲ್ಲ. ಬಾಲಕಿಯರ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಆಸ್ಪತ್ರೆ ಮೆಟ್ಟಿಲೇರಿದ ಬಳಿಕ ಹತ್ತಾರು ಪ್ರಕರಣಗಳು ಬೆಳಕಿಗೆ ಬಂದಿದ್ದೂ ಇದೆ. ಮತ್ತೊಂದೆಡೆ ಶಾಲಾ ಕಾಲೇಜು ದಿನಗಳಲ್ಲೇ ವಿದ್ಯಾರ್ಥಿಗಳು ಪ್ರೀತಿ, ಪ್ರೇಮದ ಹೆಸರಲ್ಲಿ ದೌರ್ಜನ್ಯಗಳು ಹೆಚ್ಚುತ್ತಿವೆ. ಮದುವೆ ಆಗುವುದಾಗಿ ನಂಬಿಸಿ ವಂಚನೆ ಮಾಡುತ್ತಿದ್ದಾರೆ. ಕೊನೆಗೆ ಎಚ್ಚೆತ್ತುಕೊಳ್ಳುವ ಪಾಲಕರು ಅನಿವಾರ್ಯವಾಗಿ ಲೈಂಗಿಕ ದೌರ್ಜನ್ಯದಡಿ ಪ್ರಕರಣ ದಾಖಲಿಸುತ್ತಿದ್ದಾರೆ. ಮತ್ತೊಂದೆಡೆ ಬಾಲ್ಯವಿವಾಹವಾಗಿ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ.
ಖಿನ್ನತೆಗೆ ಒಳಗಾಗುವ ಸಾಧ್ಯತೆ ಅಧಿಕ
ಹೆಣ್ಣು ಮಕ್ಕಳ ವಿಚಾರದಲ್ಲಿ ಮನೆಯವರನ್ನೇ ನಂಬದಂತಹ ಸ್ಥಿತಿ ತಾಯಂದಿರದು. ಮತ್ತೊಂದೆಡೆ ಶಾಲಾಕಾಲೇಜುಗಳಲ್ಲಿ ಶಿಕ್ಷಕರೇ ವಿದ್ಯಾರ್ಥಿನಿಯರನ್ನು ಕಾಮತೃಷೆಗೆ ಬಳಸಿಕೊಳ್ಳುವುದೂ ಕಡಿಮೆ ಆಗುತ್ತಿಲ್ಲ. ತಂದೆಯೇ ಮಕ್ಕಳ ಮೇಲೆ, ಸಹೋದರರೇ ಲೈಂಗಿಕ ದೌರ್ಜನ್ಯ ಎಸಗಿರುವ ನಿದರ್ಶನಗಳಿವೆ. ಬಾಲ್ಯದಲ್ಲಿ ಲೈಂಗಿಕ ಶೋಷಣೆಗೆ ಒಳಗಾದ ಮಗು, ಯೌವ್ವನದಲ್ಲಿ ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚು. ಮನೆಗೆ ಬರುವ ಮತ್ತು ಮನೆಯಲ್ಲಿ ಇರುವ ಪುರುಷರ ಬಗ್ಗೆ ಮಹಿಳೆಯರು ಸೂಕ್ಷ್ಮವಾಗಿ ಗಮನಿಸಬೇಕು. ಮಕ್ಕಳಿಗೆ ಈ ಬಗ್ಗೆ ಅವರೇ ಹೆಚ್ಚು ಜಾಗೃತಿ ಮೂಡಿಸಬೇಕು. ಅಪರಾಧಿ ಭಾವನೆ ಕಾಡಿದರೆ ಆತ್ಮಹತ್ಯೆಗೂ ದಾರಿ ಮಾಡಿಕೊಡುತ್ತದೆ ಎನ್ನುತ್ತಾರೆ ಮನೋರೋಗ ತಜ್ಞರು.
99 ಬಾಲ ಗರ್ಭಿಣಿಯರ ಪತ್ತೆ!
ಜಿಲ್ಲೆಯಲ್ಲಿ ಕಳೆದ ಒಂದೂವರೆ ವರ್ಷದಲ್ಲಿ 99 ಬಾಲ ಗರ್ಭಿಣಿಯರ ಪ್ರಕರಣಗಳು ಬೆಳಕಿಗೆ ಬಂದಿವೆ. ಅದರಲ್ಲಿ ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕುಗಳಲ್ಲೇ ಅತ್ಯಧಿಕ. ಶಿವಮೊಗ್ಗದಲ್ಲಿ 30, ಭದ್ರಾವತಿಯಲ್ಲಿ 24, ಶಿಕಾರಿಪುರದಲ್ಲಿ 15, ಸೊರಬದಲ್ಲಿ 11, ಸಾಗರದಲ್ಲಿ 7, ತೀರ್ಥಹಳ್ಳಿ ಮತ್ತು ಹೊಸನಗರದಲ್ಲಿ ತಲಾ 6 ಬಾಲ ಗರ್ಭಿಣಿಯರು ಪತ್ತೆಯಾಗಿದ್ದಾರೆ. 2024-25ರಲ್ಲಿ 79 ಮತ್ತು 2025-26ರಲ್ಲಿ ಆಗಸ್ಟ್‌ವರೆಗೆ 34 ಬಾಲ್ಯವಿವಾಹಗಳು ನಡೆದಿದ್ದು, 76 ಬಾಲ್ಯವಿವಾಹಗಳನ್ನು ಅಧಿಕಾರಿಗಳು ತಪ್ಪಿಸಿದ್ದಾರೆ.
ಸಿಎಂಗೆ ಪತ್ರ ಬರೆದ ಎಂಎಲ್‌ಸಿ
ರಾಜ್ಯದಲ್ಲಿ ಬಾಲಗರ್ಭಿಣಿ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ. ಪ್ರಕರಣ ತಡೆಗೆ ಸಮಗ್ರ ಕ್ರಮ ಕೈಗೊಳ್ಳುವಂತೆ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಅದರಲ್ಲೂ ಸುಶಿಕ್ಷಿತರ ಜಿಲ್ಲೆ ಎಂಬ ಹೆಗ್ಗಳಿಕೆ ಪಡೆದಿರುವ ಶಿವಮೊಗ್ಗದಲ್ಲೇ ಬಾಲಗರ್ಭಿಣಿಯರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಶಿವಮೊಗ್ಗದಲ್ಲಷ್ಟೇ ಅಲ್ಲ, ಇಡೀ ರಾಜ್ಯದಲ್ಲಿ ಸಮಸ್ಯೆ ಉಲ್ಭಣಿಸಿರುವುದು ಆಘಾತಕಾರಿ ಸಂಗತಿ. ಈ ನಿಟ್ಟಿನಲ್ಲಿ ಪ್ರಕರಣಗಳ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಪೋಕ್ಸೋ ಪ್ರಕರಣಗಳು
ಬಾಲ ಗರ್ಭಿಣಿಯರು
ಶಿವಮೊಗ್ಗ ಜಿಲ್ಲೆಯಲ್ಲಿ ಪೋಕ್ಸೋ ಮತ್ತು ಬಾಲ್ಯ ವಿವಾಹ ಸಂಬಂಧ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಬಾಲ್ಯವಿವಾಹಗಳು ನಡೆಯುತ್ತಿರುವ ಸುಳಿವು ಸಿಕ್ಕ ತಕ್ಷಣವೇ ದಾಳಿ ನಡೆಸುತ್ತಿದ್ದೇವೆ. ಎಲ್ಲರ ಸಹಕಾರದಿಂದ ಒಂದೂವರೆ ವರ್ಷದಲ್ಲಿ 70ಕ್ಕೂ ಅಧಿಕ ಬಾಲ್ಯ ವಿವಾಹ ತಡೆಯಲಾಗಿದೆ. ಬಾಲ ಗರ್ಣಿಣಿಯರ ಪ್ರಕರಣ ಪತ್ತೆ ಮತ್ತು ತಡೆಗೆ ವಿಶೇಷ ಒತ್ತು ನೀಡಲಾಗುತ್ತಿದೆ.
ಬಾಲಗರ್ಭಿಣಿಯರ ಪ್ರಕರಣಗಳು ರಾಜ್ಯಾದ್ಯಂತ ಪತ್ತೆಯಾಗುತ್ತಿವೆ. ಕಡಿವಾಣ ಹಾಕಲು ವಿಶೇಷ ಕ್ರಮ ಕೈಗೊಳ್ಳದಿದ್ದರೆ ಸ್ವಸ್ಥ ಸಮಾಜಕ್ಕೂ ಮಾರಕವಾಗಲಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ. ಅವರಿಂದ ಕ್ರಮ ಕೈಗೊಳ್ಳುವ ಅಥವಾ ಕೈಗೊಂಡಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲೂ ಧ್ವನಿ ಎತ್ತುತ್ತೇನೆ.