ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಎನ್.ಕೆ.ಜಗದೀಶ್, ಎಸ್.ದತ್ತಾತ್ರಿ, ಎಸ್.ಎಸ್.ಜ್ಯೋತಿಪ್ರಕಾಶ್, ಸಿ.ಎಚ್.ಮಾಲತೇಶ್, ಮೋಹನ್ ರೆಡ್ಡಿ ಇದ್ದರು. 
ಶಿವಮೊಗ್ಗ

ಎಥೆನಾಲ್ ಬಳಕೆಯಿಂದ ಯಾವುದೇ ಹಾನಿಯಾಗಿಲ್ಲ B.Y.Raghavendra

ಶಿವಮೊಗ್ಗ: ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದ ಯಾವುದೇ ಹಾನಿಯಾಗಿಲ್ಲ. ಈ ಕುರಿತು ವೈಜ್ಞಾನಿಕ ವರದಿ ತರಿಸಿಕೊಳ್ಳಲಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಶಿವಮೊಗ್ಗ: ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದ ಯಾವುದೇ ಹಾನಿಯಾಗಿಲ್ಲ. ಈ ಕುರಿತು ವೈಜ್ಞಾನಿಕ ವರದಿ ತರಿಸಿಕೊಳ್ಳಲಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಆರಂಭದಲ್ಲಿ ಶೇ.1ರಿಂದ ಶೇ.1.5ರಷ್ಟು ಇದ್ದ ಎಥೆನಾಲ್ ಮಿಶ್ರಣ, ಇದೀಗ ಶೇ.20ಕ್ಕೆ ತಲುಪಿದೆ ಎಂದರು. ಎಥೆನಾಲ್ ಮಿಶ್ರಣದಿಂದ ಹಾನಿಯಾಗುತ್ತದೆ ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರದ ಮೂಲಕ ದೇಶದ ವಿವಿಧ ರಾಜ್ಯಗಳಲ್ಲೂ ಪರೀಕ್ಷೆ ನಡೆಸಲಾಗಿದೆ. ವರದಿ ಪರಿಶೀಲಿಸಿದ್ದು, ವೈಜ್ಞಾನಿಕವಾಗಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಆದರೆ ರಾಜ್ಯ ಸರ್ಕಾರದವರು ಪರೀಕ್ಷೆ ನಡೆಸಿರುವುದಾಗಿ ಹೇಳುತ್ತಿದ್ದು, ಅದು ವೈಜ್ಞಾನಿಕವಾಗಿ ನಡೆದಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಎಥೆನಾಲ್ ಮಿಶ್ರಣದಿಂದ ಹಾನಿಯಾಗಿರುವುದಕ್ಕೆ ಯಾರಾದರೂ ಸಾಕ್ಷ್ಯ ನೀಡಲಿ. ಯಾವುದೇ ಹಾನಿಯಾಗದಿದ್ದರೂ ಈ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರ ರೈತರ ವಿಷಯದಲ್ಲಿ ಮೊಸಳೆ ಕಣ್ಣೀರು ಸುರಿಸುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದ ಬಿ.ವೈ.ರಾಘವೇಂದ್ರ, ರೈತರಿಗೆ ದೊಡ್ಡ ಮಟ್ಟದ ನೆರವು ನೀಡುತ್ತಿದ್ದೇವೆ ಎಂದು ಮುಖ್ಯಮಂತ್ರಿಗಳು ಮಾತನಾಡುತ್ತ ಜನರ ಹಾಗೂ ರೈತರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಬೆಳೆ ಹಾನಿ ಪರಿಹಾರವನ್ನು ಎಸ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರವೇ ತಕ್ಷಣವೇ ರೈತರಿಗೆ ವಿತರಿಸಬೇಕು ಎಂದರು.

2022ರಲ್ಲಿ ಬಿಜೆಪಿ ಸರ್ಕಾರವಿದ್ದಾಗ ಪ್ರತಿ ಹೆಕ್ಟೇರ್‌ಗೆ 6,800 ರೂ. ಪರಿಹಾರ ನಿಗದಿಯಾಗಿತ್ತು. ಆ ವೇಳೆ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 6,900 ರೂ. ಸೇರಿಸಿ ರೈತರ ನೆರವಿಗೆ ನಿಂತಿದ್ದರು. ಪ್ರಸ್ತುತ ಕಾಂಗ್ರೆಸ್ ಸರ್ಕಾರವೂ ಬಿಜೆಪಿ ಸರ್ಕಾರದ ಮಾದರಿಯಲ್ಲೇ ಹೆಚ್ಚುವರಿ ಪರಿಹಾರ ಸೇರಿಸಿ ತಕ್ಷಣವೇ ರೈತರಿಗೆ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.