ಶಿವಮೊಗ್ಗದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಬಿ.ವೈ.ರಾಘವೇಂದ್ರ ಮಾತನಾಡಿದರು. ವಿ.ಅಭಿಷೇಕ್, ಡಾ.ವಿರೂಪಾಕ್ಷಪ್ಪ ಇದ್ದರು. 
ಶಿವಮೊಗ್ಗ

ಸಿಮ್ಸ್‌ನಲ್ಲಿ ಶಿಶುಗಳ ಆರೈಕೆಗಾಗಿ ಎನ್‌ಐಸಿಯು ವಾರ್ಡ್ I nicu ward

ಪ್ರಮುಖ ಮುಖ್ಯಾಂಶಗಳು

  • ನಿರ್ಮಲಾ ಸೀತಾರಾಮನ್ ಅನುದಾನ ಮಂಜೂರು
  • ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾಹಿತಿ
ಶಿವಮೊಗ್ಗ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ (nirmala) ಸೀತಾರಾಮನ್ ಅವರು ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಸಿಮ್ಸ್ (ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ)ಗೆ ಐದು ಕೋಟಿ ರೂ. ಅನುದಾನ ಮಂಜೂರು ಮಾಡಿದ್ದಾರೆ. ಇದರಲ್ಲಿ ನವಜಾತ ಶಿಶುಗಳ ಆರೈಕೆಗಾಗಿ ಹೆಚ್ಚುವರಿ 30 ಬೆಡ್‌ಗಳ ಎನ್‌ಐಸಿಯು (nicu) ವಾರ್ಡ್ ನಿರ್ಮಿಸಲಾಗುವುದು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ (raghavendra) ತಿಳಿಸಿದರು.
ಸಿಮ್ಸ್‌ನಲ್ಲಿ ಎನ್‌ಐಸಿಯು ಘಟಕ ಆರಂಭಿಸುವಂತೆ ಒಂದು ವಾರದ ಹಿಂದೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದೆ. ಇದಕ್ಕೆ ಸ್ಪಂದಿಸಿರುವ ಅವರು ಅನುದಾನ ಬಿಡುಗಡೆ ಮಾಡುವಂತೆ ಸೂಚಿಸಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ವಾರ್ಡ್‌ನಲ್ಲಿ ಮೂಲ ಸೌಕರ್ಯ ಒದಗಿಸಲು 60 ಲಕ್ಷ ರೂ. ಹಾಗೂ ವೈದ್ಯಕೀಯ ಉಪಕರಣಗಳ ಖರೀದಿಗೆ 4.40 ಕೋಟಿ ರೂ. ಬಳಸಿಕೊಳ್ಳುವಂತೆ ನಿರ್ಮಲಾ ಸೀತಾರಾಮನ್ ಸೂಚಿಸಿದ್ದಾರೆ. ಕೇಂದ್ರ ವಿತ್ತ ಸಚಿವರು ತಮ್ಮ ನಿಧಿಯ ಒಂದು ವರ್ಷದ ಅನುದಾನವನ್ನು ಸಂಪೂರ್ಣವಾಗಿ ಸಿಮ್ಸ್‌ಗೆ ನೀಡಿರುವುದು ವಿಶೇಷ. ಈ ವಾರ್ಡ್ ನಿರ್ಮಾಣದಿಂದ ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೆ ಅಕ್ಕಪಕ್ಕದ ನಾಲ್ಕೈದು ಜಿಲ್ಲೆಗಳ ಜನರಿಗೂ ಅನುಕೂಲವಾಗಲಿದೆ. ಎನ್‌ಐಸಿಯು ಘಟಕ ಸ್ಥಾಪನೆಗೆ ಅನುಮೋದನೆ ಸಿಕ್ಕಿರುವುದರಿಂದ ಅಪರ ಜಿಲ್ಲಾಧಿಕಾರಿ ಟೆಂಡರ್ ಪ್ರಕ್ರಿಯೆ ಆರಂಭಿಸಲಿದ್ದಾರೆ ಎಂದು ತಿಳಿಸಿದರು.
ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲಾಯಿತು. 50 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನ ಕಿದ್ವಾಯಿ ಮಾದರಿಯಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಇಲ್ಲಿ ನಿರ್ಮಾಣವಾಗುತ್ತಿದೆ. ವೈದ್ಯಕೀಯ ಕಾಲೇಜಿನಲ್ಲಿ ಶೇ.50ರಷ್ಟು ಬೋಧಕೇತರ ಹುದ್ದೆಗಳು ಖಾಲಿಯಿವೆ. ಶೀಘ್ರವೇ ರಾಜ್ಯ ಸರ್ಕಾರ ಈ ಹುದ್ದೆಗಳನ್ನು ಭರ್ತಿ ಮಾಡಬೇಕು. ಫ್ರೀಡಂ ಪಾರ್ಕ್ ಅಥವಾ ಅರಣ್ಯ ಡಿಪೋ ಇರುವ ಜಾಗದಲ್ಲಿ ಪ್ರತ್ಯೇಕವಾಗಿ ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕು ಎಂದರು.
ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್, ಡಿಎಚ್‌ಒ ಡಾ. ನಟರಾಜ್, ಸಿಮ್ಸ್ ನಿರ್ದೇಶಕ ಡಾ. ವಿರೂಪಾಕ್ಷಪ್ಪ, ವೈದ್ಯಕೀಯ ಅಧೀಕ್ಷಕ ಡಾ. ತಿಮ್ಮಪ್ಪ, ಜಿಲ್ಲಾ ಸರ್ಜನ್ ಡಾ. ಗೀತಾ, ಆಡಳಿತಾಧಿಕಾರಿ ಡಾ. ಉಮಾ ಸದಾಶಿವ, ಡಾ.ರಮೇಶ್ ಬಾಬು ಮುಂತಾದವರಿದ್ದರು.

ಸಿಎಸ್‌ಆರ್ ನಿಧಿ ಬಳಕೆ

ವಿವಿಧ ಕಾರ್ಪೋರೇಟ್ ಕಂಪನಿಗಳು ಸಾಮಾಜಿಕ ಜವಾಬ್ದಾರಿಯಡಿ ನಿಧಿ ಒದಗಿಸುತ್ತಿದ್ದು ಸೋಲಾರ್ ಎನರ್ಜಿ ಕಾರ್ಪೋರೇಷನ್‌ನಿಂದ ಶಾರದಾ ದೇವಿ ಅಂಧರ ವಿಕಾಸ ಶಾಲೆಗೆ 23 ಲಕ್ಷ ರೂ. ವೆಚ್ಚದಲ್ಲಿ ಸೋಲಾರ್ ಅಳವಡಿಸಲಾಗುವುದು. ಪರಿಶಿಷ್ಟ ಜಾತಿ ಹಾಗೂ ಪಂಗಡದ ಕುಟುಂಬಗಳು ವಾಸಿಸುವ ಗ್ರಾಮಗಳಿಗೆ ಒಎನ್‌ಜಿಸಿಯಿಂದ ಸೋಲಾರ್ ಅಳವಡಿಸಲಾಗುತ್ತದೆ. ಈಗಾಗಲೇ ಗ್ರಾಮಗಳನ್ನು ಗುರುತಿಸಲಾಗಿದೆ. ಬೈಂದೂರಿನಲ್ಲಿ 600 ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಗುತ್ತಿದೆ ಎಂದು ಬಿ.ವೈ.ರಾಘವೇಂದ್ರ ಹೇಳಿದರು.

ರೈಲ್ವೆ-ಹೈವೆ ಕುರಿತು ಬಿವೈಆರ್ ಹೇಳಿದ್ದು

ತಾಳಗುಪ್ಪ- ಶಿರಸಿ- ಹುಬ್ಬಳ್ಳಿ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿ ಸರ್ವೇ ಕಾರ್ಯ ನಡೆಯುತ್ತಿದ್ದು, ಆರ್ಥಿಕವಾಗಿ ಕಾರ್ಯಸಾಧುವಲ್ಲ ಎಂದು ರೈಲ್ವೆ ಇಲಾಖೆ ಈಗಾಗಲೇ ತಿಳಿಸಿದೆ. ಈ ಮಾರ್ಗ ಸೇವಾದೃಷ್ಟಿಯಿಂದ ಅಷ್ಟೊಂದು ಲಾಭದಾಯಕ ಅಲ್ಲದಿದ್ದರೂ ಸರಕು ಸಾಗಣೆಗೆ ಅನುಕೂಲವಾಗುತ್ತದೆ. ಆರ್ಥಿಕವಾಗಿ ಲಾಭದಾಯಕ ಎಂದು ರೈಲ್ವೆ ಇಲಾಖೆಗೆ ಮನವರಿಕೆ ಮಾಡಿಕೊಟ್ಟು ಮಾರ್ಗ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು. ಬೀರೂರು-ಶಿವಮೊಗ್ಗ ನಡುವೆ ರೈಲ್ವೆ ದ್ವಿಪಥ ನಿರ್ಮಾಣಕ್ಕೆ ಇನ್ನೂ ಅನುಮತಿ ಸಿಕ್ಕಿಲ್ಲ. ಅನುಮತಿಗೆ ರೈಲ್ವೆ ಸಚಿವರ ಜತೆ ಚರ್ಚಿಸುವುದಾಗಿ ಬಿ.ವೈ.ರಾಘವೇಂದ್ರ ಹೇಳಿದರು. ಶಿವಮೊಗ್ಗ-ಭದ್ರಾವತಿ ನಡುವಿನ ಮಾಚೇನಹಳ್ಳಿ ಬಳಿ ತಾಂತ್ರಿಕ ಕಾರಣಗಳಿಂದ ಹೆದ್ದಾರಿ ಕಾಮಗಾರಿ ವಿಳಂಬವಾಗಿದೆ. ಮಲವಗೊಪ್ಪ ಜನರು ಭೂಮಿ ಬಿಟ್ಟುಕೊಡಲು ನಿರಾಕರಿಸಿರುವುದು ಮುಖ್ಯ ಕಾರಣ ಎಂದರು.
"

ಐಸಿಯುಗಿಂತಲೂ ಎನ್‌ಐಸಿಯು ಘಟಕದ ನಿರ್ವಹಣೆ ಅತ್ಯಂತ ಸೂಕ್ಷ್ಮವಾಗಿದೆ. ಹೀಗಾಗಿ ವಿಶೇಷ ಕಾಳಜಿ ವಹಿಸುವಂತೆ ಸಂಬಂಧಿಸಿದವರಿಗೆ ಸೂಚಿಸಲಾಗಿದೆ. ಈ ಘಟಕದಲ್ಲಿ ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಿಕೊಳ್ಳಬೇಕು. ತುರ್ತು ಸಂದರ್ಭದಲ್ಲಿ ಮಕ್ಕಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವಂತೆ ಸೂಚಿಸಿದ್ದೇನೆ.