ಪ್ರತಿಷ್ಠಾಪನೆಗೊಂಡ ನಾಗದೇವರ ವಿಗ್ರಹ.
ಶಿಕಾರಿಪುರ: ಪಟ್ಟಣದ ಹಳೇ ಹೊನ್ನಾಳಿ ರಸ್ತೆಯಲ್ಲಿರುವ ನಾಗರಕಟ್ಟೆಯ ನೂತನ ವಿಗ್ರಹ ಪ್ರತಿಷ್ಠಾಪನಾ ಧಾರ್ಮಿಕ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ ವಾಚನ, ಸಪ್ತ ಶುದ್ಧಿ, ವಾಸ್ತುಪೂಜೆ, ವಾಸ್ತುಹೋಮ, ರಾಕ್ಷೋಘ್ನ ಹೋಮ, ದಿಕ್ಪಾಲಕ ಪೂಜೆ, ಬಿಂಬಶುದ್ಧಿ, ಬಿಂಬಾಧಿವಾಸ ಹಾಗೂ ಪ್ರತಿಷ್ಠಾಧಿವಾಸದೊಂದಿಗೆ ಹೋಮಾದಿಗಳು ಜರುಗಿದವು.
ಬುಧವಾರ ಬೆಳಗ್ಗೆ ಕರ್ಕಾಟಕ ಲಗ್ನದಲ್ಲಿ ನೂತನ ನಾಗ ಪ್ರತಿಮೆ ಪ್ರತಿಷ್ಠಾಪನಾ ಕಾರ್ಯ ವಿಧಿಬದ್ಧವಾಗಿ ಜರುಗಿತು. ತದನಂತರ ಗಣಪತಿ ಪೂಜೆ, ಪುಣ್ಯಾಹ, ದೇವತಾ ಪ್ರತಿಷ್ಠೆ, ಪವಮಾನ ಹೋಮ, ನವಕಲಶ ಮತ್ತು ತತ್ವ ಕಲಾ ಹೋಮಗಳು ನಡೆಯಲಿವೆ. ಆಶ್ಲೇಷ ಬಲಿ ಹಾಗೂ ಉದ್ಯಾಪನಾ ಹೋಮಗಳು ನೆರವೇರಿದವು.
ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗದೊಂದಿಗೆ ಧಾರ್ಮಿಕ ಕಾರ್ಯಕ್ರಮ ಸಂಪನ್ನಗೊಂಡಿತು. ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಶಿಕಾರಿಪುರ ಹಾಗೂ ಸುತ್ತಮುತ್ತಲಿನ ಭಕ್ತರು ಆಗಮಿಸಿದ್ದರು. ತಾಲೂಕಿನ ಸುಭಿಕ್ಷೆಗಾಗಿ ಪ್ರಾರ್ಥಿಸಿದರು.
ನಾಗರಕಟ್ಟೆ ಸಮಿತಿ ಅಧ್ಯಕ್ಷ ಮಹೇಂದ್ರ ಮಾತನಾಡಿ, ಈ ನಾಗರಕಟ್ಟೆ ಅತ್ಯಂತ ಪುರಾತನವಾದುದು. ಭಕ್ತರ ಸಹಕಾರದೊಂದಿಗೆ ಸಮಿತಿಯು ಜೀರ್ಣೋದ್ಧಾರ ಕಾರ್ಯ ಹಮ್ಮಿಕೊಂಡು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ನಾಗದೇವರ ಶಿಲಾ ಪ್ರತಿಮೆಯನ್ನು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಲಾಗಿದೆ. ಪ್ರಧಾನ ಪುರೋಹಿತರಾಗಿ ಉಡುಪಿಯ ಗೋಪಾಲಕೃಷ್ಣ ಭಟ್, ಅಂಜನ್ ಭಟ್ ಸೇರಿ ಸ್ಥಳೀಯ ಪುರೋಹಿತರ ಪೌರೋಹಿತ್ಯದಲ್ಲಿ ನೆರವೇರಿತು ಎಂದರು.
ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಆರ್.ಡಿ.ಸತೀಶ್, ಪುರೋಹಿತರಾದ ಗಣಪತಿ ಭಟ್, ಶಿವು ಭಟ್, ಪ್ರದೀಪ್ ಕುಲಕರ್ಣಿ, ನರಸಿಂಹ ಜೋಯ್ಸ, ಹರೀಶ್ ಜೋಯ್ಸ, ಶರತ್ ಜೋಶಿ, ಅನಿಲ್ ಜೋಯ್ಸ್, ಹೋತನಕಟ್ಟೆ ಪ್ರಕಾಶ್, ಉಮೇಶ್ ಭಟ್, ಪ್ರಮುಖರಾದ ಕೊಟ್ಟ ಹರೀಶ್, ಕೃಷ್ಣಮೂರ್ತಿ, ತಡಗಣಿ ರಾಘವೇಂದ್ರ, ಗೌರಿ, ಸುನೀತಾ, ರೂಪಾ ವೆಂಕಟೇಶ್ ಇತರರಿದ್ದರು.