ಸೊರಬ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ರಥ ಸಮರ್ಪಣೆಯ ವೇದಿಕೆ ಕಾರ್ಯಕ್ರಮವನ್ನು ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು. ಭಾರತಿ ಶೆಟ್ಟಿ, ಅನಿತಾ ಮಧು ಬಂಗಾರಪ್ಪ, ನಿಖಿಲ್, ಕೆ.ಪುರಂದರ, ನಾರಾಯಣ ಭಟ್ ಇತರರಿದ್ದರು.
ಸೊರಬ: ಪಟ್ಟಣದ ಶ್ರೀ ಲಕ್ಷ್ಮೀ ರಂಗನಾಥ ದೇವಸ್ಥಾನವು ತಾಲೂಕಿಗೆ ಕೀರ್ತಿಶಿಖರವಾದುದು. ನೂತನ ರಥ ನಿರ್ಮಾಣದಿಂದ ದಶಕಗಳ ಕನಸು ಈಡೇರಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಪಟ್ಟಣದಲ್ಲಿ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿಯ ನೂತನ ರಥ ಲೋಕಾರ್ಪಣೆ, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ಸೊರಬ ಪೊಲೀಸ್ ಹಾಗೂ ಅಗ್ನಿಶಾಮಕ ಠಾಣೆಗೆ ವಾಹನಗಳ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾಲೂಕಿನಲ್ಲಿರುವ ಪುರಾಣ ಪ್ರಸಿದ್ಧ ದೇವಸ್ಥಾನಗಳು ಕ್ಷೇತ್ರದ ಮಹಿಮೆಯನ್ನು ರಾಜ್ಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿವೆ. ಪುರೋಹಿತರಾದ ನಾರಾಯಣ ಭಟ್ ಅವರು ಹೊಸ ರಥವನ್ನು ನಿರ್ಮಾಣ ಮಾಡಲು ಮನವಿ ಮಾಡಿದ್ದರು. ಅನೇಕರ ಶ್ರಮದಿಂದ ಇಂದು ಸಮರ್ಪಣೆ ಆಗಿದೆ. ತೇರು ಮನೆ ನಿರ್ಮಾಣಕ್ಕೆ 10 ಲಕ್ಷ ರೂ. ಮಂಜೂರಾಗಿದೆ. 30 ಲಕ್ಷ ರೂ. ಹೆಚ್ಚುವರಿ ಅನುದಾನದಲ್ಲಿ ಸುಂದರವಾದ ತೇರು ಮನೆ ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನಲ್ಲಿ ಬೇಸಿಗೆಯಲ್ಲಿ ಅವಘಡಗಳು ಹೆಚ್ಚು ಸಂಭವಿಸುತ್ತವೆ. ಪಶು, ಅಗ್ನಿಶಾಮಕ ಹಾಗೂ ಪೊಲೀಸ್ ಇಲಾಖೆಗೆ ವಾಹನಗಳನ್ನು ವಿತರಿಸಲಾಗಿದೆ. ಸಣ್ಣಪುಟ್ಟ ವಿಷಯಗಳಿಗೆ ಪ್ರಕರಣ ದಾಖಲಿಸದೆ ಪೋಲಿಸರು ರಾಜಿ ಸಂಧಾನ ಮಾಡುವ ಮೂಲಕ ತಾಲೂಕಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ತಿಳಿಸಿದರು.
ಕ್ಷೇತ್ರದಲ್ಲಿ ರಸ್ತೆ, ಶಾಲೆ ಹಾಗೂ ದೇವಸ್ಥಾನಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ತಾಲೂಕಿನಲ್ಲಿ 162 ವಿವಿಧ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣವಾಗಿದ್ದು, ಶೀಘ್ರ ಕಾಮಗಾರಿ ಆರಂಭಿಸಲಾಗುವುದು. ಇಲ್ಲಿಯವರೆಗೆ ತಾಲೂಕಿನ ಅಭಿವೃದ್ಧಿ ಕಾರ್ಯಗಳಿಗೆ 400 ಕೋಟಿ ರೂ. ಅನುದಾನ ತರಲಾಗಿದೆ ಎಂದರು.
ಎಂಎಲ್‌ಸಿ ಭಾರತಿ ಶೆಟ್ಟಿ, ಅನಿತಾ ಮಧು ಬಂಗಾರಪ್ಪ, ರಥ ಸಮರ್ಪಣಾ ಸಮಿತಿ ಅಧ್ಯಕ್ಷ ಎಚ್.ಗಣಪತಿ, ಉಪಾಧ್ಯಕ್ಷ ಎಂ.ಡಿ.ಉಮೇಶ್, ತಹಸೀಲ್ದಾರ್ ಕೆ. ಪುರಂದರ, ಎಸ್ಪಿ ನಿಖಿಲ್, ಡಿವೈಎಸ್‌ಪಿ ಕೇಶವ, ಸಿಪಿಐ ಮಹಾಂತೇಶ್ ಲಂಬಿ, ಪಿಎಸ್‌ಐಗಳಾದ ನವೀನ್, ಚಂದನ್, ಇಒ ಶಶಿಧರ್, ಬಿಇಒ ಆರ್.ಪುಷ್ಪಾ, ರಥ ನಿರ್ಮಾಣ ಶಿಲ್ಪಿ ಪುರುಷೋತ್ತಮ, ಬಗರ್‌ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ.ಶೇಖರ್, ಪ್ರಶಾಂತ್ ಮೇಸ್ತ್ರಿ, ಡಾಕಪ್ಪ, ಬಸವರಾಜ್ ಶೇಟ್, ತಬಲಿ ಬಂಗಾರಪ್ಪ, ಸದಾನಂದ ಗೌಡ, ಶ್ರೀರಂಜನಿ, ಎಂ.ಡಿ.ಉಮೇಶ್, ಜೈಶೀಲ ಗೌಡ, ದಿವಾಕರ್ ಭಟ್ ಭಾವೆ ಇತರರಿದ್ದರು.