ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಮಾತನಾಡಿದರು. ಹಿಟ್ಟೂರು ರಾಜು, ಟಿ.ಎಂ.ಚಂದ್ರಪ್ಪ,ಕೆ.ರಾಘವೇಂದ್ರ, ಇ.ಬಿ.ಜಗದೀಶ, ಎಂ.ಮಹದೇವಪ್ಪ, ಸಿ.ಚಂದ್ರಪ್ಪ, ಸಿ.ಬಿ.ಹನುಮಂತಪ್ಪ ಸುದ್ದಿಗೋಷ್ಠಿಯಲ್ಲಿದ್ದರು.
ಶಿವಮೊಗ್ಗ: ರೈತ ಸಂಘದ ಸಂಸ್ಥಾಪಕ ಎನ್.ಡಿ.ಸುಂದರೇಶ್(N.D.Sundaresh) ಅವರ ನೆನಪಿನ ಸಭೆಯನ್ನು ಡಿ.21ರಂದು ಬೆಳಗ್ಗೆ 10ಕ್ಕೆ ಪತ್ರಿಕಾ ಭವನದಲ್ಲಿ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘ(Raita sanga) ಮತ್ತು ಹಸಿರು ಸೇನೆ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಹೇಳಿದರು.
ರೈತರು, ಮಹಿಳೆಯರು, ಜನಸಾಮಾನ್ಯರಿಗೆ ಆಗುತ್ತಿದ್ದ ಅನ್ಯಾಯ, ಅಗೌರವ, ಶೋಷಣೆಗಳ ವಿರುದ್ಧ ಕರ್ನಾಟಕದ ಹಳ್ಳಿಗಳ ಮೂಲೆಮೂಲೆಗೆ 13 ವರ್ಷ ತಿರುಗಾಡಿ ಅವಿಶ್ರಾಂತವಾಗಿ ಎನ್.ಡಿ.ಸುಂದರೇಶ್ ಅವರು ದುಡಿದಿದ್ದರು. ಅವರ ಸ್ಮರಣಾರ್ಥ ಮತ್ತು ಪೊಲೀಸರ ಗುಂಡಿಗೆ ಹುತಾತ್ಮರಾದ 153 ರೈತರ ಸ್ಮರಿಸಲು ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಳ್ಳಿಯ ಸಂಸ್ಕೃತಿಯನ್ನು ಉಳಿಸಿ ಪ್ರಾಮಾಣಿಕತೆ, ನೈತಿಕತೆ ಬೆಳೆಸಬೇಕಿದೆ. ಸ್ವಾಭಿಮಾನ, ಆತ್ಮಗೌರವ ಕಾಪಾಡಿಕೊಳ್ಳಬೇಕಾದರೆ ಸಮಾನತೆ ಸಾಧಿಸಬೇಕು. ಅದು ರೈತರಿಂದ ಸಾಧ್ಯವಿದ್ದು, ರೈತ ಕುಲದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅದಕ್ಕಾಗಿ ಎನ್.ಡಿ.ಸುಂದರೇಶ್ ಅವರು ಹಾಕಿಕೊಟ್ಟ ಶಿಸ್ತು, ಪ್ರಾಮಾಣಿಕತೆ, ವೈಚಾರಿಕ ವಿಚಾರಗಳ ಮಾರ್ಗದರ್ಶನದಲ್ಲಿ ಸಂಘಟನೆಯನ್ನು ಬಲಪಡಿಸಲು ನಾವೆಲ್ಲರೂ ಪಣತೊಡಬೇಕಿದೆ ಎಂದರು.
ನೆನಪಿನ ಸಭೆ ನಂತರ ರಾಜ್ಯ ಸಮಿತಿ ಸಭೆ ಕರೆದಿದ್ದು, ಕೇಂದ್ರ ಸರ್ಕಾರ ಎಂಎಸ್‌ಪಿ(Msp)ಯನ್ನು ಅವೈಜಾನಿಕವಾಗಿ ನಿಗದಿ ಮಾಡಿದೆ. ಕರ್ನಾಟಕ ಕೃಷಿ ಬೆಲೆ ಆಯೋಗ(Prices Commission) ಪ್ರಕಟಿಸಿದಂತೆ ಭತ್ತಕ್ಕೆ 6 ಸಾವಿರ ರೂ., ಮೆಕ್ಕೆಜೋಳಕ್ಕೆ 5,100 ರೂ. ಆಗುತ್ತದೆ. ಸ್ವಾಮಿನಾಥನ್ ವರದಿ ಪ್ರಕಾರ ಬೆಲೆ ಇನ್ನೂ ಹೆಚ್ಚಾಗುತ್ತದೆ. ಹಾಗಾಗಿ ಕೇಂದ್ರ ಸರ್ಕಾರ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ರಾಜ್ಯ ಸರ್ಕಾರ ತಕ್ಷಣವೇ ಖರೀದಿ ಕೇಂದ್ರವನ್ನು ಆರಂಭಿಸಬೇಕು ಎಂಬುದು ಒಳಗೊಂಡಂತೆ ಹಲವು ಹಕ್ಕೋತ್ತಾಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದು ಹೇಳಿದರು.
ಸಂಘದ ಉಪಾಧ್ಯಕ್ಷರಾದ ಹಿಟ್ಟೂರು ರಾಜು, ಟಿ.ಎಂ.ಚಂದ್ರಪ್ಪ, ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಇ.ಬಿ.ಜಗದೀಶ, ಉಪಾಧ್ಯಕ್ಷ ಎಂ.ಮಹದೇವಪ್ಪ, ಶಿವಮೊಗ್ಗ ತಾಲೂಕು ಅಧ್ಯಕ್ಷ ಸಿ.ಚಂದ್ರಪ್ಪ, ಭದ್ರಾವತಿ ತಾಲೂಕು ಅಧ್ಯಕ್ಷ ಸಿ.ಬಿ.ಹನುಮಂತಪ್ಪ ಸುದ್ದಿಗೋಷ್ಠಿಯಲ್ಲಿದ್ದರು.
ಬೆಳೆ ವಿಮೆ ಅಧಿಕಾರಿಗಳ ವೈಫಲ್ಯ
ಹವಮಾನ ಆಧಾರಿತ ಬೆಳೆ ವಿಮೆ ವಿತರಣೆಯಲ್ಲಿ ಅಧಿಕಾರಿಗಳ ವೈಫಲ್ಯ ಎದ್ದು ಕಾಣುತ್ತಿದೆ. ಅತಿವೃಷ್ಟಿ ಸಮೀಕ್ಷೆ ಸಮರ್ಪಕವಾಗಿ ಆಗಿಲ್ಲ. ನಷ್ಟದ ವರದಿಯನ್ನು ಸರ್ಕಾರಕ್ಕೆ ಸರಿಯಾಗಿ ಕಳುಹಿಸಿಲ್ಲ. ಹಾಗಾಗಿ ತಕ್ಷಣವೇ 2024ನೇ ಸಾಲಿನ ಬೆಳೆ ವಿಮೆ ಮತ್ತು ಹವಮಾನ ಆಧಾರಿತ ಬೆಳೆ ವಿಮೆ ಪರಿಹಾರವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಎಚ್.ಆರ್.ಬಸವರಾಜಪ್ಪ ಆಗ್ರಹಿಸಿದರು. ಅಡಕೆ ಬೆಳೆಗೆ ಬರಿತ್ತಿರುವ ರೋಗಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಬೆಳೆ ನಷ್ಟವಾದ ರೈತರಿಗೆ ತಕ್ಷಣವೇ ಮರು ಸಮೀಕ್ಷೆ ನಡೆಸಿ ವಿಮಾ ಕಂಪನಿಗಳಿಂದ ಪರಿಹಾರ ನೀಡಬೇಕು ಎಂದರು.