ಸಾಗರ: ವೇದನಾದ ಪ್ರತಿಷ್ಠಾನ, ಸದ್ಗುರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ವಿದ್ಯಾಲಯದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರಸಭೆ ಆವರಣದ ಗಾಂಧಿ ಮೈದಾನದಲ್ಲಿ ಜ.16ರಿಂದ 18ರವರೆಗೆ 26ನೇ ವರ್ಷದ ರಾಷ್ಟ್ರೀಯ ಸಂಗೀತೋತ್ಸವ ಆಯೋಜಿಸಲಾಗಿದೆ ಎಂದು ವಿದುಷಿ ವಸುಧಾ ಶರ್ಮ ಹೇಳಿದರು.
16ರಂದು ಮಧ್ಯಾಹ್ನ 12ಕ್ಕೆ ವಿ.ದತ್ತಾತ್ರೇಯ ಮೇಲನ್ಕರ್ ಬೆಂಗಳೂರು ಅವರಿಂದ ಹಿಂದೂಸ್ತಾನಿ ಸಂಗೀತವಿದೆ. ಸಂಜೆ 5.30ಕ್ಕೆ ಡಾ. ಪ.ಪೂ.ವೈ.ರಾಜಾರಾಂ ಸಹೋದರರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಾದಂತರಂಗ ಪತ್ರಿಕೆಯನ್ನು ಸಾಹಿತಿ ರಾಧಾಕೃಷ್ಣ ಬಂದಗದ್ದೆ ಬಿಡುಗಡೆ ಮಾಡುವರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಹರತಾಳು ಹಾಲಪ್ಪ ಮತ್ತಿತರರು ಭಾಗವಹಿಸುವರು. ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ 10 ಜನರನ್ನು ಸನ್ಮಾನಿಸಲಾಗುತ್ತಿದೆ. ಸ್ವರಲಯ ಲಹರಿ ಕಾರ್ಯಕ್ರಮದಲ್ಲಿ ಪುತ್ತೂರಿನ ವೈ.ಜಿ.ಶ್ರೀಲತಾ ನಿಕ್ಷಿತ್ ಅವರಿಂದ ವೀಣಾ ವಾದನ, ಡಾ. ಪ್ರತಿ ಸತೀಶಕುಮಾರ್ ಅವರಿಂದ ಮೃದಂಗ, ಡಾ. ಸುರೇಶ್ ವೈದ್ಯನಾಥನ್ ಅವರಿಂದ ಘಟಂ ವಾದನ ಇರುತ್ತದೆ. ರಾತ್ರಿ 9.30ಕ್ಕೆ ಮುಂಬೈನ ವಿ. ಸಮರ್ಥ ನಗರ್‌ಕರ್ ಅವರಿಂದ ಹಿಂದೂಸ್ತಾನಿ ಸಂಗೀತ ಇರುತ್ತದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
17ರಂದು ಬೆಳಗ್ಗೆ 9.30ರಿಂದ ವಿದ್ಯಾಲಯದ ವಿದ್ಯಾರ್ಥಿಗಳಿಂದ ಗಾಯನ, ಮಧ್ಯಾಹ್ನ 12ರಿಂದ ಸಮೀರ್ ಕುಲಕರ್ಣಿ ಅವರಿಂದ ಹಿಂದೂಸ್ತಾನಿ ಸಂಗೀತ ಏರ್ಪಡಿಸಿದೆ. ಸಂಜೆ 6.30ರಿಂದ ವಿ.ಕಾಂಚನಾ ಶ್ರೀರಂಜಿನಿ, ವಿ. ಕಾಂಚನಾ ಶ್ರುತಿ ರಂಜನಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ. ರಾತ್ರಿ 9.30ಕ್ಕೆ ವಿದುಷಿ ವಸುಧಾ ಶರ್ಮ ಅವರಿಂದ ಮತ್ತು 18ರಂದು ಮಧ್ಯಾಹ್ನ 12ಕ್ಕೆ ವಿದುಷಿ ಭಾರತಿ ಪ್ರತಾಪ್ ಅವರಿಂದ ಹಿಂದೂಸ್ತಾನಿ ಸಂಗೀತ ಇರುತ್ತದೆ. ಸಂಜೆ 5.30ಕ್ಕೆ ಸಮಾರೋಪ ಸಮಾರಂಭದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು, ನಿವೃತ್ತ ಸಿವಿಲ್ ಅಭಿಯಂತ ರಮೇಶ್, ನಗರಸಭೆ ಮಾಜಿ ಅಧ್ಯಕ್ಷೆ ಮೈತ್ರಿ ಪಾಟೀಲ್ ಮತ್ತಿತರರು ಭಾಗವಹಿಸುವರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಡಿವಾಳಯ್ಯ ಸಾಲಿ ಅವರನ್ನು ಸನ್ಮಾನಿಸಲಾಗುತ್ತದೆ ಎಂದರು.
ಪಂಡಿತ್ ಮೋಹನ್ ಹೆಗಡೆ, ವಿದ್ವಾನ್ ನರಸಿಂಹಮೂರ್ತಿ, ಮೋಹನ್ ಶರ್ಮ, ಶ್ರೀಧರ ಶ್ಯಾನಭಾಗ್ ಸುದ್ದಿಗೋಷ್ಠಿಯಲ್ಲಿದ್ದರು.