ಸಾಗರದಲ್ಲಿ ಶಿಮುಲ್ ಶೇಖರಣ, ತಾಂತ್ರಿಕ ಹಾಗೂ ಮಾರುಕಟ್ಟೆ ವಿಭಾಗದ ನೂತನ ಉಪ ಕಚೇರಿ, ಸಭಾಂಗಣ ಕಾಮಗಾರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ ನೆರವೇರಿಸಿದರು. ಆರ್.ಎಂ.ಮಂಜುನಾಥ ಗೌಡ, ವಿದ್ಯಾಧರ, ದಯಾನಂದ್, ಶೇಖರ್ ಇತರರಿದ್ದರು. 
ಶಿವಮೊಗ್ಗ

ನಂದಿನಿ ಬ್ರಾೃಂಡ್‌ನಿಂದ ಉದ್ಯೋಗಾವಕಾಶ ಸೃಷ್ಟಿ | stone Laying function

ಸಾಗರ: ನಂದಿನಿ ಉತ್ಪನ್ನಗಳನ್ನು ಎಲ್ಲೆಡೆ ವಿಸ್ತರಿಸುವಲ್ಲಿ ಶಿಮುಲ್ ಸೆಂಟರ್‌ಗಳು ಪ್ರಮುಖಪಾತ್ರ ವಹಿಸುತ್ತಿವೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರದ ಪ್ರವಾಸಿ ಮಂದಿರ ವೃತ್ತದಲ್ಲಿ ಶನಿವಾರ ಶಿಮುಲ್ ಶೇಖರಣ, ತಾಂತ್ರಿಕ ಹಾಗೂ ಮಾರುಕಟ್ಟೆ ವಿಭಾಗದ ನೂತನ ಉಪ ಕಚೇರಿ, ಸಭಾಂಗಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಸಾಗರದಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ನಂದಿನಿ ಮಳಿಗೆ ಜತೆಗೆ ಕಚೇರಿ ಕಟ್ಟಡ, ಸಭಾಭವನ ನಿರ್ಮಿಸಲಾಗುತ್ತಿದೆ. ಒಂದೇ ಮಳಿಗೆಯಲ್ಲಿ ನಂದಿನಿ ಎಲ್ಲ ಉತ್ಪನ್ನಗಳನ್ನು ಸಿಗುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
 ಸಾಗರದಲ್ಲಿ ನಂದಿನಿ ಮಳಿಗೆಯನ್ನು ಬೇರೆಬೇರೆ ಭಾಗಗಳಲ್ಲಿ ಮಾಡುವ ಮೂಲಕ ಅನೇಕ ಯುವಕರಿಗೆ ಉದ್ಯೋಗ ಕಲ್ಪಿಸಲಾಗಿದೆ. ಹಾಲು ಉತ್ಪಾದನೆ ಒಂದು ದೊಡ್ಡ ಉದ್ಯಮವಾಗಿ ರೂಪುಗೊಂಡಿದ್ದು ದೇಶದ ಆರ್ಥಿಕತೆಗೆ ದೊಡ್ಡ ಶಕ್ತಿ ತುಂಬಿದೆ. ಅದರಲ್ಲಿಯೂ ನಂದಿನಿ ಹಾಲು ಮತ್ತು ಅದರ ಉತ್ಪನ್ನಕ್ಕೆ ವ್ಯಾಪಕ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಇದೆ ಎಂದು ತಿಳಿಸಿದರು.
ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಪ್ರಸ್ತುತ ಕಲಬೆರಕೆ ವಸ್ತುಗಳು ನಮ್ಮ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುತ್ತಿವೆ. ನಂದಿನಿ ತುಪ್ಪ ಸೇವನೆ ಆರೋಗ್ಯ ರಕ್ಷಣೆಗೂ ಪೂರಕವಾಗಿದೆ. ಅಲ್ಲದೆ ತಿರುಪತಿ ತಿಮ್ಮಪ್ಪನ ಲಾಡು ಪ್ರಸಾದ ತಯಾರಿಕೆಗೂ ಹೋಗುತ್ತಿದೆ. ಬೇಡಿಕೆಗೆ ತಕ್ಕಂತೆ ಪೂರೈಕೆ ಕಷ್ಟವಾಗುತ್ತಿದೆ ಎಂದರು.
ಶಿಮುಲ್ ಅಧ್ಯಕ್ಷ ವಿದ್ಯಾಧರ ಮಾತನಾಡಿ, ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಮೂರು ಅಂತಸ್ತಿನ ಕಟ್ಟಡ ನಿರ್ಮಿಸುತ್ತಿದ್ದು, ಮೊದಲ ಅಂತಸ್ತಿನಲ್ಲಿ ಎಂಟು ಮಳಿಗೆ, ಎರಡನೇ ಅಂತಸ್ತಿನಲ್ಲಿ ಕಚೇರಿ, ಮೂರನೇ ಅಂತಸ್ತಿನಲ್ಲಿ ಸಭಾಂಗಣ ವ್ಯವಸ್ಥೆ ಇರುತ್ತದೆ. ನೂತನ ಕಟ್ಟಡ ಮೂಲಕ ನಂದಿನಿ ಉತ್ಪನ್ನ ಗ್ರಾಹಕರಿಗೆ ಸಿಗಬೇಕು ಎನ್ನುವುದು ನಮ್ಮ ಉದ್ದೇಶ. ಸಹಕಾರ ವ್ಯವಸ್ಥೆಯಲ್ಲಿ ಇರುವವರಿಗೆ ಅನುಕೂಲ ಕಲ್ಪಿಸಲು ಈ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ದಯಾನಂದ್, ವ್ಯವಸ್ಥಾಪಕ ನಿರ್ದೇಶಕ ಶೇಖರ್, ಕಲಸೆ ಚಂದ್ರಪ್ಪ, ಗಣಪತಿ ಮಂಡಗಳಲೆ, ಕೆ.ಎಂ.ಸತ್ಯನಾರಾಯಣ ಇತರರಿದ್ದರು.