ಮಾಜಿ ಸಚಿವ ಕಿಮ್ಮನೆ ರತ್ನಾಕರ್  
ಶಿವಮೊಗ್ಗ

ಮೇಲ್ಸೇತುವೆಗೆ ಸುಂದರೇಶ್ ಹೆಸರಿಡಿ

ಜಿ. ಗಜೇಂದ್ರ
ತೀರ್ಥಹಳ್ಳಿ: ಶಿವಮೊಗ್ಗದ ಹೊಳೆ ಬಸ್‌ಸ್ಟಾಪ್ ಸಮೀಪದ ಹೊಳೆಹೊನ್ನೂರಿಗೆ ಹೋಗುವ ಮೇಲ್ಸೇತುವೆಗೆ ರೈತ ನಾಯಕ ಎನ್.ಡಿ.ಸುಂದರೇಶ್ ಅವರ ಹೆಸರು ಇಡುವಂತೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಸಮೀಪದ ನಾಬಳ ಗ್ರಾಮದಲ್ಲಿ ಜನಿಸಿ ಭದ್ರಾವತಿ ತಾಲೂಕಿನ ಅಶೋಕನಗರವನ್ನು ತಮ್ಮ ಕರ್ಮಭೂಮಿಯಾಗಿ ಮಾಡಿಕೊಂಡಿದ್ದ ಸುಂದರೇಶ್ ಅವರು ರೈತರ ಧ್ವನಿಯಾಗಿ ಹೋರಾಟಗಳನ್ನು ನಡೆಸುವ ಮೂಲಕ ಇಡೀ ವಿಶ್ವದ ಗಮನ ಸೆಳೆದದ್ದು ಮಾತ್ರವಲ್ಲದೆ ರಾಜ್ಯಾದ್ಯಂತ ರೈತರನ್ನು ಒಗ್ಗೂಡಿಸಿ ಅವರಲ್ಲಿ ಸ್ವಾಭಿಮಾನದ ಕಿಚ್ಚನ್ನು ಹಚ್ಚಿದ್ದರು.  ಸದಾ ಬೆನ್ನು ಬಾಗಿಸಿಕೊಂಡು ಅಧಿಕಾರಶಾಹಿಯ ಎದುರು ಕೈಕಟ್ಟಿ ನಿಲ್ಲುತ್ತಿದ್ದ ರೈತರು ಇಂದು ಎದೆಯುಬ್ಬಿಸಿ ಹೋರಾಡಲು ನಾಲ್ಕು ದಶಕಗಳ ಕಾಲ ಸುಂದರೇಶ್ ರೂಪಿಸಿದ ಚಳವಳಿಗಳೇ ಕಾರಣ ಎಂದು ಹೇಳಿಕೆ ನೀಡಿದ್ದಾರೆ.
ಸಮಾಜವಾದ ಮತ್ತು ಜಾತ್ಯತೀತ ಮೌಲ್ಯಗಳನ್ನು ಪ್ರಜಾಸತ್ತಾತ್ಮಕವಾಗಿ ಗಟ್ಟಿಗೊಳಿಸುವ ಅಗತ್ಯತೆಯನ್ನು ಸಮಾಜದ ಬಹುದೊಡ್ಡ ರೈತ ಸಮೂಹಕ್ಕೆ ಹೇಳಿಕೊಟ್ಟು ರೈತರ ಹೃದಯದಲ್ಲಿ ಉಳಿದಿದ್ದಾರೆ. ಇಂದಿಗೂ ಪಕ್ಷಾತೀತವಾಗಿ ಅವರ ವಿಚಾರಧಾರೆಗಳನ್ನು ಒಪ್ಪುವ ಜನಸಮೂಹ ರಾಜ್ಯಾದ್ಯಂತ ಇದೆ. ಅವರ ಹೆಸರು ರಾಜ್ಯದ ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ನಿಲ್ಲಬೇಕಿದೆ. ಹಾಗಾಗಿ ಮೇಲ್ಸೇತುವೆಗೆ ಎನ್.ಡಿ.ಸುಂದರೇಶ್ ಹೆಸರನ್ನು ಇಡುವ ಮೂಲಕ ಅವರ ನೆನಪು ಸದಾ ಹಸಿರಾಗಿರುವಂತೆ ಮಾಡಬೇಕು ಎಂದು ಕಿಮ್ಮನೆ ರತ್ನಾಕರ್ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.