ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೆ.ಎಸ್.ಈಶ್ವರಪ್ಪ, ಪ್ರೊ.ಎಲ್.ಕೆ.ಶ್ರೀಪತಿ, ಪ್ರೊ.ಬಿ.ಎಂ.ಕುಮಾರಸ್ವಾಮಿ, ಎಂ.ಶಂಕರ್, ಕೆ.ಇ.ಕಾಂತೇಶ್ ಇದ್ದರು. 
ಶಿವಮೊಗ್ಗ

ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧ ನಾಡಿದ್ದು ಜಾಥಾ I pumped storage

ಪ್ರಮುಖ ಮುಖ್ಯಾಂಶಗಳು

  • ಕಾನೂನು ಹೋರಾಟ ಅನಿವಾರ್ಯವಾದರೆ ಅದಕ್ಕೂ ಸಿದ್ಧ
  • ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಘೋಷಣೆ
ಶಿವಮೊಗ್ಗ: ಪರಿಸರಕ್ಕೆ ಮಾರಕವಾದ ಅವೈಜ್ಞಾನಿಕ ಶರಾವತಿ (sharavati) ಪಂಪ್ಡ್ ಸ್ಟೋರೇಜ್ (storage) ಯೋಜನೆಯನ್ನು ವಿರೋಧಿಸಿ ಪರಿಸರಕ್ಕಾಗಿ ನಾವು ಮತ್ತು ರಾಷ್ಟ್ರಭಕ್ತರ ಬಳಗದ ಸಹಯೋಗದಲ್ಲಿ ಫೆ.12ರಂದು ನಗರದಲ್ಲಿ ಬೃಹತ್ ಪ್ರತಿಭಟನಾ (protest) ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಪ್ರಕೃತಿ ಮೇಲಿನ ಬಹಿರಂಗ ಅತ್ಯಾಚಾರ. ಯಾರದ್ದೋ ಹಿತಾಸಕ್ತಿ, ಲಾಭಕ್ಕಾಗಿ ಈ ಯೋಜನೆ ರೂಪಿಸಲಾಗುತ್ತಿದೆ. ಸಾವಿರಾರು ಕೋಟಿ ರೂ. ಲೂಟಿ ಮಾಡುವ ಹುನ್ನಾರ ಈ ಯೋಜನೆಯ ಹಿಂದಿದೆ ಎಂದು ಕಿಡಿಕಾರಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆ ಪರಿಸರ ವಿರೋಧಿ ಮಾತ್ರವಲ್ಲ ಜನವಿರೋಧಿಯೂ ಹೌದು. ಕೇಂದ್ರ, ರಾಜ್ಯ ಸರ್ಕಾರಗಳಿಗೆ ಈ ಯೋಜನೆಯ ಸಾಧಕ-ಬಾಧಕದ ಕುರಿತು ಪೂರ್ಣ ಅರಿವಿಲ್ಲದಂತಿದೆ. ಯೋಜನೆಗೆ ನಮ್ಮ ವಿರೋಧಕ್ಕೆ ಕಾರಣವಾಗಿರುವ ಅಂಶಗಳ ಬಗ್ಗೆ ಜಿಲ್ಲಾಧಿಕಾರಿಗೆ ಲಿಖಿತ ರೂಪದಲ್ಲಿ ನೀಡಲಾಗಿದೆ. ಫೆ.12ರೊಳಗೆ ಕೆಪಿಸಿಎಲ್‌ನಿಂದ ಲಿಖಿತ ಉತ್ತರ ನಿರೀಕ್ಷಿಸಲಾಗುತ್ತಿದೆ ಎಂದರು.
ಪರಿಸರವಾದಿಗಳಾದ ಪ್ರೊ. ಬಿ.ಎಂ.ಕುಮಾರಸ್ವಾಮಿ, ಪ್ರೊ. ಎಲ್.ಕೆ.ಶ್ರೀಪತಿ, ಡಾ. ಶೇಖರ್ ಗೌಳೇರ್, ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ನಗರಸಭೆ ಮಾಜಿ ಅಧ್ಯಕ್ಷ ಎಂ.ಶಂಕರ್, ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್, ಮುಖಂಡ ಮೋಹನ್ ಜಾದವ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

ಕೋರ್ಟ್‌ಗೆ ಹೋಗುತ್ತೇವೆ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಆಗುವ ಅನಾಹುತಗಳ ಬಗ್ಗೆ ವಿವರಿಸಲು ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಪ್ರಲ್ಹಾದ ಜೋಶಿ, ರಾಜ್ಯ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರನ್ನು ಭೇಟಿಯಾಗಿ ಯೋಜನೆ ಸ್ಥಗಿತಕ್ಕೆ ಮನವಿ ಮಾಡಲಾಗುವುದು. ಪರಿಸರವಾದಿಗಳೊಂದಿಗೆ ಸಮಾಲೋಚನೆ ನಡೆಸುತ್ತೇನೆ. ಈ ಯೋಜನೆ ನಿಲ್ಲಿಸುವ ಸಲುವಾಗಿ ಕಾನೂನು ಹೋರಾಟ ಅನಿವಾರ್ಯವಾದರೆ ನ್ಯಾಯಾಲಯದ ಮೊರೆ ಹೋಗಲಾಗುವುದು. ಯಾವ ಕಾರಣಕ್ಕೂ ಯೋಜನೆ ಜಾರಿಗೆ ಬಿಡುವುದಿಲ್ಲ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.


ವನಸಂಪತ್ತಿಗೆ ಮಾರಕವಾದ ಯೋಜನೆ

ಅರಣ್ಯ ಸಂರಕ್ಷಣಾ ಕಾಯ್ದೆ, ವನ್ಯಜೀವಿ ಸಂರಕ್ಷಣಾ ಕಾಯ್ದೆಯಂತಹ ಕಠಿಣ ಕಾನೂನುಗಳಿದ್ದರೂ ಅಧಿಕಾರಿಗಳು ಈ ಪರಿಸರ ಮಾರಕ ಯೋಜನೆಯನ್ನು ಜಾರಿಗೊಳಿಸಲು ಮುಂದಾಗುತ್ತಿರುವುದು ಪರಿಸರದ ಮೇಲಿನ ಸಾಮೂಹಿಕ ಅತ್ಯಾಚಾರ. ಅಳಿವಿನಂಚಿನಲ್ಲಿರುವ ಸಿಂಗಳೀಕ, ಮಂಗಟ್ಟೆ ಪಕ್ಷಿಗಳು ಪಶ್ಚಿಮಘಟ್ಟದ ಈ ಸಂರಕ್ಷಣಾ ಅರಣ್ಯ ವಲಯದಲ್ಲಿವೆ. ಇಲ್ಲಿ ಯಾವ ಕಾರಣಕ್ಕೂ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೊಳಿಸಬಾರದು ಎಂದು ಕೇಂದ್ರ ಪರಿಸರ ಇಲಾಖೆ ಅಧಿಕಾರಿ ವರದಿ ನೀಡಿದ್ದಾರೆ. ಆದರೆ ನಮ್ಮ ರಾಜ್ಯದ ಅರಣ್ಯ ಅಧಿಕಾರಿ ಸೆಂಥಿಲ್‌ಕುಮಾರ್ ಎನ್ನುವವರು ಒಂದೇ ಪುಟದ ವರದಿಯನ್ನು ನೀಡಿ, ಇಲ್ಲಿ ಯಾವುದೇ ಪ್ರಾಣಿ, ಪಕ್ಷಿಗಳಿಗೆ ಹಾನಿಯಾಗುವುದಿಲ್ಲ ಎಂದಿರುವುದು ದುರಂತ ಎಂದು ಪ್ರೊ. ಬಿ.ಎಂ.ಕುಮಾರಸ್ವಾಮಿ ಕಿಡಿಕಾರಿದರು.
"

ಈ ಯೋಜನೆ ಕಾರ್ಯಗತಗೊಳಿಸುವಾಗ ಜೆಲೆಟಿನ್‌ಗಳನ್ನು ಬಳಸಿ ಭೂಮಿಯನ್ನು ಸಿಡಿಸಲಾಗುತ್ತದೆ. ಜಲಚರ, ಕೃಷಿ ಭೂಮಿ, ಮತ್ಸೋದ್ಯಮ, ಸಸ್ಯ ಸಂಪತ್ತಿನ ಹಾನಿಗೆ ಕೆಪಿಸಿಎಲ್ ನೀಡುವ ಪರಿಹಾರವೇನು? ಎಂಬುದರ ಬಗ್ಗೆ ಸ್ಪಷ್ಟೀಕರಣ ನೀಡಬೇಕು. ಜನರನ್ನು ಕತ್ತಲಲ್ಲಿಟ್ಟು ಯೋಜನೆ ಜಾರಿಗೆ ಮುಂದಾಗಿರುವುದು ಸರಿಯಲ್ಲ.