ಸಾಗರದ ಶ್ರೀ ಆದಿನಾಥ ತೀರ್ಥಂಕರ ಜೈನ ಬಸದಿಯಲ್ಲಿ ಆಯೋಜಿಸಿದ್ದ ನಾಗರ ಪಂಚಮಿ ಆಚರಣೆಯಲ್ಲಿ ಅಶೋಕಕುಮಾರ್ ಇಂದ್ರ, ಹಿತಕರ ಜೈನ್, ರತಿ ಹೊಯ್ಸಳ ಜೈನ್, ಲತಾ ದೇವರಾಜ್ ಜೈನ್ ಇತರರಿದ್ದರು.
ಸಾಗರ: ಬಹು ಹಿಂದಿನಿಂದಲೂ ನಾಗಾರಾಧನೆ ನಡೆದುಕೊಂಡು ಬಂದಿದೆ. ಪ್ರಕೃತಿ ಆರಾಧನೆಯ ಪ್ರತೀಕವೇ ನಾಗರ ಪಂಚಮಿ ಎಂದು ಜೈನ ಬಸದಿಯ ಪುರೋಹಿತ ಅಶೋಕಕುಮಾರ್ ಇಂದ್ರ ಹೇಳಿದರು.
ಪಟ್ಟಣದ ಸರ್ವತೋಭದ್ರ ಶ್ರೀ ಆದಿನಾಥ ತೀರ್ಥಂಕರ ಜೈನಬಸದಿಯಲ್ಲಿ ದಿಗಂಬರ ಜೈನ ಸಮಾಜ ಸೇವಾ ಟ್ರಸ್ಟ್‌ನಿಂದ ಆಯೋಜಿಸಿದ್ದ ನಾಗರಪಂಚಮಿ ಮಹತ್ವ ಕುರಿತ ಸಂವಾದದಲ್ಲಿ ಮಾತನಾಡಿದರು.
ಜೈನಧರ್ಮದ 24 ತೀರ್ಥಂಕರರಲ್ಲಿ ಶ್ರೀ ಪಾರ್ಶ್ವನಾಥ ತೀರ್ಥಂಕರರು ಪೂರ್ವಜನ್ಮದಲ್ಲಿ ಕಠಿಣ ತಪಸ್ಸು ಮಾಡುವಾಗ ಎದುರಾದ ಉಪಸರ್ಗಗಳಿಂದ ರಕ್ಷಿಸಲು ನಾಗಲೋಕದ ರಾಜ-ರಾಣಿಯರಾದ ಧರಣೇಂದ್ರ ಪದ್ಮಾವತಿ ಅವರನ್ನು ಸ್ಮರಿಸಿದರು. ಆಗ ನಾಗರೂಪದಲ್ಲಿ ಹೆಡೆಯನ್ನು ಬಿಚ್ಚಿ ತಪ್ಪಸ್ಸಿಗೆ ಕುಳಿತಿರುವ ಪಾರ್ಶ್ವನಾಥರ ಮೇಲೆ ಸುರಿಯುತ್ತಿರುವ ಬೆಂಕಿಯಿಂದ ರಕ್ಷಿಸಲಾಯಿತು. ಇಂದಿಗೂ ಜೈನಧರ್ಮದಲ್ಲಿ ಅದನ್ನು ಸ್ಮರಿಸಲಾಗುತ್ತಿದೆ ಎಂದರು.
ಜೈನ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಎಸ್.ವಿ.ಹಿತಕರ ಜೈನ್, ಜೈನ ಧರ್ಮದಲ್ಲಿ ನಾಗರ ಪಂಚಮಿಯ ಸಂದೇಶ ಜೀವದಯೆ ಮತ್ತು ಅಹಿಂಸೆಯ ಅನುಕರಣೆಗೆ ಪ್ರೇರಣೆಯಾಗಿದೆ. ನಾಗರಬನ ಹೆಸರಿನಲ್ಲಿ ಪ್ರಕೃತಿಯ ಸಂರಕ್ಷಣೆಗೆ ಪೂರಕ ವಾತವರಣ ನಿರ್ಮಾಣವೇ ನಾಗರ ಪಂಚಮಿಯ ಮಹತ್ವ. ಜೈನಧರ್ಮದ ತತ್ವ, ಆಚಾರ, ವಿಚಾರಗಳು ವೈಜ್ಞಾನಿಕವಾಗಿವೆ ಎಂದು ಅಭಿಪ್ರಾಯಪಟ್ಟರು.
ಪದ್ಮಶ್ರೀ ಮಹಿಳಾ ಸಮಾಜದ ಉಪಾಧ್ಯಕ್ಷೆ ರತಿ ಹೊಯ್ಸಳ ಜೈನ್, ಅಷ್ಟಕ ಸ್ವ-ಸಹಾಯ ಸಂಘದ ಅಧ್ಯಕ್ಷೆ ಲತಾ ದೇವರಾಜ್ ಜೈನ್, ಸೇವಾ ಟ್ರಸ್ಟ್ ನಿಕಟಪೂರ್ವ ಗೌರವಾಧ್ಯಕ್ಷ ಹೋಯ್ಸಳ ಜೈನ್, ಮಾಜಿ ಅಧ್ಯಕ್ಷ ವೈ.ಜೆ.ಪದ್ಮರಾಜ್ ಜೈನ್, ಬಸದಿ ಜೀರ್ಣೋದ್ಧಾರ ಸಮಿತಿ ಕೋಶಾಧ್ಯಕ್ಷ ಎಸ್.ಆರ್.ನಾಗರಾಜ್ ಜೈನ್, ಗಜೇಂದ್ರ ಜೈನ್, ಉಪಾಧ್ಯಕ್ಷ ವೀರೇಂದ್ರ ಜೈನ್, ನ್ಯಾಮಯ್ಯ ಜೈನ್ ಇತರರಿದ್ದರು.