ಸ್ವಚ್ಛತಾ ಕಾರ್ಯ ನಡೆಸುವಂತೆ ಆಗ್ರಹಿಸಿ ಸಾಗರದ ವಿಜಯನಗರ ಬಡಾವಣೆ ನಾಗರಿಕರು ನಗರಸಭೆಗೆ ಮನವಿ ಸಲ್ಲಿಸಿದರು. ವೈ.ಕೆ.ರವಿಕುಮಾರ್, ತೀ.ನ.ಶ್ರೀನಿವಾಸ್, ನಾಗರಾಜ್ ಇತರರಿದ್ದರು. 
ಶಿವಮೊಗ್ಗ

ಕಸ ವಿಲೇವಾರಿಗೆ ನಗರಸಭೆ ನಿರ್ಲಕ್ಷ್ಯ

ಸಾಗರ: ವಿಜಯನಗರ ಬಡಾವಣೆಯಲ್ಲಿ ಕಸ ವಿಲೇವಾರಿ ವಿಳಂಬ, ಚರಂಡಿ, ರಸ್ತೆ ಸ್ವಚ್ಛತೆ ಮಾಡದ ನಗರಸಭೆ ವಿರುದ್ಧ ವಿಜಯನಗರ ನಾಗರಿಕ ವೇದಿಕೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ನಗರಸಭೆ ವ್ಯಾಪ್ತಿ 18ನೇ ವಾರ್ಡ್‌ನ ರಸ್ತೆ ಬದಿಗಳಲ್ಲಿ ಕಸದ ರಾಶಿ ಬಿದ್ದಿದೆ. ನಗರಸಭೆ ವಿಲೇವಾರಿ ಕಾರ್ಯ ಮಾಡುತ್ತಿಲ್ಲ. ರಸ್ತೆ, ಚರಂಡಿ ಪಕ್ಕದಲ್ಲಿ ಗಿಡಗಳು ಬೆಳೆದು, ಕ್ರಿಮಿಕೀಟಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗ ಭೀತಿ ಎದುರಿಸುವಂತಾಗಿದೆ. ಅನೇಕ ಬಾರಿ ನಗರಸಭೆಗೆ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಕಸ ಸಂಗ್ರಹ ವಾಹನ ಸರಿಯಾಗಿ ಬರುತ್ತಿಲ್ಲ. ವಾರ್ಡ್‌ನಲ್ಲಿ ಸ್ವಚ್ಛತಾ ಕಾರ್ಯಕ್ಕೆ ಪೌರ ಕಾರ್ಮಿಕರನ್ನು ಬಿಡುತ್ತಿಲ್ಲ. ವಾಸನೆಗೆ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡಬೇಕಿದೆ. ವಿಜಯನಗರ ಬಡಾವಣೆಗೆ ಕಸ ವಿಲೇವಾರಿ ವಾಹನ ದಿನ ಬಿಟ್ಟು ದಿನ ಕಳಿಸಬೇಕು. ಚರಂಡಿ ಪಕ್ಕದಲ್ಲಿ ಬೆಳೆದ ಗಿಡಗಳನ್ನು ತೆರವು ಮಾಡಬೇಕು. ಕಸ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ನಗರಸಭೆ ಎದುರು ವಾರ್ಡ್‌ನಲ್ಲಿರುವ ಕಸ ಸುರಿದು ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.
ವೈ.ಕೆ.ರವಿಕುಮಾರ್, ತೀ.ನ.ಶ್ರೀನಿವಾಸ್, ನಾಗರಾಜ್, ಸತ್ಯನಾರಾಯಣ, ಚಂದ್ರು ಗೌಡ, ವೈ.ಮೋಹನ್, ಪದ್ಮರಾಜ್, ಹುಚ್ಚಪ್ಪ, ತಮ್ಮಣ್ಣಪ್ಪ, ಚಂದ್ರಣ್ಣ, ಸಂಗಪ್ಪ, ನವೀನ್, ಲಕ್ಷ್ಮೀ ಹತ್ವಾರ್, ಅಕ್ಷರ, ಪ್ರಜ್ವಲ್, ಕಿರಣ್, ಪ್ರಸನ್ನ ಇತರರಿದ್ದರು.