ತೀರ್ಥಹಳ್ಳಿ ತಾಲೂಕಿನ ದೊಡ್ಡಿನಮನೆ ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನು ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿ ಪರಿಶೀಲಿಸಿದರು. ಹೆದ್ದೂರು ನವೀನ್, ಯಶೋದಾ ಮಂಜುನಾಥ್, ಚಂದವಳ್ಳಿ ಸೋಮಶೇಖರ್, ರತ್ ಮೇಗರವಳ್ಳಿ ಇತರರಿದ್ದರು.
- ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸ್ಥಳ ಪರಿಶೀಲನೆ
- ಶಾಸಕ ಆರಗ ಜ್ಞಾನೇಂದ್ರ ಹೇಳಿಕೆ
- ನೀರಿನ ಸಮಸ್ಯೆ ಪರಿಹಾರಕ್ಕೆ ಬಹುಗ್ರಾಮ ಯೋಜನೆ
ತೀರ್ಥಹಳ್ಳಿ: ತಾಲೂಕಿನ ದೊಡ್ಡಿನಮನೆ ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸ್ಥಾಪಿಸುವುದರಿಂದ ಶಾಶ್ವತವಾಗಿ ನೀರಿನ ಸಮಸ್ಯೆ ಪರಿಹಾರವಾಗಲಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಮಾಣಿ ಡ್ಯಾಂ ಹಿನ್ನೀರು ಪ್ರದೇಶ ದೊಡ್ಡಿನಮನೆ ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ 350 ಕೋಟಿ ರೂ. ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಕಾಮಗಾರಿಯ ಪರಿಶೀಲನೆ ನಡೆಸಿ ಮಾತನಾಡಿದರು.
ಕೇಂದ್ರ ಸರ್ಕಾರದ ಜಲಜೀವನ್ ಯೋಜನೆಯಡಿ 350 ಕೋಟಿ ರೂ. ಅನುದಾನ ಮಂಜೂರಾಗಿದೆ. ಕಾಮಗಾರಿ ಪ್ರಗತಿಯಲ್ಲಿದ್ದು, ದೊಡ್ಡಿನಮನೆಯಿಂದ ಸರಬರಾಜಾಗುವ ನೀರಿನ ಟ್ರೀಟ್ಮೆಂಟ್ ಪ್ಲಾಂಟ್ ಕೋಡ್ಲು ಗ್ರಾಮದಲ್ಲಿ ಸಿದ್ಧವಾಗುತ್ತಿದೆ. ಯೋಜನೆಯಿಂದ ತಾಲೂಕಿನ 38 ಗ್ರಾಮ ಪಂಚಾಯಿತಿಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು.
ಜನರಿಗೆ ಶುದ್ಧ ಕುಡಿಯುವ ನೀರು ಅಗತ್ಯವಾಗಿದೆ. ತಾಲೂಕಿನ ನದಿತೀರದ ಗ್ರಾಪಂಗಳನ್ನು ಹೊರತುಪಡಿಸಿ ಕೆಲ ಗ್ರಾಪಂ ವ್ಯಾಪ್ತಿ ನೀರಿನ ಕೊರತೆ ಇದೆ. ಹಿಂದಿನಿಂದಲೂ ಶುದ್ಧ ಕುಡಿಯುವ ನೀರಿನ ಕೊರತೆ ಜನರನ್ನು ಕಾಡುತ್ತಿದೆ. ಈ ಯೋಜನೆಯಿಂದ ನೀರಿನ ಕೊರತೆ ಶಾಶ್ವತವಾಗಿ ಪರಿಹಾರವಾಗಲಿದೆ ಎಂದರು.
ಬಿಜೆಪಿ ಮಂಡಲ ಅಧ್ಯ ಹೆದ್ದೂರು ನವೀನ್, ಯಶೋದಾ ಮಂಜುನಾಥ್, ಚಂದವಳ್ಳಿ ಸೋಮಶೇಖರ್, ರತ್ ಮೇಗರವಳ್ಳಿ ಇತರರಿದ್ದರು.