ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ಸ್ತ್ರೀರೋಗ ತಜ್ಞ ಡಾ. ರಾಘವೇಂದ್ರ ಭಟ್ ಮಾತನಾಡಿದರು. ಮಕ್ಕಳ ತಜ್ಞ ಡಾ. ಶಶಿಧರ್ ಹೆಗ್ಡೆ, ಆಸ್ಪತ್ರೆಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಎಸ್.ಎನ್.ಶೈಲೇಶ್ ಸುದ್ದಿಗೋಷ್ಠಿಯಲ್ಲಿದ್ದರು. 
ಶಿವಮೊಗ್ಗ

ಎನ್‌ಎಚ್‌ನಲ್ಲಿ ತಾಯಿಗೆ ದೃಷ್ಟಿ, ಅವಧಿಪೂರ್ವ ಶಿಶುಗೆ ಜೀವದಾನ | NH Hospital

ಶಿವಮೊಗ್ಗ: ಇಪ್ಪತ್ತೈದು ವರ್ಷದ ಗರ್ಭಿಣಿ(Pregnant)ಗೆ ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಮರು ದೃಷ್ಟಿ ಕಲ್ಪಿಸುವ ಜತೆಗೆ ಆಕೆಗೆ ಅವಧಿಪೂರ್ವ ಜನಿಸಿದ್ದ ಶಿಶುವಿಗೆ ಜೀವದಾನ ನೀಡಿದ್ದಾರೆ.
ಏಳು ತಿಂಗಳ ಗರ್ಭಿಣಿಗೆ ರಕ್ತದೊತ್ತಡ ಹೆಚ್ಚಾಗಿ ದಿಢೀರ್ ಕಣ್ಣು ಕಾಣಿಸದಂತಾಗಿತ್ತು. ಹಾಗಾಗಿ ಕುಟುಂಬಸ್ಥರು ಆಕೆಯನ್ನು ಎನ್‌ಎಚ್ ಆಸ್ಪತ್ರೆ(NH Hospital)ಗೆ ದಾಖಲಿಸಿದ್ದರು. ಬಿಪಿಯಿಂದ ಎಕ್ಲಾಂಪ್ಸಿಯಾ(Eclampsia)(ಭಾರೀ ಮೂರ್ಛೆ ಬರುವ ಸ್ಥಿತಿ) ಅಪಾಯದಲ್ಲಿದ್ದ ಆಕೆಗೆ ಹಿರಿಯ ಸ್ತ್ರೀರೋಗ ತಜ್ಞ ಡಾ. ರಾಘವೇಂದ್ರ ಭಟ್ ತುರ್ತು ಚಿಕಿತ್ಸೆ ನೀಡಿದ್ದಾರೆ.
ತಪಾಸಣೆ ವೇಳೆ ಗರ್ಭಿಣಿಗೆ ತೀವ್ರ ಪ್ರೀ-ಎಕ್ಲಾಂಪ್ಸಿಯಾ ಮತ್ತು ದೃಷ್ಟಿ ಕಳೆದುಕೊಳ್ಳಲು ಕಾರಣವಾಗಿದ್ದ ರೆಟಿನಾ ಡಿಟ್ಯಾಚ್‌ಮೆಂಟ್ (ಕಣ್ಣಿನ ಪರದೆಯ ಬೇರ್ಪಡಿಕೆ) ಸಮಸ್ಯೆ ಪತ್ತೆಯಾಗಿತ್ತು. ತಕ್ಷಣವೇ ಡಾ. ರಾಘವೇಂದ್ರ ಭಟ್ ಮತ್ತು ಅವರ ತಂಡ, ತಾಯಿ ಜೀವ ಉಳಿಸಲು ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಿ ಮಗುವನ್ನು ಹೊರತೆಗೆಯಲು ತೀರ್ಮಾನಿಸಿತ್ತು. ಅದೇ ದಿನ ರಾತ್ರಿ ಕೇವಲ 1 ಕೆಜಿ ತೂಕದ ಅವಧಿಪೂರ್ವ(Premature)ಶಿಶು ಜನಿಸಿತ್ತು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ರಾಘವೇಂದ್ರ ಭಟ್, ತಾಯಿ ಮತ್ತು ಶಿಶು ಇಬ್ಬರೂ ಐಸಿಯುನಲ್ಲಿ ತೀವ್ರ ಆರೋಗ್ಯ ಸವಾಲು ಎದುರಿಸಿದರು. ನಂತರ ತಾಯಿಗೆ ಕಾಣಿಸಿಕೊಂಡ ಮೆದುಳಿನ ತೊಂದರೆ(ಎನ್ಸೆಫಲೋಪತಿ)ಯನ್ನು ನರರೋಗ ತಜ್ಞೆ ಡಾ. ರೂಪಾ ಗುಣಪಡಿಸಿದರು. ಐಸಿಯುನಲ್ಲಿ ನಾಲ್ಕು ದಿನ ಇದ್ದು, ಬಳಿಕ ತಾಯಿಯನ್ನು ವಾರ್ಡ್‌ಗೆ ಸ್ಥಳಾಂತರಿಸಲಾಯಿತು. ಮೂರು ದಿನಗಳಲ್ಲಿ ದೃಷ್ಟಿ ಸುಧಾರಿಸಿದ್ದು ಮನೆಗೆ ಮರಳಿದರು ಎಂದರು.
ಮಕ್ಕಳ ತಜ್ಞ ಡಾ. ಶಶಿಧರ್ ಹೆಗ್ಡೆ ಮಾತನಾಡಿ, ಅಂಗಾಂಗಗಳು ಬೆಳೆದಿರಲಿಲ್ಲ. ಹೃದಯ ಬಡಿತ ಕಡಿಮೆ ಇತ್ತು. ಉಸಿರಾಡಲು ಕಷ್ಟವಿತ್ತು. ಹಾಗಾಗಿ, ನಿರಂತರ ಆಮ್ಲಜನಕ ಬೆಂಬಲದೊಂದಿಗೆ ಮಗುವನ್ನು 45 ದಿನ ತೀವ್ರ ನಿಗಾದಲ್ಲಿ ಇರಿಸಲಾಗಿತ್ತು. ಒಮ್ಮೆ ಹೃದಯ ಬಡಿತ ನಿಂತಾಗ ಸಿಪಿಆರ್ ನೀಡಿ ಜೀವದಾನ ನೀಡಲಾಯಿತು ಎಂದರು. ಆಸ್ಪತ್ರೆಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಎಸ್.ಎನ್.ಶೈಲೇಶ್ ಸುದ್ದಿಗೋಷ್ಠಿಯಲ್ಲಿದ್ದರು.