ಶಿವಮೊಗ್ಗ ಗಾಂಧಿ ಬಜಾರ್‌ನ ಚಿನ್ನಾಭರಣ ಮಾರಾಟ ಮಳಿಗೆಯೊಂದರ ದೃಶ್ಯ.
- ಶಿವಮೊಗ್ಗ ಜಿಲ್ಲೆಯಲ್ಲಿ ಕುಸಿಯುತ್ತಿದೆ ಚಿನ್ನದ ಉದ್ಯಮ
- ಸಂಕಷ್ಟಕ್ಕೆ ಸಿಲುಕಿದ ಸಣ್ಣ ವ್ಯಾಪಾರಿಗಳು
- ಪ್ರಧಾನಿ ಕರೆಗೆ ಕಂಗಲಾದ ಚಿನಿವಾರರು
ಹಲವು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಚಿನ್ನ (gold) ದ ಉದ್ಯಮ (industry) ಕುಸಿಯುತ್ತಿದೆ. ಬಂಗಾರದ ಖರೀದಿ (purchase)ಗೆ ಜನರು ನಿರಾಸಕ್ತಿ ತೋರುತ್ತಿರುವುದರಿಂದ ಸಣ್ಣಪುಟ್ಟ ಚಿನ್ನಾಭರಣ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ದಶಕಗಳಿಂದ ಚಿನ್ನಾಭರಣ ತಯಾರಿಕೆ ಇಲ್ಲವೆ ಮಾರಾಟವನ್ನೇ ಕುಟುಂಬದ ಮೂಲ ಕಸುಬಾಗಿ ಮಾಡಿಕೊಂಡಿದ್ದವರಿಗೆ ಪ್ರಸ್ತುತ ಸನ್ನಿವೇಶದಿಂದ ಆತಂಕ ಎದುರಾಗಿದೆ.
ಜಾಗತಿಕ ವಿದ್ಯಮಾನ ಆಧರಿಸಿ, ಭಾರತದ ಆರ್ಥಿಕತೆಯ ಸ್ಥಿರತೆಯನ್ನು ಕಾಯಬೇಕಾದ ಅನಿವಾರ್ಯತೆ ಇರುವುದರಿಂದ ಚಿನ್ನದ ಅನಗತ್ಯ ಖರೀದಿಗೆ ಜನರು ಮುಂದಾಗಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಬಳಿಕ ದೇಶಾದ್ಯಂತ ವ್ಯಾಪಕ ಸ್ಪಂದನೆ ದೊರೆಯಿತು. ಪ್ರಧಾನಿ ಕರೆ ಜಿಲ್ಲೆಯಲ್ಲೂ ಪರಿಣಾಮ ಬೀರಿತು.
ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಜ್ಯುವೆಲ್ಲರಿ ಶಾಪ್‌ಗಳಿವೆ. ಚಿನ್ನಾಭರಣ ಮಾರಾಟದ 8 ಕಾರ್ಪೋರೇಟ್ ಸಂಸ್ಥೆಗಳಿವೆ. ಎರಡು ಸಾವಿರಕ್ಕೂ ಅಧಿಕ ಆಭರಣ ತಯಾರಕರು ಜಿಲ್ಲೆಯಲ್ಲಿದ್ದಾರೆ. ಕರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಚಿನ್ನಾಭರಣ ಮಾರಾಟಗಾರರು ಹಾಗೂ ತಯಾರಕರ ಬದುಕಲ್ಲಿ ಕತ್ತಲು ಆವರಿಸಿತ್ತು. ಬಳಿಕ ಮೂರ‌್ನಾಲ್ಕು ವರ್ಷ ಉತ್ತಮ ವಹಿವಾಟು ನಡೆಯಿತು. ಇದೀಗ ಚಿನ್ನಾಭರಣ ಬೇಡಿಕೆ ದಿಢೀರ್ ಕುಸಿತ ಕಂಡಿದೆ.
ಒಂದು ವರ್ಷದವರೆಗೆ ಅನಗತ್ಯವಾಗಿ ಚಿನ್ನ ಖರೀದಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವುದು ಒಂದೆಡೆಯಾದರೆ ಕೇಂದ್ರ ಸರ್ಕಾರ ಚಿನ್ನದ ಮೇಲಿನ ಆಮದು ಸುಂಕವನ್ನು ಶೇ.6ರಿಂದ 15ಕ್ಕೆ ಹೆಚ್ಚಿಸಿರುವುದು ಚಿನ್ನಾಭರಣದ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಿದೆ.
ಇನ್ನೊಂದು ವರ್ಷ ಇದೇ ಸ್ಥಿತಿ ಮುಂದುವರಿಯಲಿದೆ ಎಂಬುದು ಮಾರುಕಟ್ಟೆಯಲ್ಲಿ ಕೇಳಿ ಬರುತ್ತಿರುವ ಮಾತಾದಾರೂ ದೀರ್ಘಕಾಲ ಇದೇ ಸನ್ನಿವೇಶ ಮುಂದುವರಿದರೆ ಸಣ್ಣ ಪ್ರಮಾಣದಲ್ಲಿ ಚಿನ್ನಾಭರಣ ವ್ಯಾಪಾರ ಮಾಡುತ್ತಿದ್ದವರು ನಿಶ್ಚಿತವಾಗಿಯೂ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಇದು ಜಿಲ್ಲೆಯ ಒಟ್ಟಾರೆ ಆರ್ಥಿಕತೆ ಮೇಲೂ ಪರಿಣಾಮ ಉಂಟು ಮಾಡುತ್ತಿದೆ.
ಕಳೆದೊಂದು ವಾರದಿಂದ ಅಧಿಕ ಮಾಸ ಆರಂಭವಾಗಿದೆ. ಶುಭ ಸಮಾರಂಭಗಳಿಗೆ ಬ್ರೇಕ್ ಬಿದ್ದಿದೆ. ಇದು ಕೂಡಾ ಚಿನ್ನಾಭರಣ ಖರೀದಿ ತಗ್ಗಲು ಪ್ರಮುಖ ಕಾರಣ ಎಂದೇ ಹೇಳಲಾಗುತ್ತಿದೆ. ಶುಭ ಸಮಾರಂಭಗಳು ನಡೆಯುತ್ತಿದ್ದರೆ ಅನಿವಾರ್ಯವಾಗಿಯಾದರೂ ಜನರು ಚಿನ್ನಾಭರಣ ಖರೀದಿ ಮಾಡಬೇಕಾಗುತ್ತದೆ. ಆಗ ಬೆಲೆಯ ಲೆಕ್ಕಾಚಾರ ಮಾಡುವಂತಿಲ್ಲ. ದುಬಾರಿ ಎನಿಸಿದರೆ 10 ಗ್ರಾಂ ಖರೀದಿ ಮಾಡುವವರು ಐದು ಗ್ರಾಂ ಆದರೂ ಖರೀದಿಸಲೇಬೇಕಾಗುತ್ತದೆ. ತೀರಾ ಅವಶ್ಯಕತೆ ಇರುವವರು ಕಡಿಮೆ ತೂಕದ ಆಭರಣದತ್ತ ಮುಖ ಮಾಡುತ್ತಿದ್ದಾರೆ. ಅಧಿಕ ಮಾಸವಾದ ಕಾರಣ ಗೋಲ್ಡ್ ಖರೀದಿಗೆ ಹಿನ್ನಡೆಯಾಗುತ್ತಿದೆ.
ಚೇತರಿಕೆ ಕಾಣದ ಅಡಿಕೆ!
ಅಡಿಕೆ ಮಾರುಕಟ್ಟೆ ಚೇತರಿಕೆ ಕಾಣದಿರುವುದು ಕೂಡಾ ಚಿನ್ನಾಭರಣ ಮಾರಾಟಕ್ಕೆ ಹಿನ್ನಡೆ ಉಂಟು ಮಾಡಿದೆ! ವಿಚಿತ್ರ ಎನಿಸಿದರೂ ಇದು ಸತ್ಯ. ಶಿವಮೊಗ್ಗದಲ್ಲಿ ಇಂದು ಬಹುತೇಕ ಎಲ್ಲ ಕಾರ್ಪೋರೇಟ್ ಚಿನ್ನಾಭರಣ ಮಳಿಗೆಗಳು ಕಾರ್ಯನಿರ್ವಹಿಸುತ್ತಿರುವುದು ಅಡಿಕೆಯನ್ನು ಅವಲಂಬಿಸಿ. ಶಿವಮೊಗ್ಗ ಹಾಗೂ ನೆರೆ ಜಿಲ್ಲೆಗಳಲ್ಲಿ ಅಡಿಕೆಯೇ ಮುಖ್ಯ ಬೆಳೆ. ಎಲ್ಲ ವಹಿವಾಟುಗಳನ್ನು ನಿಯಂತ್ರಿಸುವ ಶಕ್ತಿ ಅಡಿಕೆಗಿದೆ. ಆದರೆ ಕಳೆದ ಆರೇಳು ತಿಂಗಳಿನಿಂದ ಅಡಿಕೆ ಧಾರಣೆ ಸ್ಥಿರವಾಗಿದೆ. ಬೆಲೆ ಏರಿಕೆ ನಿರೀಕ್ಷೆಯಲ್ಲಿದ್ದ ಜನರಿಗೆ ಇದರಿಂದ ನಿರಾಸೆಯಾಗಿದೆ. ಹೀಗಾಗಿ ಅಡಿಕೆ ವ್ಯಾಪಾರವೂ ಸಾಗುತ್ತಿಲ್ಲ. ಬೆಳೆಗಾರರ ಕೈನಲ್ಲಿ ದುಡ್ಡು ಓಡಾಡುತ್ತಿಲ್ಲ.
ಚಿನ್ನ ಸುರಕ್ಷಿತ, ಆಭರಣ ಅನಿಶ್ಚಿತ
ಚಿನ್ನದ ವ್ಯವಹಾರ ಅಪಾಯದಲ್ಲಿದೆ. ಚಿನ್ನದ ಬೆಲೆ 10 ಗ್ರಾಂಗೆ 75 ಸಾವಿರ ರೂ. ದಾಟಿದ ನಂತರ ತಮ್ಮ ಚಿನ್ನದ ವ್ಯವಹಾರದಲ್ಲಿ ಶೇ.70ರಷ್ಟು ನಷ್ಟವಾಗಿದೆ. ಸಣ್ಣ ಆಭರಣಕಾರರು ಮತ್ತು ಅಕ್ಕಸಾಲಿಗರಿಗೆ ಇದು ಜಟಿಲ ಪರಿಸ್ಥಿತಿ. ಬಹುರಾಷ್ಟ್ರೀಯ ಕಂಪನಿಗಳು ಚಿನ್ನದ ವ್ಯಾಪಾರ ವಲಯ ಪ್ರವೇಶಿಸಿ ಸಣ್ಣ ಚಿನ್ನದ ಅಂಗಡಿಗಳಿಂದ ಚಿನ್ನದ ವ್ಯವಹಾರವನ್ನು ಕಸಿದುಕೊಂಡವು. ಚಿನ್ನವು 10 ಗ್ರಾಂಗೆ 1.50 ಲಕ್ಷ ರೂ. ದಾಖಲೆಯ ಗರಿಷ್ಠ ಮಟ್ಟವನ್ನು ದಾಟಿತು. ಈ ವ್ಯವಹಾರವು ಅನೇಕ ಅನಿಶ್ಚಿತ ಸಮಸ್ಯೆಗಳಿಗೆ ಸಾಕ್ಷಿಯಾಗುತ್ತಿದೆ. ಪ್ರಸ್ತುತ ಚಿನ್ನ ಸುರಕ್ಷಿತವಾಗಿದೆ. ಆದರೆ ಆಭರಣ ವ್ಯವಹಾರವು ಅನಿಶ್ಚಿತವಾಗಿದೆ ಎಂದು ಆಭರಣ ತಯಾರಕರೊಬ್ಬರು ಅಳಲು ತೋಡಿಕೊಂಡಿದ್ದಾರೆ.
ಹೂಡಿಕೆಗೂ ಹಿಂದೇಟು
ಕಳೆದ ಕೆಲವು ವರ್ಷಗಳಿಂದ ಚಿನ್ನದ ಮೇಲೆ ಹೂಡಿಕೆ ಮಾಡುವವರ ಪ್ರಮಾಣ ಹೆಚ್ಚುತ್ತಲೆ ಇತ್ತು. ಆದರೆ ಇಂದಿನ ಜಾಗತಿಕ ಮಟ್ಟದ ಬೆಳವಣಿಗೆಗಳನ್ನು ಗಮನಿಸಿದರೆ ಭವಿಷ್ಯದಲ್ಲಿ ಏನು ಬೇಕಾದರೂ ಆಗಬಹುದು. ಮುಖ್ಯವಾಗಿ ಚಿನ್ನದ ಬೆಲೆ ದುಬಾರಿಯಾಗಿರುವಾಗ ಅದರ ಮೇಲೆ ಹೂಡಿಕೆ ಮಾಡಿ ಮುಂದೆ ನಷ್ಟ ಅನುಭವಿಸಿದರೆ ಕಷ್ಟ ಎಂದು ಅನೇಕರು ಚಿನ್ನದ ಮೇಲಿನ ಹೂಡಿಕೆಗೆ ಹಿಂದೇಟು ಹಾಕುತ್ತಿದ್ದಾರೆ. ಇದು ಕೂಡಾ ಚಿನ್ನಾಭರಣ ಖರೀದಿ ಕುಸಿಯಲು ಕಾರಣವಾಗಿದೆ.
"
ಮುರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಸುಮಾರು ಒಂದು ವರ್ಷ ಕಾಲ ಗೋಲ್ಡ್ ಕಂಟ್ರೋಲ್ ಆ್ಯಕ್ಟ್ ಜಾರಿಗೆ ತಂದಿದ್ದರಿಂದ ವ್ಯಾಪಕ ಸಮಸ್ಯೆಯಾಗಿತ್ತು. ಅದನ್ನು ಬಿಟ್ಟರೆ ಈಗಿನ ಸಂದರ್ಭವೇ ಚಿನ್ನಾಭರಣ ತಯಾರಕರು, ಚಿನ್ನಾಭರಣದ ಸಣ್ಣ ವ್ಯಾಪಾರಿಗಳಿಗೆ ಆತಂಕ ಉಂಟು ಮಾಡಿರುವಂತದ್ದು. ಅನೇಕರು ಈಗಾಗಲೇ ಈ ವೃತ್ತಿಯಿಂದ ದೂರಾಗುವ ತೀರ್ಮಾನ ಮಾಡಿದ್ದಾರೆ.
— ಸೋಮೇಶ್ ಪಿ.ಶೇಟ್, ಚಿನ್ನಾಭರಣ, ಬೆಳ್ಳಿ ಸಾಮಗ್ರಿ ತಯಾರಕರ ಸಂಘದ ಜಿಲ್ಲಾ ಕಾರ್ಯದರ್ಶಿ.