ಶಿವಮೊಗ್ಗದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿದರು.  
ಶಿವಮೊಗ್ಗ

ಎಸ್‌ಐಆರ್‌ಗೆ ತಿಂಗಳ ಕಾಲಾವಕಾಶ ಅವೈಜ್ಞಾನಿಕ | Special Voter List Revision

ಪ್ರಮುಖ ಮುಖ್ಯಾಂಶಗಳು

  • ಮುಸ್ಲಿಮರು, ದಲಿತರನ್ನು ಪಟ್ಟಿಯಿಂದ ಕೈಬಿಡುವ ಹುನ್ನಾರ
  • ತರಾತುರಿಯಲ್ಲಿ ಪಟ್ಟಿ ಅಂತಿಮ ಬೇಡ ಎಂದ ಮಾಜಿ ಸಚಿವ
  • ಶಿವಮೊಗ್ಗದಲ್ಲಿ ಕಿಮ್ಮನೆ ರತ್ನಾಕರ್ ಆರೋಪ
ಶಿವಮೊಗ್ಗ: ರಾಜ್ಯದಲ್ಲಿ ಎಸ್‌ಐಆರ್(ವಿಶೇಷ ಮತದಾರರಪಟ್ಟಿ ಪರಿಷ್ಕರಣೆ-Special Voter List Revision)ಗೆ ವಿರೋಧವಿಲ್ಲ. ಆದರೆ ಒಂದು ತಿಂಗಳ ಕಾಲಾವಕಾಶ ನೀಡಿ ತರಾತುರಿಯಲ್ಲಿ ಪಟ್ಟಿ ಅಂತಿಮಗೊಳಿಸುವುದು ಬೇಡ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್(Former Minister Kimmane Ratnakar) ಚುನಾವಣಾ ಆಯೋಗಕ್ಕೆ ಸಲಹೆ ನೀಡಿದರು.
ಈಗಾಗಲೇ ಐದು ರಾಜ್ಯಗಳಲ್ಲಿ ಚುನಾವಣಾ ಸಂದರ್ಭದಲ್ಲೇ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಪರಿಷ್ಕರಣೆಗೆ ಒಂದು ತಿಂಗಳ ಅವಕಾಶ ನೀಡಿರುವುದು ಅವೈಜ್ಞಾನಿಕ. ಸ್ಥಳೀಯ ಸಂಸ್ಥೆಗಳ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಈ ಕಾರ್ಯ ಮಾಡಲಾಗುತ್ತಿದೆ. ಮುಸ್ಲಿಮರು ಹಾಗೂ ದಲಿತರನ್ನು(Muslims and Dalits) ಮತದಾರರ ಪಟ್ಟಿಯಿಂದ ಕೈಬಿಡುವ ಹುನ್ನಾರ ನಡೆಸಲಾಗಿದೆ. ಆದ್ದರಿಂದ ನಮ್ಮ ಪಕ್ಷ ಬೂತ್‌ಮಟ್ಟ(Booth level)ದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುತ್ತಿದೆ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಖ್ಯ ಚುನಾವಣಾ ಆಯುಕ್ತರನ್ನು ನೇಮಿಸಲು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಸುಪ್ರೀಂಕೋರ್ಟ್‌(Supreme Court)ನ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಆಯೋಗ ಕಾರ್ಯನಿರ್ವಹಿಸುತ್ತದೆ. ಆದರೆ ಪ್ರಧಾನಿ ಮತ್ತು ಗೃಹ ಸಚಿವರು ಏಕಪಕ್ಷೀಯವಾಗಿ ಮುಖ್ಯ ಆಯುಕ್ತರನ್ನು ನೇಮಿಸಿದ್ದಾರೆ. ಆಯುಕ್ತರು ಯಾವುದೇ ಕಾನೂನಿಗೆ ಒಳಪಡುವುದಿಲ್ಲ ಎಂಬ ನಿಯಮ ಜಾರಿಗೆ ತಂದಿದ್ದಾರೆ ಎಂದು ಕಿಡಿಕಾರಿದರು.
ನರೇಂದ್ರ ಮೋದಿ(Narendra Modi) ಪರ ತೀರ್ಪು ನೀಡಿದವರನ್ನು ರಾಜ್ಯಪಾಲರನ್ನಾಗಿ, ಅಮಿತ್ ಷಾ(Amit Shah) ಪರ ತೀರ್ಪು ನೀಡಿದವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ದಾರೆ. ಈ ರೀತಿ ಸಾರ್ವಜನಿಕ ವಲಯದಲ್ಲಿ ಆಯಾ ಕ್ಷೇತ್ರಗಳ ಬಗ್ಗೆ ವಿಶ್ವಾಸ ಮೂಡುತ್ತದೆಯೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಮಾಜಿ ಅಧ್ಯಕ್ಷ ಇಸ್ಮಾಯಿಲ್ ಖಾನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್, ಸೂಡಾ ಮಾಜಿ ಅಧ್ಯಕ್ಷ ಎನ್.ರಮೇಶ್, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶ್ವೇತಾ ಬಂಡಿ, ಮುಖಂಡರಾದ ಶಿವಾನಂದಪ್ಪ, ಎಸ್.ಟಿ.ಹಾಲಪ್ಪ, ಸೈಯದ್ ವಾಹಿದ್ ಅಡ್ಡು ಸುದ್ದಿಗೋಷ್ಠಿಯಲ್ಲಿದ್ದರು.
"

ಬಿಜೆಪಿ ಜಾತಿ ಮತ್ತು ಧರ್ಮವನ್ನು ರಾಜಕೀಯಕ್ಕೆ ತಂದು ರಾಜಕಾರಣ ವ್ಯವಸ್ಥೆಯನ್ನೇ ಹಾಳುಮಾಡುತ್ತಿದೆ. ಎಸ್‌ಐಆರ್‌ಗೆ ಕನಿಷ್ಠ ಆರು ತಿಂಗಳಾದರೂ ಅವಕಾಶ ನೀಡಿದರೆ ಉತ್ತಮವಾಗಿರುತ್ತಿತ್ತು. ಆದರೆ ಕೇಂದ್ರ ಸರ್ಕಾರದ ಇಷ್ಟೊಂದು ಆತುರದ ನಿರ್ಧಾರವೂ ಅನುಮಾನ ಮೂಡಿಸಿದೆ.

— ಕಿಮ್ಮನೆ ರತ್ನಾಕರ್, ಮಾಜಿ ಸಚಿವ