ಶಿವಮೊಗ್ಗದ ಮಳಿಗೆಯೊಂದರಲ್ಲಿ ಸಂಗ್ರಹಿಸಿರುವ ಅಕ್ಕಿ.
- ಎರಡೇ ತಿಂಗಳಲ್ಲಿ 600-800 ರೂ. ಏರಿಕೆ
- ಭತ್ತ ದಾಸ್ತಾನು ಮಾಡುತ್ತಿರುವ ಅಕ್ಕಿ ವ್ಯಾಪಾರಿಗಳು
- ಅಕ್ಕಿ ಬೆಲೆ ಹೆಚ್ಚಾಗುವ ಸಾಧ್ಯತೆ
ಈ ಬಾರಿ ಮುಂಗಾರು (mansoon) ಮಳೆ ದುರ್ಬಲವಾಗಿರುವ ಪರಿಣಾಮ ಭತ್ತದ (paddy) ಧಾರಣೆಯಲ್ಲಿ ಏರಿಕೆ (hike) ಆರಂಭವಾಗಿದೆ. ಇದು ಮುಂದಿನ ದಿನಗಳಲ್ಲಿ ಅಕ್ಕಿ ಬೆಲೆ ಏರಿಕೆಗೂ ಕಾರಣವಾಗುವ ಸಾಧ್ಯತೆಯೂ ಇದೆ.
ಭತ್ತದ ಬೆಳೆಗೆ ಪ್ರಮುಖ ನೀರಿನ ಆಗರಗಳಾದ ಭದ್ರಾ, ಕಾವೇರಿ, ತುಂಗಭದ್ರಾ ಜಲಾಶಯಗಳು ಈ ಬಾರಿ ಸಂಪೂರ್ಣ ಭರ್ತಿಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಮೇಲಾಗಿ ಈ ಬಾರಿ ಜಲಾಶಯಗಳ ನೀರು ಕೃಷಿ ಬಳಕೆಗಿಲ್ಲ, ಕುಡಿಯುವ ನೀರಿಗೆ ಮೊದಲ ಆದ್ಯತೆ ಎಂದು ರಾಜ್ಯ ಸರ್ಕಾರವೇ ಅಧಿಸೂಚನೆ ಹೊರಡಿಸಿದೆ.
ಸರ್ಕಾರದ ಆದೇಶ ಅಕ್ಕಿ ಉದ್ಯಮದಲ್ಲಿ ಸಂಚಲನ ಮೂಡಿಸಿದೆ. ಈ ಬಾರಿ ಭತ್ತದ ಉತ್ಪಾದನೆ ತೀವ್ರ ಕುಸಿತವಾಗುವ ಸಾಧ್ಯತೆ ಇರುವುದರಿಂದ ಅಕ್ಕಿ ಉದ್ಯಮಕ್ಕೆ ಅವಶ್ಯಕವಿರುವ ಭತ್ತವನ್ನು ಈಗಾಗಲೇ ವ್ಯಾಪಾರಿಗಳು ಸಂಗ್ರಹಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಕಳೆದ ಎರಡು ತಿಂಗಳಿನಲ್ಲಿ ಕ್ವಿಂಟಾಲ್ ಭತ್ತಕ್ಕೆ 600-800 ರೂ. ಏರಿಕೆಯಾಗಿದೆ. ಈಗ ಭತ್ತದ ಧಾರಣೆ ಕ್ವಿಂಟಾಲ್‌ಗೆ 4 ಸಾವಿರದಿಂದ 4,200 ರೂ. ಇದೆ.
ಊಟಕ್ಕೆ ಬಳಸುವ ಆರ್‌ಎನ್‌ಆರ್, ಸೋನಾ ಮಸೂರಿ ಭತ್ತದ ಧಾರಣೆಯೇ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಈ ಅಕ್ಕಿಗಳ ಬೆಲೆ 42 ರೂ.ನಿಂದ 55ಕ್ಕೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಭತ್ತದ ಬೆಲೆ ಇನ್ನಷ್ಟು ಹೆಚ್ಚಾಗಲಿದೆ. ಸಹಜವಾಗಿ ಅಕ್ಕಿ ದರವೂ ಗಗನಮುಖಿ ಆಗುವುದು ನಿಶ್ಚಿತ.
ಬರಿದಾಗುತ್ತಿದೆ ಅನ್ನದ ಬಟ್ಟಲು
ಭಾರತದಲ್ಲಿ ಅತಿ ಹೆಚ್ಚು ಭತ್ತ ಬೆಳೆಯುವ ರಾಜ್ಯ ಪಶ್ಚಿಮ ಬಂಗಾಳ. 2023-24ರಲ್ಲಿ 15.75 ಮಿಲಿಯನ್ ಟನ್ ಭತ್ತ ಇಲ್ಲಿ ಉತ್ಪಾದನೆಯಾಗಿತ್ತು. ದೇಶದ ಶೇ.13.7ರಷ್ಟು ಅಕ್ಕಿ ಈ ರಾಜ್ಯದಲ್ಲಿ ದೊರೆಯುತ್ತದೆ. ಕರ್ನಾಟಕದಲ್ಲಿ 4 ಮಿಲಿಯನ್ ಟನ್ ಭತ್ತ ಉತ್ಪಾದಿಸಲಾಗುತ್ತದೆ. ಕರ್ನಾಟಕದಲ್ಲಿ ಅಂದಾಜು 35 ಲಕ್ಷ ಎಕರೆಯಲ್ಲಿ ಭತ್ತ ಬೆಳೆಯಲಾಗುತ್ತದೆ. ಆದರೆ ಇತ್ತೀಚೆಗೆ ನೀರಿನ ಕೊರತೆ, ಕೂಲಿ ಕಾರ್ಮಿಕರ ಸಮಸ್ಯೆ, ಪರ್ಯಾಯ ಬೆಳೆಗಳತ್ತ ಚಿತ್ತ ಹರಿಸಿರುವುದು, ಜಲಾಶಯಗಳ ಅಚ್ಚುಕಟ್ಟು ಪ್ರದೇಶವನ್ನು ಅಡಿಕೆ ಬೆಳೆ ಆವರಿಸಿಕೊಳ್ಳುತ್ತಿರುವ ಪರಿಣಾಮ ಭತ್ತ ಬೆಳೆಯುವ ಪ್ರದೇಶ ಪ್ರತಿ ವರ್ಷ ಕಡಿಮೆಯಾಗುತ್ತಿದೆ.
ಅಚ್ಚುಕಟ್ಟು ಪ್ರದೇಶಗಳೇ ಮೂಲ
ಭದ್ರಾ, ತುಂಗಭದ್ರಾ ಹಾಗೂ ಕಾವೇರಿ ಜಲಾಶಯಗಳ ಅಚ್ಚುಕಟ್ಟು ಪ್ರದೇಶವೇ ಭತ್ತದ ಬೆಳೆಗೆ ಜೀವಾಳ. ಇಲ್ಲಿ ವರ್ಷಕ್ಕೆ ಎರಡು ಫಸಲು ತೆಗೆಯಲಾಗುತ್ತದೆ. ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರಕನ್ನಡ, ಕರಾವಳಿ ಜಿಲ್ಲೆಗಳಲ್ಲಿ ಭತ್ತ ಬೆಳೆಯಲಾಗುತ್ತದೆಯಾದರೂ ಇಲ್ಲಿ ಸಣ್ಣ ಹಿಡುವಳಿದಾರರೇ ಹೆಚ್ಚು. ಇವು ಮಳೆಯಾಶ್ರಿತ ಭತ್ತದ ಪ್ರದೇಶಗಳು. ಇಲ್ಲಿ ಒಂದು ಬೆಳೆ ತೆಗೆಯುವುದೇ ಕಷ್ಟ. ಬಹುತೇಕ ರೈತರು ಸ್ವಂತ ಬಳಕೆಗೆ ಅಗತ್ಯವಿರುವಷ್ಟು ಭತ್ತ ಬೆಳೆದುಕೊಂಡು ಉಳಿದ ಭೂಮಿಯಲ್ಲಿ ಬೇರೆ ಫಸಲು ತೆಗೆಯುತ್ತಿದ್ದಾರೆ. ಈ ವರ್ಷ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕುಸಿದಿರುವುದು ಭತ್ತದ ಬೇಡಿಕೆ ಹೆಚ್ಚಿಸಿದೆ.
ಕರ್ನಾಟಕದಲ್ಲಿ ಬೆಳೆಯುವ ಭತ್ತ ಮಹಾರಾಷ್ಟ್ರ, ಗುಜರಾತ್, ಕೇರಳ ಮುಂತಾದ ರಾಜ್ಯಗಳಿಗೆ ರವಾನೆಯಾಗುತ್ತದೆ. ಶ್ರೀಲಂಕಾ, ಬಾಂಗ್ಲಾದೇಶ, ಸೌದಿ ರಾಷ್ಟ್ರಗಳಿಗೆ ರಾಜ್ಯದಿಂದ ಅಕ್ಕಿ ರಫ್ತು ಮಾಡಲಾಗುತ್ತದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಶಿರಾಳಕೊಪ್ಪ ಭಾಗದಲ್ಲಿ ಬೆಳೆಯುವ ಭತ್ತವನ್ನು ತಮಿಳುನಾಡಿನ ವ್ಯಾಪಾರಿಗಳು ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಾರೆ.
ಯಾವ ಜಿಲ್ಲೆಗಳಲ್ಲಿ ಭತ್ತದ ಬೆಳೆ?
ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳು ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇ. ರಾಯಚೂರು ರಾಜ್ಯದಲ್ಲಿಯೇ ಅತಿ ಹೆಚ್ಚು ಭತ್ತ ಬೆಳೆಯುವ ಜಿಲ್ಲೆ. ಕೊಪ್ಪಳ ಜಿಲ್ಲೆಯಲ್ಲೂ ಭತ್ತದ ಕೃಷಿ ಪ್ರಮುಖವಾಗಿದೆ. ಮಂಡ್ಯ ಮತ್ತು ಮೈಸೂರು ಭಾಗದಲ್ಲೂ ಕಾವೇರಿ ನದಿ ಆಶ್ರಯದಲ್ಲಿ ವ್ಯಾಪಕವಾಗಿ ಭತ್ತ ಬೆಳೆಯಲಾಗುತ್ತದೆ. ದಾವಣಗೆರೆ ಜಿಲ್ಲೆ ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಒಳಪಟ್ಟಿದ್ದು ಇಲ್ಲಿಯೂ ಭತ್ತದ ಕೃಷಿ ಹೆಚ್ಚಿದೆ. ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯಾಶ್ರಿತವಾಗಿ ಭತ್ತ ಬೆಳೆಯಲಾಗುತ್ತದೆ.
ಎಲ್ಲಿ? ಎಷ್ಟು ಭತ್ತದ ಪ್ರದೇಶ?
ತುಂಗಭದ್ರಾ ಅಚ್ಚುಕಟ್ಟು- 8 ಲಕ್ಷ ಎಕರೆ
ಕಾವೇರಿ ಅಚ್ಚುಕಟ್ಟು- 1.05 ಲಕ್ಷ ಎಕರೆ
ಭದ್ರಾ ಅಚ್ಚುಕಟ್ಟು- 1.05 ಲಕ್ಷ ಎಕರೆ
ಕಾಳಸಂತೆಯ ಚಿಂತೆ
ಈ ಬಾರಿ ಭತ್ತದ ಉತ್ಪಾದನೆ ತೀವ್ರ ಕುಸಿತವಾಗುವ ಸಾಧ್ಯತೆ ಇರುವುದರಿಂದ ಎಚ್ಚೆತ್ತುಕೊಂಡ ಕೆಲವು ಅಕ್ಕಿ ವ್ಯಾಪಾರಿಗಳು ಈಗಾಗಲೇ ಭತ್ತ ಖರೀದಿಗೆ ಮುಂದಾಗಿದ್ದಾರೆ. ಹೆಚ್ಚು ಭತ್ತ ಸಂಗ್ರಹಿಸಿ ಮಾರುಕಟ್ಟೆಯಲ್ಲಿ ಭತ್ತದ ಕೃತಕ ಅಭಾವ ಸೃಷ್ಟಿಸುವ ಅಪಾಯವಿದೆ. ಮುಂದಿನ ದಿನಗಳಲ್ಲಿ ಅಕ್ಕಿ ಉತ್ಪಾದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಕಾಳಸಂತೆಕೋರರು ಸೃಷ್ಟಿಯಾಗುವ ಅಪಾಯವಿದೆ. ಸರ್ಕಾರ ಈಗಲೇ ಸೂಕ್ತ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.
"
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಈ ವರ್ಷ ಬೇಸಿಗೆಯ ಭತ್ತದ ಬೆಳೆಗೆ ನೀರಿನ ಕೊರತೆಯಿತ್ತು. ಈಗ ಮುಂಗಾರಿನಲ್ಲೂ ಅಚ್ಚುಕಟ್ಟು ಭಾಗದಲ್ಲಿ ಭತ್ತ ಬೆಳೆಯಲು ಅವಕಾಶ ಇಲ್ಲದಿರುವುದರಿಂದ ಕಳೆದ ಎರಡು ತಿಂಗಳಿನಿಂದಲೂ ಭತ್ತದ ಬೆಲೆ ಏರಿಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಭತ್ತಕ್ಕೆ ಇನ್ನಷ್ಟು ಬೇಡಿಕೆ ಸೃಷ್ಟಿಯಾಗುವುದು ನಿಶ್ಚಿತ.
— ಅಶ್ವಿನ್ ಸುಬ್ಬರಾವ್ ರೈಸ್‌ಮಿಲ್ ಮಾಲೀಕ, ಆನಂದಪುರ