ಸಾಗರದ ಜಂಬಗಾರು ರೈಲ್ವೆ ನಿಲ್ದಾಣದಲ್ಲಿ ಬಿಜೆಪಿಯಿಂದ ಆಯೋಜಿಸಿದ್ದ ವನಮಹೋತ್ಸವದಲ್ಲಿ ಬಿ.ವೈ.ರಾಘವೇಂದ್ರ ಸಸಿ ನೆಟ್ಟರು. ಹರತಾಳು ಹಾಲಪ್ಪ, ಮಧುರಾ ಶಿವಾನಂದ್, ಮೈತ್ರಿ ಪಾಟೀಲ್ ಇತರರಿದ್ದರು.
- ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಶ್ಲಾಘನೆ
- 12 ವರ್ಷದ ಪ್ರಧಾನಿ ಅವಧಿ ಪೂರ್ಣ ಹಿನ್ನೆಲೆ ಸಂಭ್ರಮಾಚರಣೆ
- ಜಂಬಗಾರು ರೈಲ್ವೆ ನಿಲ್ದಾಣದ ಅಭಿವೃದ್ಧಿ ಪರಿಶೀಲನೆ
ಸಾಗರ: ಪ್ರಧಾನಿ ನರೇಂದ್ರ ಮೋದಿ ಆಡಳಿತ ಅವಧಿಯಲ್ಲಿ ನಿರಂತರ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ಇಡೀ ವಿಶ್ವವೇ ಭಾರತ ದೇಶದ ಪ್ರಗತಿಯನ್ನು ಗಮನಿಸುತ್ತಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ನರೇಂದ್ರ ಮೋದಿ ಅವರ ಆಡಳಿತ 12 ವರ್ಷ ಪೂರ್ಣ ಹಿನ್ನೆಲೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾದಿಂದ ಜಂಬಗಾರು ರೈಲ್ವೆ ನಿಲ್ದಾಣದಲ್ಲಿ ಆಯೋಜಿಸಿದ್ದ ವನಮಹೋತ್ಸವದಲ್ಲಿ ಸಸಿ ನೆಟ್ಟು ರೈಲ್ವೆ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿ ಮಾತನಾಡಿದರು.
ಭವಿಷ್ಯದ ದೃಷ್ಟಿಯಿಂದ ದೇಶದಲ್ಲಿ ರೈಲ್ವೆ ಯೋಜನೆ ವಿಸ್ತರಿಸುತ್ತಿದ್ದು, ಶಿವಮೊಗ್ಗದಿಂದ ತಾಳಗುಪ್ಪವರೆಗೆ ರೈಲ್ವೆ ಮೂಲಸೌಲಭ್ಯ ಅಭಿವೃದ್ಧಿಪಡಿಸಲು 100 ಕೋಟಿ ರೂ. ವಿನಿಯೋಗಿಸಲಾಗಿದೆ. ತಾಳಗುಪ್ಪದಿಂದ ಸಿದ್ದಾಪುರ, ಶಿರಸಿ, ಹುಬ್ಬಳ್ಳಿ ರೈಲ್ವೆ ಸಂಪರ್ಕ ವಿಸ್ತರಣೆಗೆ ಸರ್ವೇ ಕಾರ್ಯ, ಹೊನ್ನಾವರಕ್ಕೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಗಮನ ಹರಿಸಲಾಗಿದೆ ಎಂದು ತಿಳಿಸಿದರು.
ಬ್ರಾಡ್‌ಗೇಜ್ ನಿರ್ಮಾಣಕ್ಕೆ 180 ಕೋಟಿ ರೂ. ಮ್ಯಾಚಿಂಗ್ ಗ್ರಾೃಂಟ್‌ಅನ್ನು ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ನೀಡಿದ್ದರಿಂದ ಸಾಗರ ರೈಲ್ವೆ ಮಾರ್ಗ ಉಳಿಸಿಕೊಳ್ಳಲು ಸಾಧ್ಯವಾಗಿತ್ತು. ನಾನು ಲೋಕಸಭಾ ಸದಸ್ಯನಾದ ಮೇಲೆ ರೈಲ್ವೆ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದೇನೆ ಎಂದರು.
ಮಾಜಿ ಸಚಿವ ಹರತಾಳು ಹಾಲಪ್ಪ, ರೈಲ್ವೆ ಹೋರಾಟ ಸಮಿತಿಯ ಕುಮಾರಸ್ವಾಮಿ, ಶಿವಮೂರ್ತಿ, ಬಿಜೆಪಿ ಪ್ರಮುಖರಾದ ಟಿ.ಡಿ.ಮೇಘರಾಜ್, ಮಲ್ಲಿಕಾರ್ಜುನ ಹಕ್ರೆ, ಪ್ರಸನ್ನ ಕೆರೆಕೈ, ಆರ್.ಶ್ರೀನಿವಾಸ್, ಗಣೇಶ್‌ಪ್ರಸಾದ್, ದೇವೇಂದ್ರಪ್ಪ, ಮಧುರಾ ಶಿವಾನಂದ್, ಮೈತ್ರಿ ಪಾಟೀಲ್, ಪ್ರೇಮಾಸಿಂಗ್, ಗಾಯತ್ರಿ, ಶ್ವೇತಾ ಸಂತೋಷ್ ಶೇಟ್, ಪ್ರದೀಪ್ ಆಚಾರಿ ಇತರರಿದ್ದರು.