ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣಕ್ಕೆ ಎಸ್.ಎನ್.ಚನ್ನಬಸಪ್ಪ ಭೇಟಿ ನೀಡಿ ಅವ್ಯವಸ್ಥೆಗಳನ್ನು ಕಂಡು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೆ.ವಿ.ವಸಂತಕುಮಾರ್, ನಾಗರಾಜ್ ಇತರರಿದ್ದರು. 
ಶಿವಮೊಗ್ಗ

ಖಾಸಗಿ ಬಸ್ ನಿಲ್ದಾಣ ಅವ್ಯವಸ್ಥೆ ಕಂಡು ಶಾಸಕ ಗರಂ I bus stand

ಪ್ರಮುಖ ಮುಖ್ಯಾಂಶಗಳು

  • ಮೂಲ ಸೌಕರ್ಯ ಕಲ್ಪಿಸಲು ಸೂಚನೆ
  • ಫುಟ್‌ಪಾತ್ ಅತಿಕ್ರಮಣ ತೆರವಿಗೆ ಚೆನ್ನಿ ನಿರ್ದೇಶನ
ಶಿವಮೊಗ್ಗ: ತೆರಿಗೆ (tax) ಹಣದಿಂದ ಕಲ್ಪಿಸಲಾಗಿರುವ ಮೂಲ ಸೌಕರ್ಯಗಳಲ್ಲಿ ಕೊರತೆ ಉಂಟಾಗಿ ಜನರಿಗೆ ಕಿರುಕುಳ ಆಗಬಾರದು. ಆಡಳಿತ (adminstration) ವ್ಯವಸ್ಥೆಯಲ್ಲಿ ಇಂತಹ ಬೇಜವಾಬ್ದಾರಿತನಕ್ಕೆ ತಕ್ಷಣವೇ ತಡೆಯೊಡ್ಡಬೇಕು ಎಂದು ಶಾಸಕ (mla) ಎಸ್.ಎನ್.ಚನ್ನಬಸಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಮುಖ್ಯ ಬಸ್ ನಿಲ್ದಾಣಕ್ಕೆ ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಸೋಮವಾರ ಭೇಟಿ ನೀಡಿದ ಅವರು, ಪ್ರಯಾಣಿಕರು ಹಾಗೂ ಸ್ಥಳೀಯ ಸಾರ್ವಜನಿಕರಿಂದ ಅಹವಾಲು ಆಲಿಸಿದರು. ಹಲವಾರು ಲೋಪಗಳನ್ನು ಕಂಡು ಆಕ್ಷೇಪ ವ್ಯಕ್ತಪಡಿಸಿದರು.
ಪಾದಚಾರಿ ಮಾರ್ಗಗಳ ಅತಿಕ್ರಮಣ, ವಿಶ್ರಾಂತಿ ಗೃಹಗಳ ಕಳಪೆ ನಿರ್ವಹಣೆ, ಗಲೀಜಾದ ಆಸನಗಳು, ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸದೆ ಬೀಗ ಹಾಕಿರುವ ಶೌಚಗೃಹಗಳು, ಶುದ್ಧ ಕುಡಿಯುವ ನೀರಿನ ಸರಬರಾಜಿನ ವ್ಯತ್ಯಯದ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಿಲ್ದಾಣದ ಎಲ್ಲ ಶೌಚಗೃಹಗಳನ್ನು ತ್ವರಿತವಾಗಿ ದುರಸ್ತಿಗೊಳಿಸಬೇಕು. ನಿರ್ವಹಣಾ ಸಿಬ್ಬಂದಿಗೆ ಪ್ರತ್ಯೇಕ ಕೌಂಟರ್ ನಿರ್ಮಿಸಬೇಕು. ಕುಡಿಯುವ ನೀರಿನ ಫಿಲ್ಟರ್‌ಗಳನ್ನು ತಕ್ಷಣ ಸರಿಪಡಿಸಬೇಕು. ಕರ್ನಾಟಕ ಒನ್ ಕೇಂದ್ರಕ್ಕೆ ಸುಸಜ್ಜಿತ ಪೀಠೋಪಕರಣ ಪೂರೈಸಬೇಕು. ಪ್ರಯಾಣಿಕರ ಹಿತದೃಷ್ಟಿಯಿಂದ ಬಸ್ ನಿಲ್ದಾಣದ ಆವರಣದಲ್ಲಿ ತಕ್ಷಣವೇ ಸುಧಾರಿತ ಸಿಸಿ ಟಿವಿ, ಕ್ಯಾಮರಾಗಳನ್ನು ಅಳವಡಿಸಬೇಕು. ದ್ವಿಚಕ್ರ ವಾಹನಗಳು, ಕಾರು, ಸರಕು ಸಾಗಣೆ ವಾಹನಗಳನ್ನು ಖಾಸಗಿ ನಿಲ್ದಾಣದೊಳಗೆ ಬಿಡಬಾರದು. ತಿಂಡಿ ಗಾಡಿಗಳನ್ನು ನಿಗದಿತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಹೂವಿನ ಮಳಿಗೆಗಳನ್ನು ಸ್ಥಳಾಂತರಿಸಿ ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶ ನೀಡಬೇಕು ಎಂದು ಸೂಚಿಸಿದರು.
ಮಳೆಗಾಲದಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಒಳಚರಂಡಿಗಳ ಸಮರ್ಪಕ ಹೂಳೆತ್ತುವಿಕೆ ಮತ್ತು ನಿರ್ವಹಣಾ ಕಾಮಗಾರಿಯನ್ನು ಕೂಡಲೇ ಕೈಗೊಳ್ಳಬೇಕು. ನೂತನ ಸಾರ್ವಜನಿಕ ಶೌಚಗೃಹಗಳ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಜನಬಳಕೆಗೆ ಮುಕ್ತವಾಗಿಸಬೇಕು ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನಾಗರಾಜ್, ನಗರ ಉಪಾಧ್ಯಕ್ಷ ಪಿ.ಪ್ರಭಾಕರ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಜಗನ್ನಾಥ್, ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಕೆ.ವಿ.ವಸಂತಕುಮಾರ್, ಸೀತಾರಾಮ್ ಇತರರಿದ್ದರು.
ಪೊಲೀಸ್ ಸಿಬ್ಬಂದಿ ನಿಯೋಜಿಸಿ
ಹೆಣ್ಣು ಮಕ್ಕಳ ಮತ್ತು ಮಹಿಳೆಯರ ಸುರಕ್ಷೆ ಖಾತ್ರಿಪಡಿಸುವ ನಿಟ್ಟಿನಲ್ಲಿ ಪ್ರಮುಖ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ಹಾಗೂ ಗಸ್ತು ವಾಹನಗಳನ್ನು ನಿಯೋಜಿಸಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಅಧಿಕಾರಿಗಳಿಗೆ ಸೂಚಿಸಿದರು.