ಶಿವಮೊಗ್ಗ ಬಿ.ಎಚ್.ರಸ್ತೆಯ ಇಎಸ್‌ಐ ಡಿಸ್ಪೆಸರಿಗೆ ಭೇಟಿ ನೀಡಿದ್ದ ಶಾಸಕ ಎಸ್.ಎನ್.ಚನ್ನಬಸಪ್ಪ ಚಿಕಿತ್ಸೆಗೆ ಬಂದಿದ್ದ ಕಾರ್ಮಿಕರು ಮತ್ತು ಅವರ ಕುಟುಂಬಸ್ಥರ ದೂರು ಆಲಿಸಿದರು. 
ಶಿವಮೊಗ್ಗ

ಇಎಸ್‌ಐ ಡಿಸ್ಪೆನ್ಸರಿಗೆ ಶಾಸಕ ಚನ್ನಬಸಪ್ಪ ಭೇಟಿ, ಪರಿಶೀಲನೆ | ESI Dispensary

ಪ್ರಮುಖ ಮುಖ್ಯಾಂಶಗಳು

  • ಶ್ರಮಿಕ ವರ್ಗಕ್ಕೆ ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ
  • ಕಾರ್ಮಿಕರಿಂದ ಡಿಸ್ಪೆನ್ಸರಿ ನಿರ್ವಹಣೆ, ಚಿಕಿತ್ಸಾ ಲೋಪಗಳ ಅಹವಾಲು
  • ಶಿವಮೊಗ್ಗದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ ಎಚ್ಚರಿಕೆ
ಶಿವಮೊಗ್ಗ: ನಗರದ ಶ್ರಮಿಕ ವರ್ಗಕ್ಕೆ ಗುಣಮಟ್ಟದ ವೈದ್ಯಕೀಯ ಸೇವೆ(Quality medical service) ಹಾಗೂ ಸಕಾಲಕ್ಕೆ ಅಗತ್ಯ ಔಷಧ ಸಿಗುವಂತೆ ನೋಡಿಕೊಳ್ಳುವುದು ಆರೋಗ್ಯ ಇಲಾಖೆ ಕರ್ತವ್ಯವಾಗಿದ್ದು, ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ(MLA S.N.Channabasappa

) ಎಚ್ಚರಿಕೆ ನೀಡಿದರು.

ನಗರ ವ್ಯಾಪ್ತಿಯ ಕಾರ್ಮಿಕರಿಂದ ಇಎಸ್‌ಐಸಿ ಡಿಸ್ಪೆನ್ಸರಿ(ESI Dispensary) ನಿರ್ವಹಣೆ ಹಾಗೂ ಚಿಕಿತ್ಸಾ ಲೋಪಗಳ ಅಹವಾಲು ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ನಗರದ ಮೂರು ಇಎಸ್‌ಐ ಡಿಸ್ಪೆನ್ಸರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಕಾರ್ಮಿಕರಿಗೆ ಅಗತ್ಯವಿರುವ ಪ್ರಮುಖ ಔಷಧಗಳ ಕೊರತೆಯಾಗದಂತೆ ಮುಂಚಿತವಾಗಿ ದಾಸ್ತಾನು ಇಟ್ಟುಕೊಳ್ಳಬೇಕು. ರೋಗಿಗಳನ್ನು ಖಾಸಗಿ ಮೆಡಿಕಲ್‌ಗಳಿಗೆ ಕಳುಹಿಸದೆ ಆಸ್ಪತ್ರೆಯಲ್ಲೇ ಉಚಿತವಾಗಿ ಔಷಧ ಒದಗಿಸಬೇಕು ಎಂದರು.
ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಸಮಯಪಾಲನೆ ಮಾಡಬೇಕು. ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಪ್ರಾಥಮಿಕ ಹಾಗೂ ತುರ್ತು ಚಿಕಿತ್ಸೆ ನೀಡಬೇಕು. ಆಸ್ಪತ್ರೆ ಆವರಣದಲ್ಲಿ ಸ್ವಚ್ಛತೆ, ಕುಡಿಯುವ ನೀರು ಮತ್ತು ಮೂಲಸೌಕರ್ಯ(Cleanliness, drinking water and infrastructure)ಗಳ ಕೊರತೆ ಇರದಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು.
ಆಸ್ಪತ್ರೆ ಔಷಧ ವಿತರಣಾ ಕೇಂದ್ರ ಹಾಗೂ ಪ್ರಯೋಗಾಲಯಗಳನ್ನು ವೀಕ್ಷಿಸಿದರು. ಚಿಕಿತ್ಸೆಗೆ ಬಂದಿದ್ದ ಕಾರ್ಮಿಕರು ಮತ್ತು ಅವರ ಕುಟುಂಬಸ್ಥರೊಂದಿಗೆ ಸಮಾಲೋಚನೆ ನಡೆಸಿ ಸಮಸ್ಯೆಗಳನ್ನು ಆಲಿಸಿದರು.