ಮಿಯಾವಾಕಿ ಅರಣ್ಯ. (ಸಂಗ್ರಹ ಚಿತ್ರ) 
ಶಿವಮೊಗ್ಗ

ನನಸಾಗುತ್ತಿದೆ ಮಿಯಾವಾಕಿ ಕನಸು! I miyawaki forest

ಪ್ರಮುಖ ಮುಖ್ಯಾಂಶಗಳು

  • ಅನುಷ್ಠಾನವಾಗುತ್ತಿದೆ ಬಜೆಟ್‌ನ ಘೋಷಣೆ
  • ಕಡಿಮೆ ಜಾಗದಲ್ಲಿ ದಟ್ಟಾರಣ್ಯ ಬೆಳೆಸುವ ಯೋಜನೆ
  • ನಗರಪಾಲಿಕೆಯಲ್ಲಿ ಪ್ರಕ್ರಿಯೆ ಆರಂಭ
ಅರವಿಂದ ಅಕ್ಲಾಪುರ ಶಿವಮೊಗ್ಗ
ಕಳೆದೆರಡು ದಶಕಗಳಲ್ಲಿ ಸರ್ಕಾರದ ವಿವಿಧ ಯೋಜನೆ (plan) ಗಳಿಗಾಗಿ ಸಾಕಷ್ಟು ಅರಣ್ಯ (forest) ಭೂಮಿ ನಾಶವಾಗಿದೆ. ಇನ್ನೊಂದೆಡೆ ಒತ್ತುವರಿ ಕಾರಣಕ್ಕೆ ಮರಗಳ ಕಡಿತಲೆಯೂ ನಡೆದಿದೆ. ಇದೆಲ್ಲದರ ನಡುವೆ ಕಡಿಮೆ ಪ್ರದೇಶದಲ್ಲಿ ಹೆಚ್ಚು ಅರಣ್ಯ ಭೂಮಿ ಬೆಳೆಸುವ ರಾಜ್ಯ ಸರ್ಕಾರ (government) ದ ಘೋಷಣೆ ಜಿಲ್ಲೆಯಲ್ಲಿ ಕಾರ್ಯಗತವಾಗಲಿದೆ.
ನಗರ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಡಿಮೆ ಜಾಗದಲ್ಲಿ ಹೆಚ್ಚು ಮರಗಳನ್ನು ಬೆಳೆಸುವ ಮಿಯಾವಾಕಿ ಅರಣ್ಯ ಯೋಜನೆಯನ್ನು ರಾಜ್ಯದ 100 ಪಟ್ಟಣ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಅನುಷ್ಠಾನ ಮಾಡುವುದಾಗಿ ರಾಜ್ಯ ಸರ್ಕಾರ ಈ ವರ್ಷದ ಬಜೆಟ್‌ನಲ್ಲಿ ಘೋಷಿಸಿತ್ತು. ಇದಕ್ಕೆ ಪರಿಸರಾಸಕ್ತರ ವಲಯದಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು.
ಇನ್ನೇನು ಕೆಲವೇ ದಿನಗಳಲ್ಲಿ ಮುಂಗಾರು ಆರಂಭವಾಗಲಿದೆ. ಗಿಡಗಳನ್ನು ನೆಡಲು ಇದು ಸಕಾಲ. ಆದರೆ ರಾಜ್ಯ ಸರ್ಕಾರ ವಿಳಂಬವಾಗಿ ತೀರ್ಮಾನ ಕೈಗೊಂಡಿರುವುದರಿಂದ ಮುಂಗಾರು ಆರಂಭಕ್ಕೂ ಮುನ್ನ ಈ ಯೋಜನೆ ಜಾರಿಯಾಗುವುದು ಅನುಮಾನ. ಜಿಲ್ಲೆಯಲ್ಲಿ ಶಿವಮೊಗ್ಗ ನಗರ ಪಾಲಿಕೆ, ಭದ್ರಾವತಿ ಹಾಗೂ ಸಾಗರ ನಗರಸಭೆ, ಸೊರಬ ಪಟ್ಟಣ ಪಂಚಾಯಿತಿಯನ್ನು ಮಿಯಾವಾಕಿ ಅರಣ್ಯ ಬೆಳೆಸುವ ಯೋಜನೆಗೆ ಆಯ್ಕೆ ಮಾಡಲಾಗಿದೆ. ಈ ಸ್ಥಳೀಯ ಸಂಸ್ಥೆಗಳು ಇನ್ನಷ್ಟೇ ಪ್ರಕ್ರಿಯೆ ಆರಂಭಿಸಬೇಕಿದೆ. ಶಿವಮೊಗ್ಗ ನಗರದಲ್ಲಿ ಜಾಗ ಗುರುತಿಸುವ ಕೆಲಸ ನಡೆಯುತ್ತಿದೆ.
ಇದರಿಂದ ಉಪಯೋಗವೇನು?
ಸಾಂಪ್ರದಾಯಿಕವಾಗಿ ಬೆಳೆಯುವ ಕಾಡಿಗಿಂತಲೂ 30 ಪಟ್ಟು ವೇಗವಾಗಿ ಮಿಯಾವಾಕಿ ಪದ್ಧತಿಯಲ್ಲಿ ಅರಣ್ಯವನ್ನು ಬೆಳೆಸಬಹುದು. ಆದರೆ ಈ ಕಾಡು ಬೆಳೆಸಲು ಫಲವತ್ತಾದ ಮಣ್ಣು ಹಾಗೂ ಸೂಕ್ತ ಪರಿಸರದ ಅಗತ್ಯವಿದೆ. ಮಣ್ಣಿನಲ್ಲಿ ಪೋಷಕಾಂಶದ ಕೊರತೆ ಇದ್ದರೆ ಅದನ್ನು ಒದಗಿಸಬೇಕಾಗುತ್ತದೆ. ಒಂದು ಚದರ ಮೀಟರ್‌ನಲ್ಲಿ 3ರಿಂದ 4 ಗುಂಡಿಗಳನ್ನು ತೆಗೆದು ಗಿಡ ನೆಡಬಹುದು. ಗಿಡಗಳು ಒತ್ತಾಗಿ ಬೆಳೆದು ಮರವಾಗುವುದರಿಂದ ಭವಿಷ್ಯದಲ್ಲಿ ಗಾಳಿ, ಮಳೆಗೆ ಮರ ನೆಲಕ್ಕುರುಳುವ ಸಾಧ್ಯತೆ ತುಂಬ ಕಡಿಮೆ ಇರುತ್ತದೆ. ಪರಿಸರಕ್ಕೆ ಪೂರಕ ವಾತಾವರಣ, ಸಸ್ಯ ಕುಲದ ಸಂವರ್ಧನೆ, ಶುದ್ಧ ಗಾಳಿ ಈ ಅರಣ್ಯದಿಂದ ಸಿಗಲಿದೆ. ಮರಗಳು ಒತ್ತೊತ್ತಾಗಿ ಬೆಳೆಯುವುದರಿಂದ ಅರಣ್ಯದೊಳಕ್ಕೆ ಮಾನವ ಪ್ರವೇಶ ಸಾಧ್ಯವಿಲ್ಲ. ಅರಣ್ಯದ ಒಳ ಭಾಗದಲ್ಲಿ ಹಣ್ಣಿನ ಮರಗಳನ್ನು ಬೆಳೆಸಿದರೆ ಕೆಲ ಕಾಡು ಪ್ರಾಣಿಗಳಿಗೆ ಅನುಕೂಲವಾಗಲಿದೆ. ಅರಣ್ಯದ ಸುತ್ತಲೂ ವಾಕಿಂಗ್ ಪಾಥ್ ಇರುವ ಕಾರಣ ವಾಯುವಿಹಾರಕ್ಕೂ ಸೂಕ್ತವಾಗಿರುತ್ತದೆ. ಪಶ್ಚಿಮಘಟ್ಟದ ದೀರ್ಘ ಕಾಲದ ಮರಗಳ ಕಾರಣದಿಂದ ಉತ್ತಮ ಅರಣ್ಯ ನಿರ್ಮಾಣ ಸಾಧ್ಯವಾಗಲಿದೆ.
ಮಿಯಾವಾಕಿ ಜಪಾನ್ ಪದ್ಧತಿ
ಜಪಾನ್‌ನ 91 ವರ್ಷದ ಸಸ್ಯಶಾಸ್ತ್ರಜ್ಞ ಅಕಿರಾ ಮಿಯಾ ವಾಕಿ, ಅರಣ್ಯ ಬೆಳೆಸಲು ಕಂಡುಹಿಡಿದ ವಿಶಿಷ್ಟ ಪದ್ಧತಿ ಈಗ ಅವರದೇ ಹೆಸರಿನಲ್ಲಿ ಪ್ರಚಲಿತಕ್ಕೆ ಬಂದಿದೆ. ಜಪಾನ್‌ನಲ್ಲಿ ನೈಸರ್ಗಿಕ ಅರಣ್ಯಕ್ಕೆ ಹೆಚ್ಚು ಒತ್ತು ನೀಡಲಾಗಿತ್ತು. ಆದರೆ ಬದಲಾದ ಸನ್ನಿವೇಶ, ಜಾಗತಿಕ ತಾಪಮಾನದ ಏರಿಕೆ ಹಿನ್ನೆಲೆಯಲ್ಲಿ ತುರ್ತಾಗಿ ಅರಣ್ಯ ವಿಸ್ತಾರ ಮಾಡಬೇಕು ಎಮದು ನಿರ್ಧರಿಸಿದ್ದ ಯೊಕೋಹಾಮ ವಿವಿಯ ಸಂಶೋಧಕ ಅಕಿರಾ ಮಿಯಾವಾಕಿ ಹೊಸ ಪದ್ಧತಿ ಪರಿಚಯಿಸಿದರು. ಗಿಡಗಳ ನಡುವೆ ಇಷ್ಟೇ ಅಂತರವಿರಬೇಕು ಎಂಬ ಹಳೆಯ ಪದ್ಧತಿ ಬದಲಿಗೆ ಒಂದರಿಂದ ಎರಡು ಅಡಿಗೆ ಒಂದು ಗಿಡ ನೆಡುವುದು, ಅದಕ್ಕೂ ಮುನ್ನ ಗಿಡಗಳಿಗೆ ಅಗತ್ಯವಿರುವ ಪೋಷಕಾಂಶವನ್ನು ಮಣ್ಣಿಗೆ ಸೇರಿಸುವುದು, ಅಲ್ಲಿನ ವಾತಾವರಣಕ್ಕೆ ಹೊಂದಿಕೆಯಾಗುವ ಗಿಡಗಳನ್ನೇ ನೆಡುವುದು ಮಿಯಾವಾಕಿ ಪದ್ಧತಿ.

ಹೊರೆಯಾಗದಿರಲಿ

ರಾಜ್ಯದಲ್ಲಿ ಖಾಸಗಿಯಾಗಿ ಹಲವರು ಮಿಯಾವಾಕಿ ಫಾರೆಸ್ಟ್ ಬೆಳೆಸಿದ ನಿದರ್ಶನಗಳಿವೆ. ಆದರೆ ಸರ್ಕಾರವೇ ಮುಂದೆ ಬಂದು ಸ್ಥಳೀಯ ಸಂಸ್ಥೆಗಳ ಮೂಲಕ ಈ ಮಾದರಿಯ ಅರಣ್ಯ ಬೆಳೆಸಲು ಮುಂದಾಗಿರುವುದು ವಿಶೇಷ. ಒಂದು ಹೆಕ್ಟೇರ್‌ನಲ್ಲಿ ಮಿಯಾವಾಕಿ ಅರಣ್ಯ ಬೆಳೆಸಲು ಕನಿಷ್ಠ ಮೂರು ಲಕ್ಷ ರೂ. ಬೇಕು. ಆರ್ಥಿಕವಾಗಿ ಇದು ಹೊರೆಯಾಗದಂತೆ ಸ್ಥಳೀಯ ಸಂಸ್ಥೆಗಳು ಯೋಜನೆ ಅನುಷ್ಠಾನ ಮಾಡಬೇಕಿದೆ. ಆರ್ಥಿಕ ನೆರವೂ ಸೇರಿ ಗಿಡ ನೆಡುವ ಹಾಗೂ ನಿರ್ವಹಣೆ ಮಾಡುವ ಎಲ್ಲ ಹಂತಗಳಲ್ಲೂ ಸಾರ್ವಜನಿಕರ ಸಹಭಾಗಿತ್ವ ಪಡೆದರೆ ಯೋಜನೆ ಯಶಸ್ವಿ ಆಗುವುದರಲ್ಲಿ ಅನುಮಾನವಿಲ್ಲ.
"

ಶಿವಮೊಗ್ಗ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಿಯಾವಾಕಿ ಅರಣ್ಯ ಬೆಳೆಸಲು ಯೋಜನೆ ರೂಪಿಸಲಾಗುತ್ತಿದೆ. ಇದಕ್ಕಾಗಿ ಭೂಮಿ ಗುರುತಿಸಲಾಗುತ್ತಿದೆ. ನಗರದೊಳಗೆ ಈ ಅರಣ್ಯ ಬೆಳೆಸಲು ಕನಿಷ್ಠ ಒಂದು ಎಕರೆ ಪ್ರದೇಶವಾದರೂ ಬೇಕಾಗುತ್ತದೆ. ನಗರದ ಹೊರವಲಯದಲ್ಲಾದರೆ 3-4 ಎಕರೆ ಜಾಗ ಒದಗಿಸಬಹುದು. ಮೂರ‌್ನಾಲ್ಕು ಕಡೆ ಭೂಮಿ ನೋಡಲಾಗಿದೆ. ಈ ಬಗ್ಗೆ ಪರಿಣಿತರಿಂದ ಅಭಿಪ್ರಾಯ ಪಡೆದುಕೊಂಡು ಅರಣ್ಯ ಬೆಳೆಸಲು ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಒಟ್ಟು 4 ನಗರ ಹಾಗೂ ಪಟ್ಟಣ ಸ್ಥಳೀಯ ಸಂಸ್ಥೆಗಳು ಈ ಯೋಜನೆಗೆ ಆಯ್ಕೆಯಾಗಿವೆ.

— ಕೆ.ಮಾಯಣ್ಣ ಗೌಡ ನಗರಪಾಲಿಕೆ ಆಯುಕ್ತ