ಸಾಗರ ತಾಲೂಕಿನ ಕೆ.ಜಿ.ಕೊಪ್ಪ ಗ್ರಾಮದಲ್ಲಿ ನೆಟ್ಟಿದ್ದ ಗಿಡಗಳನ್ನು ಕಿತ್ತು ಹಾಕಿರುವ ಘಟನೆ ಖಂಡಿಸಿ ಗ್ರಾಮಸ್ಥರು ಎಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ದಿನೇಶ್ ಶಿರವಾಳ, ಅಖಿಲೇಶ್ ಚಿಪ್ಳಿ, ರಮೇಶ್ ಕೆಳದಿ, ರಾಮಚಂದ್ರ, ದೇವರಾಜ, ಸೋಮಶೇಖರ್ ಇತರರಿದ್ದರು.
ಸಾಗರ: ಸಾಗರ ತಾಲೂಕಿನ ತಾಳಗುಪ್ಪ ಹೋಬಳಿಯ ಕೆ.ಜಿ.ಕೊಪ್ಪ ಗ್ರಾಮದ ಸರ್ವೇ ನಂ.24ರಲ್ಲಿ ಗ್ರಾಮಸ್ಥರು ನೆಟ್ಟಿದ್ದ 6 ಸಾವಿರಕ್ಕೂ ಅಧಿಕ ಕಾಡುಜಾತಿ ಮತ್ತು ಔಷಧೀಯ ಗಿಡಗಳನ್ನು ಕಿತ್ತು ಹಾಕಿರುವ ಘಟನೆ ಖಂಡಿಸಿ ಜಿಲ್ಲಾ ರೈತ ಸಂಘ ಪದಾಧಿಕಾರಿಗಳು ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸೊರಬ ಕ್ಷೇತ್ರ ವ್ಯಾಪ್ತಿಗೆ ಬರುವ ಕೆ.ಜಿ.ಕೊಪ್ಪ ಗ್ರಾಮದಲ್ಲಿ ಶಾಸಕ ಮಧು ಬಂಗಾರಪ್ಪ ಬೆಂಬಲಿಗರ ಕುಮ್ಮಕ್ಕಿನಿಂದ ಸಸಿಗಳನ್ನು ಕಿತ್ತು ಹಾಕಿ ಪರಿಸರದ ಮೇಲೆ ದೌರ್ಜನ್ಯ ಎಸಗಿದ್ದಾರೆ. ಇದರ ನೈತಿಕ ಹೊಣೆ ಹೊತ್ತು ಮಧು ಬಂಗಾರಪ್ಪ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಒತ್ತಾಯಿಸಿದರು.
ಗಿಡಗಳನ್ನು ಕಿತ್ತ ಪ್ರಕರಣದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಕೆ.ಜಿ.ಕೊಪ್ಪ ಗ್ರಾಮಸ್ಥರು ಪರಿಸರ, ಸರ್ಕಾರಿ ಜಾಗ ಉಳಿಸಿಕೊಳ್ಳಬೇಕು ಎಂದು ಹೋರಾಟ ಮಾಡಿದರೆ, ಉಪವಿಭಾಗಾಧಿಕಾರಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಪರಿಸರ ನಾಶ ಮಾಡುವ ಪಣತೊಟ್ಟಂತೆ ಕಾಣುತ್ತಿದೆ. ಇದೊಂದು ಗಂಭೀರ ಪ್ರಕರಣ. ಮುಖ್ಯಮಂತ್ರಿಗಳು ಈ ಬಗ್ಗೆ ಗಮನ ಹರಿಸಬೇಕು. ಗಿಡಕಿತ್ತು ದೌರ್ಜನ್ಯ ಎಸಗಿದವರನ್ನು ತಕ್ಷಣ ಬಂಧಿಸಬೇಕು. ಕರ್ತವ್ಯಲೋಪ ಎಸಗಿದ ಅಧಿಕಾರಿಗಳನ್ನು ಅಮಾನತು ಮಾಡಬೇಕು.
ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ರಮೇಶ್ ಕೆಳದಿ ಮಾತನಾಡಿ, ಕೆ.ಜಿ.ಕೊಪ್ಪ ಗ್ರಾಮದ ಸರ್ಕಾರಿ ಭೂಮಿ ಕಬಳಿಸಲು ಮಧು ಬಂಗಾರಪ್ಪ ಅವರ ಕೆಲ ಹಿಂಬಾಲಕರು ಪ್ರಯತ್ನಿಸುತ್ತಿದ್ದಾರೆ. ಒತ್ತುವರಿದಾರಲ್ಲಿ ಒಬ್ಬ ದಿನೇಶ್ ಶಿರವಾಳ ಅವರಿಗೆ ಜೀವಬೆದರಿಕೆ ಹಾಕಿದ್ದಾನೆ. ದೂರು ನೀಡಿದ್ದರೂ ಪೊಲೀಸರು ಕ್ರಮ ಜರುಗಿಸಿಲ್ಲ. ಕ್ಷೇತ್ರದಲ್ಲಿ ಮಧು ಬಂಗಾರಪ್ಪ ಬೆಂಬಲಿಗರ ಉಪಟಳ ಜಾಸ್ತಿಯಾಗಿದೆ ಎಂದು ದೂರಿದರು.
ಗಿಡ ಕಿತ್ತವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುತ್ತೇವೆ ಮತ್ತು ಕಿತ್ತ ಗಿಡದಲ್ಲಿ ಮತ್ತೆ ಗಿಡ ನೆಡುವುದಾಗಿ ಉಪವಿಭಾಗಾಧಿಕಾರಿ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ರಾಮಚಂದ್ರ ಮನೆಘಟ್ಟ, ದೇವರಾಜ ಬೆಳಂದೂರು, ಸೋಮಶೇಖರ್, ಅಜ್ಜಪ್ಪ ಪಡವಗೋಡು, ಸಂತೋಷ್, ವಿಜಯಕುಮಾರ್, ರಘುರಾಮ್, ಸುನೀಲ್ ಇತರರಿದ್ದರು.