ಪುತ್ರಿ ಅನ್ನಪೂರ್ಣೇಶ್ವರಿ ದೇವಿ ಜತೆಗೆ ಕೇರಳಂ ಸಚಿವ ಪಿ.ಸಿ.ವಿಷ್ಣುನಾಥ್, ಹಾ.ಮ.ಕನಕ ದಂಪತಿ. 
ಶಿವಮೊಗ್ಗ

ದೇವರನಾಡು-ಮಲೆನಾಡಿಗೆ ಬಾಂಧವ್ಯ ಬೆಸೆದ ಸಚಿವ! I minister vishnunath

ಪ್ರಮುಖ ಮುಖ್ಯಾಂಶಗಳು

  • ಕೇರಳಂನ ವಿಷ್ಣುನಾಥ್ ತುಮರಿಯ ಅಳಿಯ
  • ಹಾ.ಮ.ಕನಕ ಅವರ ಪತಿ ಈಗ ಟೂರಿಸಂ ಮಿನಿಸ್ಟರ್
  • ಉಮ್ಮನ್ ಚಾಂಡಿ ಗರಡಿಯಲ್ಲಿ ಪಳಗಿದ ಬೇಬಿ ಎಂಎಲ್‌ಎ
ಅರವಿಂದ ಅಕ್ಲಾಪುರ ಶಿವಮೊಗ್ಗ
ಕೇರಳಂ (keralam) ನಲ್ಲಿ ಅಸ್ತಿತ್ವಕ್ಕೆ ಬಂದಿರುವ ಯುಡಿಎಫ್ (udf) ಸರ್ಕಾರದಲ್ಲಿ ಪ್ರವಾಸೋದ್ಯಮ, ಸಿನಿಮಾ ಹಾಗೂ ಸಂಸ್ಕೃತಿ ಸಚಿವರಾಗಿರುವ ಪಿ.ಸಿ.ವಿಷ್ಣುನಾಥ್ (vishnunath) ದೇವರ ನಾಡಿಗೂ ಮಲೆನಾಡಿಗೂ ಬಾಂಧವ್ಯ ಬೆಸೆದವರು.
ವಿಷ್ಣುನಾಥ್ ಮದುವೆಯಾಗಿದ್ದು ಸಾಗರ ತಾಲೂಕು ತುಮರಿ ಸಮೀಪದ ಹಾಲ್ಕೆರೆ ಗ್ರಾಮದ ಹಾ.ಮ.ಕನಕ ಅವರನ್ನು. ಕನಕ ಅವರ ಕೈ ಹಿಡಿಯುವ ವೇಳೆಗಾಗಲೇ ವಿಷ್ಣುನಾಥ್ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದಿದ್ದರು. ಅದಾಗಲೇ ಶಾಸಕರೂ ಆಗಿದ್ದರು. 28ನೇ ವಯಸ್ಸಿಗೆ ಮೊದಲ ಬಾರಿಗೆ ಶಾಸಕರಾಗುವ ಮೂಲಕ ಇಂದಿಗೂ ಬೇಬಿ ಎಂಎಲ್‌ಎ ಎಂಬ ಖ್ಯಾತಿ ಇದೆ.
2006ರಿಂದ ಮೊನ್ನೆ ನಡೆದ ವಿಧಾನಸಭೆ ಚುನಾವಣೆವರೆಗೆ ಎಲ್ಲ ಐದು ಚುನಾವಣೆಗಳಲ್ಲಿ ಸ್ಪರ್ಧಿಸಿರುವ ಪಿ.ಸಿ.ವಿಷ್ಣುನಾಥ್, ನಾಲ್ಕರಲ್ಲಿ ಗೆಲುವು ಸಾಧಿಸಿದ್ದಾರೆ. 2011ರಲ್ಲಿ ಚೆಂಗನೂರು ಕ್ಷೇತ್ರದಲ್ಲಿ ಸೋಲುಂಡಿದ್ದರು. ಮೊದಲ ಮೂರು ಚುನಾವಣೆಗಳಲ್ಲಿ ಚೆಂಗನೂರು ಕ್ಷೇತ್ರದಿಂದ ಸ್ಪರ್ಧಿಸಿದರೆ, ಬಳಿಕ ಕುಂದರ ಕ್ಷೇತ್ರದಲ್ಲಿ ಸತತ ಎರಡು ಗೆಲುವು ಕಂಡಿದ್ದಾರೆ.
ಕೇರಳ ಕಾಂಗ್ರೆಸ್‌ನ ವಿವಿಧ ಹಂತಗಳಲ್ಲಿ ಜವಾಬ್ದಾರಿ ನಿರ್ವಹಿಸಿರುವ ವಿಷ್ಣುನಾಥ್, ವಿದ್ಯಾರ್ಥಿ ದೆಸೆಯಿಂದಲೇ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದಾರೆ. ಎಐಸಿಸಿ ಕಾರ್ಯದರ್ಶಿಯಾಗಿದ್ದ ಅವರಿಗೆ ಕೆಲ ಸಮಯ ಕರ್ನಾಟಕದ ಜವಾಬ್ದಾರಿಯನ್ನೂ ನೀಡಲಾಗಿತ್ತು. ಕೆಎಸ್‌ಯು (ಕೇರಳ ಸ್ಟೂಡೆಂಟ್ಸ್ ಯೂನಿಯನ್), ಕೇರಳ ವಿವಿ ಸೆನೆಟ್, ಕೇರಳ ಪ್ರದೇಶ ಕಾಂಗ್ರೆಸ್‌ನಲ್ಲಿ ಮಹತ್ತರ ಹುದ್ದೆಗಳನ್ನು ಈಗಾಗಲೇ ನಿರ್ವಹಿಸಿದ್ದಾರೆ. ಇದೀಗ ಸಚಿವರಾಗಿ ಗಮನ ಸೆಳೆದಿದ್ದಾರೆ.

ಭೇಟಿಯಾಗಿದ್ದೇ ಅನಿರೀಕ್ಷಿತ

ಎತ್ತಣ ಮಾಮರ, ಎತ್ತಣ ಕೋಗಿಲೆ ಎಂಬಂತೆ ಶರಾವತಿ ಹಿನ್ನೀರು ದ್ವೀಪದ ಹಾಲ್ಕೆರೆ ಎಂಬ ಪುಟ್ಟ ಗ್ರಾಮದ ಕನಕ, ಕೇರಳ ಕೊಲ್ಲಂ ಬಳಿಯ ಪುತ್ತೂರಿನ ಪಿ.ಸಿ.ವಿಷ್ಣುನಾಥ್ ಭೇಟಿಯಾಗಿದ್ದೇ ಅನಿರೀಕ್ಷಿತ. ಆದರೆ ಅವರಿಬ್ಬರ ಮೊದಲ ಭೇಟಿ ಹೊಸ ಬಾಂಧವ್ಯವೊಂದಕ್ಕೆ ಮುನ್ನುಡಿ ಬರೆದಿತ್ತು. ಮಹಾತ್ಮ ಗಾಂಧೀಜಿ ನೇತೃತ್ವದ ದಂಡಿ ಸತ್ಯಾಗ್ರಹಕ್ಕೆ 75 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ 2005ರಲ್ಲಿ ಏರ್ಪಡಿಸಿದ್ದ ಪಾದಯಾತ್ರೆಯಲ್ಲಿ ಪಿ.ಸಿ.ವಿಷ್ಣುನಾಥ್ ಕೇರಳದ ಪ್ರತಿನಿಧಿಯಾಗಿ ಭಾಗವಹಿಸಿದ್ದರು. ಸಾಹಿತ್ಯಿಕ ಕುಟುಂಬದ ಹಿನ್ನೆಲೆಯ ಕವಯಿತ್ರಿ ಹಾಗೂ ರಂಗಕರ್ಮಿಯಾಗಿ ಗುರುತಿಸಿಕೊಂಡಿದ್ದ ಹಾ.ಮ.ಕನಕ ಕೂಡ ಈ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದ ಒಡನಾಟ ಪರಸ್ಪರರ ಗಮನ ಸೆಳೆಯಿತು. ಇದಾದ ಎರಡು ವರ್ಷಗಳ ಬಳಿಕ ಗುರುವಾಯೂರ್‌ನಲ್ಲಿ ಇವರಿಬ್ಬರು ಹಸೆಮಣೆಯೇರಿದರು.

ವಿಶಿಷ್ಟ ಚಿಂತನೆಯ ಕುಟುಂಬ

ಕನಕ ಅವರ ತಂದೆ ಹಾ.ಮ.ಭಟ್ಟ ಎಂದೇ ಖ್ಯಾತರಾಗಿರುವ ಹಾಲ್ಕೆರೆ ಮಂಜುನಾಥ ಭಟ್ ಸಮಾಜವಾದಿ ಚಿಂತಕ. ಸಾಹಿತ್ಯಿಕ ಮನೋಭಾವದವರು. ಸಾಂಸ್ಕೃತಿಕ ಸಂಘಟಕರೂ ಹೌದು. ಅಭಿವ್ಯಕ್ತಿ ಬಳಗದ ಸಂಸ್ಥಾಪಕರಲ್ಲೊಬ್ಬರು. ಈಗಲೂ ಪ್ರತಿ ವರ್ಷ ತುಮರಿಯಲ್ಲಿ ಹಾ.ಮ.ಭಟ್ಟ ನೆನಪಿನ ಸಂಸ್ಕೃತಿ ಉತ್ಸವ ನಡೆಯುತ್ತದೆ. ನಾಡಿನ ಖ್ಯಾತ ಸಾಹಿತಿಗಳು, ಚಿಂತಕರು ಭಾಗವಹಿಸುತ್ತಾರೆ. ಇಂತಹ ಕುಟುಂಬದಿಂದ ಬಂದಿರುವ ಕನಕ ವಿಶಾಲ ಚಿಂತನೆಯುಳ್ಳವರು. ವಿಷ್ಣುನಾಥ್-ಕನಕ ದಂಪತಿಯು ಪುತ್ರಿ ಅನ್ನಪೂರ್ಣೇಶ್ವರಿ ದೇವಿ ಜತೆಗೆ ಸಂಸ್ಕೃತಿ ಉತ್ಸವದಲ್ಲಿ ಭಾಗವಹಿಸಲು ಅನೇಕ ಬಾರಿ ತುಮರಿಗೆ ಬಂದಿದ್ದಾರೆ.

ಪತಿ ಬಗ್ಗೆ ಕನಕ ಹೆಮ್ಮೆಯ ನುಡಿ

ವಿಷ್ಣುನಾಥ್ ಜನರ ನಡುವಿನಿಂದ ಬಂದು ನಾಯಕರಾದವರು. ರಾಜಕೀಯದಲ್ಲಿ ಎಂದಿಗೂ ಎದುರಾಳಿಗಳ ಮೇಲೆ ವೈಯಕ್ತಿಕ ಟೀಕೆ ನಡೆಸಿದವರಲ್ಲ. ಮೃದು ಸ್ವಭಾವ, ಸದಾ ಮುಗುಳ್ನಗೆ ವಿಷ್ಣು ಪಾಲಿನ ಸಂಪತ್ತು. ಇಂದಿಗೂ ನಾವು ಬಾಡಿಗೆ ಮನೆಯಲ್ಲೇ ವಾಸವಿದ್ದೇವೆ. ಜನ ಅವರನ್ನು ಉಮ್ಮನ್ ಚಾಂಡಿ ಬೆಳೆಸಿದ ನಾಯಕ ಎಂದೇ ಕರೆಯುತ್ತಾರೆ. ಕಿರಿಯ ವಯಸ್ಸಿನಲ್ಲಿ ಶಾಸಕರಾಗಿ ನಿರಂತರವಾಗಿ ರಾಜಕೀಯ ವಲಯದಲ್ಲಿ ಛಾಪು ಮೂಡಿಸುತ್ತಿದ್ದಾರೆ. ಕೆಲ ವರ್ಷ ನಾನು ತುಮರಿಯ ನೆನಪಿನ ಸಂಸ್ಕೃತಿ ಉತ್ಸವದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಆದರೆ ವಿಷ್ಣು ಒಬ್ಬರೇ ಅಲ್ಲಿಗೆ ಹೋಗಿಬಂದಿದ್ದಿದೆ. ವಿಷ್ಣು ತಂದೆ ಚೆಲ್ಲಪ್ಪನ್, ತಾಯಿ ಲೀಲಾ ತಮ್ಮ ಮಗನಿಗೆ ಅತ್ಯುತ್ತಮ ಸಂಸ್ಕಾರ ನೀಡಿದ್ದಾರೆ ಎಂದು ಹೇಳಲು ನನಗೆ ಹೆಮ್ಮೆಯಾಗುತ್ತದೆ. ವಿಷ್ಣು ಕನ್ನಡ ಅರ್ಥ ಮಾಡಿಕೊಳ್ಳಬಲ್ಲರು. ನಾನು ಮಲಯಾಳಂ ಕಲಿತಿದ್ದೇನೆ. ನನ್ನ ಮಗಳು ಕನ್ನಡ, ಮಲಯಾಳಂ ಎರಡೂ ಕಲಿತಿದ್ದಾಳೆ ಎಂದು ಕನಕ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.