ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ
- ಶಿವಮೊಗ್ಗ ಗ್ರಾಮಾಂತರದಲ್ಲಿ ತುಂಬಾ ಅವಾಂತರ
- ಹಾನಿಯಾಗಿದ್ದರೂ ಯಾರ ಜೀವಕ್ಕೂ ಸಮಸ್ಯೆಯಾಗಿಲ್ಲ
ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ರಭಸವಾದ ಗಾಳಿ (air) ಮತ್ತು ವ್ಯಾಪಕ ಮಳೆಯಿಂದ ಉಂಟಾಗಿರುವ ಹಾನಿ ಕುರಿತು ಜಿಲ್ಲಾಧಿಕಾರಿಗೆ ವರದಿ (report) ನೀಡಲು ಸೂಚಿಸಲಾಗಿದೆ. ವರದಿ ಕೈ ಸೇರಿದ ಬಳಿಕ ನಾನು ಹಾನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ (minister) ಮಧು ಬಂಗಾರಪ್ಪ ಹೇಳಿದರು.
ನಾನು ಪ್ರತಿನಿಧಿಸುವ ಸೊರಬ ಕ್ಷೇತ್ರದಲ್ಲಿ ಬಹಳಷ್ಟು ಹಾನಿಯಾಗಿದೆ. ಭಾನುವಾರ ಸುರಿದ ಮಳೆಗೆ ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ತುಂಬಾ ಅವಾಂತರ ಆಗಿರುವುದು ಗಮನಕ್ಕೆ ಬಂದಿದೆ. ಇನ್ನು ಮೂರ‌್ನಾಲ್ಕು ದಿನಗಳಲ್ಲಿ ಶಿವಮೊಗ್ಗ ಗ್ರಾಮಾಂತರ ಭಾಗಕ್ಕೆ ತೆರಳಲಿದ್ದೇನೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇನ್ನೂ ಮೂರ‌್ನಾಲ್ಕು ದಿನ ವ್ಯಾಪಕ ಮಳೆ ನಿರೀಕ್ಷೆ ಮಾಡಲಾಗುತ್ತಿದೆ. ಈವರೆಗೆ ಬಹಳಷ್ಟು ಹಾನಿಯಾಗಿದ್ದರೂ ಯಾರ ಜೀವಕ್ಕೂ ಸಮಸ್ಯೆಯಾಗಿಲ್ಲ. ಮುಂದಿನ ದಿನಗಳಲ್ಲೂ ಜನರು ಎಚ್ಚರಿಕೆ ವಹಿಸಬೇಕು. ಮಳೆ, ಗಾಳಿ ಸಂದರ್ಭದಲ್ಲಿ ಸುರಕ್ಷಿತ ವಿಧಾನ ಅನುಸರಿಸಬೇಕು ಎಂದರು.
ವಿಪತ್ತು ನಿರ್ವಹಣಾ ಸಿಬ್ಬಂದಿ ಮಾತ್ರವಲ್ಲದೇ ಕಂದಾಯ, ಅರಣ್ಯ, ಶಿಕ್ಷಣ ಎಲ್ಲ ಇಲಾಖೆಗಳ ಸಿಬ್ಬಂದಿಯೂ ತುರ್ತು ಸಂದರ್ಭದಲ್ಲಿ ಮಳೆ ಹಾನಿ ಪೀಡಿತರಿಗೆ ನರವಾಗಬೇಕು. ಪಿಡಿಒ, ತಹಸೀಲ್ದಾರ್, ತಾಪಂ ಇಒ ಎಚ್ಚರಿಕೆಯಿಂದ ಇರಬೇಕು. ಗಾಳಿಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರೆ ಮೆಸ್ಕಾಂ ಸಿಬ್ಬಂದಿ ಕೂಡಲೇ ಅದನ್ನು ಸರಿಪಡಿಸಬೇಕು ಎಂದು ಸೂಚಿಸಿದರು.
ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್ ಬಾನು, ಮಾಜಿ ಶಾಸಕ ಆಯನೂರು ಮಂಜುನಾಥ್, ಡಿಡಿಪಿಐ ಮಂಜುನಾಥ್, ಬಿಇಒ ರಮೇಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ರಾಜ್ಯ ಜವಳಿ ನಿಗಮದ ಅಧ್ಯಕ್ಷ ಚೇತನ್ ಗೌಡ, ಪ್ರಮುಖರಾದ ಸಿ.ಎಸ್.ಚಂದ್ರಭೂಪಾಲ್, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಸೂಡಾ ಮಾಜಿ ಅಧ್ಯಕ್ಷ ಎನ್.ರಮೇಶ್ ಇತರರಿದ್ದರು.