ಶಿವಮೊಗ್ಗ ನಗರ ಪಾಲಿಕೆಯಲ್ಲಿ ಏರ್ಪಡಿಸಿದ್ದ ನಮಸ್ತೆ ದಿನಾಚರಣೆಯಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಎಸ್.ಎನ್.ಚನ್ನಬಸಪ್ಪ, ಕೆ.ಮಾಯಣ್ಣ ಗೌಡ, ಪಿ.ಪ್ರಿಯಾ, ತೇಜು ಪ್ರಸಾದ್, ಎನ್.ಗೋವಿಂದ, ಪ್ರಭಾಕರ್ ಇದ್ದರು.
- ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿಕೆ
- ನಗರಪಾಲಿಕೆಯಲ್ಲಿ ನಮಸ್ತೆ ದಿನಾಚರಣೆ
ಶಿವಮೊಗ್ಗ: ನೈರ್ಮಲ್ಯ ಉಪಕರಣಗಳ ಖರೀದಿಗೆ ಸಬ್ಸಿಡಿ (subsidy) ನೀಡುವ ಮೂಲಕ ಜೀವನೋಪಾಯಕ್ಕೆ ಬೆಂಬಲ ನೀಡುವುದು, ನೈರ್ಮಲ್ಯ ಸಂಬಂಧಿತ ಯೋಜನೆಗಳಿಗೆ ಆರ್ಥಿಕ (economy) ನೆರವು ಮತ್ತು ಸಹಾಯಧನ ನೀಡುವುದೂ ಸೇರಿ ಅನೇಕ ಪ್ರಮುಖ ಅಂಶಗಳು ನಮಸ್ತೆ (namaste) ಯೋಜನೆಯಲ್ಲಿ ಅಡಗಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.
ಪಾಲಿಕೆ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ನಮಸ್ತೆ (ಯಾಂತ್ರೀಕೃತ ನೈರ್ಮಲ್ಯ ಪರಿಸರ ವ್ಯವಸ್ಥೆಗೆ ರಾಷ್ಟ್ರೀಯ ಕ್ರಿಯೆ) ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಯಾಂತ್ರೀಕೃತ ನೈರ್ಮಲ್ಯ ಪರಿಸರ ವ್ಯವಸ್ಥೆಗಾಗಿ ರೂಪಿಸಿರುವ ರಾಷ್ಟ್ರೀಯ ಯೋಜನೆ ಸ್ವಚ್ಛ ಭಾರತ ಅಭಿಯಾನದ ಭಾಗವಾಗಿದೆ. ಪೌರ ಕಾರ್ಮಿಕರ ಸುರಕ್ಷೆ, ಆರೋಗ್ಯ ಮತ್ತು ಜೀವನಮಟ್ಟ ಸುಧಾರಣೆಗೆ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.
ಪೌರಕಾರ್ಮಿಕರು ನಗರದ ಸ್ವಚ್ಛತೆ ಮತ್ತು ನಾಗರಿಕರ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದು ಅವರ ಸೇವೆಗೆ ಸಮಾಜ ಸದಾ ಋಣಿಯಾಗಿರಬೇಕು. ಯುಜಿಡಿ ಸಮಸ್ಯೆಗಳಿಂದ ಹಿಡಿದು ನಗರದ ನೈರ್ಮಲ್ಯ ನಿರ್ವಹಣೆವರೆಗೂ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಪೌರ ಕಾರ್ಮಿಕರ ಕಲ್ಯಾಣ, ಸುರಕ್ಷತೆ ಹಾಗೂ ಕುಟುಂಬದ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ ಅಭಿಯಾನದ ಮೂಲಕ ಶೌಚಗೃಹ ನಿರ್ಮಾಣಕ್ಕೆ ಆದ್ಯತೆ ನೀಡಿ ಸ್ವಚ್ಛತೆ ಬಗ್ಗೆ ಜನಜಾಗೃತಿ ಮೂಡಿಸಿದ ಪರಿಣಾಮ ದೇಶದಲ್ಲಿ ಮಹತ್ವದ ಬದಲಾವಣೆ ಕಂಡುಬಂದಿದೆ ಎಂದು ಹೇಳಿದರು.
ಪಾಲಿಕೆ ಉಪ ಆಯುಕ್ತ (ಅಭಿವೃದ್ಧಿ) ತೇಜು ಪ್ರಸಾದ್, ನಮಸ್ತೆ ನೋಡಲ್ ಅಧಿಕಾರಿ ಪುಷ್ಪಾವತಿ, ಕಾರ್ಯಪಾಲಕ ಅಭಿಯಂತ ಪಿ.ಪ್ರಿಯಾ, ಎಇಇ(ಪರಿಸರ) ಪ್ರಭಾಕರ್, ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಎನ್.ಗೋವಿಂದ ಇತರರಿದ್ದರು. ನೈರ್ಮಲ್ಯ ಕೆಲಸದಲ್ಲಿ ತೊಡಗಿದವರನ್ನು ಸನ್ಮಾನಿಸಲಾಯಿತು. ಆರೋಗ್ಯ ಸುರಕ್ಷತೆಯ ಕಿಟ್‌ಗಳನ್ನು ವಿತರಿಸಲಾಯಿತು.
ಕಾರ್ಮಿಕರ ಆರೋಗ್ಯ ಮುಖ್ಯ
ನಮಸ್ತೆ ಕಾರ್ಯಕ್ರಮ ಪೌರ ಕಾರ್ಮಿಕರ ಸನ್ಮಾನಕ್ಕೆ ಸೀಮಿತವಲ್ಲ. ಪೌರ ಕಾರ್ಮಿಕರು, ಚಿಂದಿ ಆಯುವವರು ಸೇರಿ ನಗರವನ್ನು ಸ್ವಚ್ಛಗೊಳಿಸುವವರ ಆರೋಗ್ಯ ಕಾಪಾಡುವುದು ಕಾರ್ಯಕ್ರಮದ ಉದ್ದೇಶ. ಪೌರ ಕಾರ್ಮಿಕರ ಹಿತರಕ್ಷಣೆಗೆ ನಗರ ಪಾಲಿಕೆ ಎಲ್ಲ ರೀತಿಯಲ್ಲೂ ಬದ್ಧವಾಗಿದೆ. ಪೌರ ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಎಲ್ಲ ರೀತಿಯ ಪರಿಕರಗಳನ್ನು ಒದಗಿಸಲಾಗಿದೆ. ಆಯುಷ್ಮಾನ್ ಕಾರ್ಡ್ ವಿತರಣೆ, ಆಧುನಿಕ ಪರಿಕರಗಳನ್ನು ಕೊಟ್ಟು, ಅದಕ್ಕೆ ತಕ್ಕಂತೆ ತರಬೇತಿ ಒದಗಿಸುವುದು, ಆರೋಗ್ಯ ತಪಾಸಣೆ ಮಾಡುವುದು ಇದರಲ್ಲಿ ಸೇರಿದೆ. ಪೌರ ಕಾರ್ಮಿಕರನ್ನು ಕಾಯಂಗೊಳಿಸುವ ಸಂಬಂಧ ಸರ್ಕಾರದೊಂದಿಗೆ ಪತ್ರ ವ್ಯವಹಾರ ನಡೆಸಲಾಗಿದೆ ಎಂದು ಕೆ.ಮಾಯಣ್ಣ ಗೌಡ ಹೇಳಿದರು.