ಶಿವಮೊಗ್ಗ: ಸಂಪ್ರದಾಯದ ಸೊಬಗು, ಗೊಂಬೆಗಳ ವೈವಿಧ್ಯ, ಭಕ್ತಿಯ ಭಾವ ಮತ್ತು ವಿದ್ಯಾರ್ಥಿಗಳ ಉತ್ಸಾಹದ ಸಮ್ಮಿಲನಕ್ಕೆ ಸಾಕ್ಷಿಯಾದದ್ದು ನಗರದ ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜಿನ ಎಂಸಿಎ ವಿಭಾಗದಲ್ಲಿ ಸೋಮವಾರ ನಡೆದ ‘ಎಂಸಿಎ ದಸರಾ’ ಉದ್ಘಾಟನಾ ಕಾರ್ಯಕ್ರಮ.
ಸಾಂಪ್ರದಾಯಿಕ ಉಡುಗೆಯಲ್ಲಿ ಕಾಲೇಜಿಗೆ ಆಗಮಿಸಿದ್ದ ವಿದ್ಯಾರ್ಥಿಗಳು ತಮ್ಮ ಮನೆಗಳಿಂದ ತಂದಿದ್ದ ವಿವಿಧ ಬಗೆಯ ಗೊಂಬೆಗಳನ್ನು ಕಲಾತ್ಮಕವಾಗಿ ಜೋಡಿಸಿ, ಮಧ್ಯದಲ್ಲಿ ದುರ್ಗಾದೇವಿಯ ಪ್ರತಿಮೆಯನ್ನು ಪ್ರತಿಷ್ಠಾಪಿಸಿ, ಮಾವಿನ ತೋರಣ ಹಾಗೂ ಬಾಳೆಕಂಬಗಳಿಂದ ಅಲಂಕರಿಸಿ ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು.
ಉಪನ್ಯಾಸಕರು ಮತ್ತು ಸಹಪಾಠಿಗಳೊಂದಿಗೆ ಸಾಮೂಹಿಕವಾಗಿ ದೇವಿಯನ್ನು ಆರಾಧಿಸಿದ ವಿದ್ಯಾರ್ಥಿಗಳು, ಜಗತ್ತಿನ ಒಳಿತಿಗಾಗಿ ಹಾಗೂ ಬದುಕಿನ ಉನ್ನತಿಗಾಗಿ ಪ್ರಾರ್ಥಿಸಿದರು. ಕಲಿಕೆಯ ಅಂಗಳದಲ್ಲಿ ಸಂಸ್ಕೃತಿಯ ಕಂಪು ಹರಡಿದ ಈ ಕ್ಷಣಗಳು ವಿದ್ಯಾರ್ಥಿಗಳಲ್ಲಿ ಸಂಪ್ರದಾಯದ ಬಗೆಗಿನ ಅಭಿಮಾನವನ್ನು ಮತ್ತಷ್ಟು ಗಟ್ಟಿಗೊಳಿಸಿದವು. ದಸರೆಯ ಸಾಂಸ್ಕೃತಿಕ ವೈಭವವನ್ನು ಅನಾವರಣಗೊಳಿಸಿದ ಗೊಂಬೆಗಳ ಪ್ರದರ್ಶನ ನೋಡುಗರ ಗಮನ ಸೆಳೆಯಿತು.
ದಶಾವತಾರವನ್ನು ಪ್ರತಿಬಿಂಬಿಸುವ ಗೊಂಬೆಗಳು, ವಿವಾಹ ಸಂಪ್ರದಾಯದ ವಿವಿಧ ಆಚರಣೆಗಳನ್ನು ಬಿಂಬಿಸುವ ಗೊಂಬೆಗಳು, ಗಂಡು-ಹೆಣ್ಣಿನ ಜೋಡಿಗಳು, ಎತ್ತು, ಹಸು-ಕರು, ಆನೆ ಸೇರಿ ಜನಪದ ಬದುಕು ಮತ್ತು ಗ್ರಾಮೀಣ ಸಂಸ್ಕೃತಿಯನ್ನು ಪ್ರತಿನಿಧಿಸುವ ಗೊಂಬೆಗಳು ಪ್ರದರ್ಶನಕ್ಕೆ ವಿಶೇಷ ಮೆರುಗು ನೀಡಿದವು. ಪ್ರತಿಯೊಂದು ಗೊಂಬೆಯೂ ಒಂದೊಂದು ಕಥೆಯನ್ನು ಹೇಳುವಂತಿದ್ದು, ಸಂಸ್ಕೃತಿಯ ಬೇರುಗಳನ್ನು ನೆನಪಿಸುವ ಸುಂದರ ಕಲಾಲೋಕವನ್ನು ಸೃಷ್ಟಿಸಿತು.
ಕಾರ್ಯಕ್ರಮವನ್ನು ಕಾಲೇಜಿನ ಪ್ರಾಚಾರ್ಯ ಡಾ. ವೈ.ವಿಜಯಕುಮಾರ್ ಉದ್ಘಾಟಿಸಿದರು. ಎಂಸಿಎ ವಿಭಾಗದ ಮುಖ್ಯಸ್ಥ ಡಾ. ಹೇಮಂತ್ ಕುಮಾರ್ ಸೇರಿದಂತೆ ವಿಭಾಗದ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.