ಶಿಕಾರಿಪುರದಲ್ಲಿ ಆಯೋಜಿಸಿದ್ದ ಮಕ್ಕಳ 10ನೇ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷೆ ಬಿ.ಎಲ್.ರುಕ್ಮಿಣಿ ಮಾತನಾಡಿದರು. ಡಿ.ಮಂಜುನಾಥ, ಜಿ.ಅಮೃತಾ, ಬಿ.ಪಾಪಯ್ಯ, ಎಚ್.ಎಸ್.ರಘು ಇತರರಿದ್ದರು.
- ಸೌಹಾರ್ದ ಬದುಕು ಕನ್ನಡಿಗರ ಗುರಿ
- ಭಾಷೆ ವಿಚಾರದಲ್ಲಿ ಒಗ್ಗೂಡುವುದು ಮುಖ್ಯ
- ಮಕ್ಕಳ ಹತ್ತನೇ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆ ಬಿ.ಎಲ್.ರುಕ್ಮಿಣಿ ಅನಿಸಿಕೆ
ಶಿಕಾರಿಪುರ: ಕನ್ನಡ ಭಾಷೆ ಸಾಹಿತ್ಯ, ಸಂಸ್ಕೃತಿ ಇನ್ನಷ್ಟು ಪ್ರಖರವಾಗುವ ನಿಟ್ಟಿನಲ್ಲಿ ಕನ್ನಡದ ಕಾರ್ಯ ಮಾಡಬೇಕು. ನಮ್ಮ ಪ್ರತಿ ಹೆಜ್ಜೆಯಲ್ಲೂ ಕನ್ನಡ ಮನೋಭಾವ ಕಾಣುವಂತಾಗಬೇಕು ಎಂದು ಮಕ್ಕಳ ಹತ್ತನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಬಿ.ಎಲ್.ರುಕ್ಮಿಣಿ ಹೇಳಿದರು.
ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಜಾನಪದ ಪರಿಷತ್, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶಿಕಾರಿಪುರದ ಮೌಲಾನಾ ಆಜಾದ್ ಕೆಪಿಎಸ್ ಶಾಲೆ ಸಭಾಂಗಣದಲ್ಲಿ ಆಯೋಜಿಸಿದ್ದ ಮಕ್ಕಳ ಹತ್ತನೇ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿ, ಕನ್ನಡಿಗರು ಸ್ವಾಭಿಮಾನಿಗಳು. ಕನ್ನಡದ ನೆಲ, ಜಲ, ಭಾಷೆಗೆ ಸಂಕಷ್ಟ ಬಂದಾಗ ಕನ್ನಡಕ್ಕಾಗಿ ಮುಂದಿಟ್ಟ ಹೆಜ್ಜೆಗಳನ್ನು ಹಿಂದಿಡಬಾರದು ಎಂದರು.
ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚುತ್ತಿದ್ದು, ಮನೆಯಲ್ಲಿ ಕನ್ನಡ ಸಾಹಿತ್ಯದ ಪುಸ್ತಕಗಳನ್ನು ಇಡಬೇಕು. ಅವರಿಗೆ ಕನ್ನಡ ಸಾಹಿತ್ಯ ಓದುವ ಅಭ್ಯಾಸ ಬೆಳೆಸಬೇಕು. ನಮ್ಮ ಭಾಷಾಭಿಮಾನ ಮೊದಲು ಮನೆಯಿಂದ ಪ್ರಾರಂಭವಾಗಬೇಕು. ಅನಗತ್ಯ ಟಿವಿ ರಿಯಾಲಿಟಿ ಶೋಗಳಿಂದ ಮಕ್ಕಳ ಮೇಲೆ ಒತ್ತಡ ಜಾಸ್ತಿಯಾಗುತ್ತಿದೆ. ಬಿ.ಎಲ್.ರುಕ್ಮಿಣಿಸಮ್ಮೇಳನದ ಸರ್ವಾಧ್ಯಕ್ಷೆ
ಕನ್ನಡಿಗರು ಪರಭಾಷೆ ದ್ವೇಷಿಗಳಲ್ಲ. ಮಾತೃಭಾಷೆಗೆ ಮೊದಲ ಆದ್ಯತೆ ಕೊಡುತ್ತೇವೆ. ಎಲ್ಲ ಭಾಷಿಗರು, ಭಾಷೆಗಳನ್ನು ಪ್ರೀತಿಸುತ್ತೇವೆ. ಸೌಹಾರ್ದ ಬದುಕು ನಮ್ಮ ಗುರಿ. ಕನ್ನಡದ ಮೇಲೆ ಪ್ರಹಾರ ಮಾಡಿದರೆ ಕನ್ನಡಿಗರು ಕೈಕಟ್ಟಿ ಕೂರುವುದಿಲ್ಲ. ಕನ್ನಡ ನಮ್ಮ ಉಸಿರು, ಹೆಸರು, ಬದುಕು ಮತ್ತು ಕನ್ನಡವೇ ನಮಗೆ ಬೆಳಕು ಎಂದು ತಿಳಿಸಿದರು.
ವಿದ್ಯಾರ್ಥಿನಿ ಜಿ.ಅಮೃತಾ ಕಾರ್ಯಕ್ರಮ ಉದ್ಘಾಟಿಸಿದರು. ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಎಂ.ನವೀನ್‌ಕುಮಾರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಸ.ನ.ಮಂಜಪ್ಪ, ಅಂತಾರಾಷ್ಟ್ರೀಯ ಮಟ್ಟದ ಪಂಜ ಕುಸ್ತಿ ಕ್ರೀಡಾಪಟು ಗೌರಮ್ಮ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಕವಿಗೋಷ್ಠಿ , ಕಥಾಗೋಷ್ಠಿ, ಭಾಷಣ ಘೋಷ್ಠಿ ಏರ್ಪಡಿಸಿ ಸಮಾರೋಪದಲ್ಲಿ ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು.
ಕನ್ನಡ ನಾಡು ಸಾಹಿತ್ಯ, ಸಂಸ್ಕೃತಿ, ಸಂಗೀತ, ವೈವಿಧ್ಯ ಆಚಾರ ವಿಚಾರಗಳ ಸಂಗಮ. ನಮ್ಮಲ್ಲಿ ನಾವು ಕನ್ನಡಿಗರು ಎಂಬ ಹೆಮ್ಮೆ ಇರಬೇಕು. ಭಾಷೆಯನ್ನು ತಾಯಿಯಂತೆ ಆರಾಧಿಬೇಕು. ಕನ್ನಡ ನಮ್ಮ ಹೃದಯದ ಭಾಷೆ. ನಮ್ಮ ಭಾವನೆಗಳನ್ನು ಅರ್ಥಪೂರ್ಣವಾಗಿ ಹೇಳಲು ಕನ್ನಡದಲ್ಲಿ ಮಾತ್ರ ಸಾಧ್ಯ. ಡಿ.ಮಂಜುನಾಥ್ಕಸಾಪ ಜಿಲ್ಲಾಧ್ಯಕ್ಷ
ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಕೆ.ಎಸ್.ಹುಚ್ರಾಯಪ್ಪ, ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಬಿ.ಪಾಪಯ್ಯ,ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಮೇಘನಾ ಬಣಕಾರ್, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ನರಸಿಂಹಸ್ವಾಮಿ, ಕಸಾಪ ತಾಲೂಕು ಅಧ್ಯಕ್ಷ ಎಚ್.ಎಸ್.ರಘು, ಶಿಕ್ಷಕಿ ಮಮತಾ ಸಾಲಿ, ಉಪನ್ಯಾಸಕ ಕೆ.ಎಚ್.ಪುಟ್ಟಪ್ಪ, ಶಿವಪ್ಪ, ಚಂದ್ರೇಗೌಡ, ದೇವ್‌ಕುಮಾರ್, ಬಂಗಾರಪ್ಪ ಇತರರಿದ್ದರು.