ದೈವಜ್ಞ ಬ್ರಾಹ್ಮಣ ಸಮಾಜದಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ಉದ್ಘಾಟಿಸಿದರು. ಆರ್.ಗಿರೀಶ್, ಎಸ್.ಪಾಂಡುರಂಗ ಶೇಟ್, ನಿರ್ಮಲಾ ಪ್ರಕಾಶ್ ಇತರರಿದ್ದರು.
- ಸ್ವಾರ್ಥ ಚಿಂತನೆಯಿಂದ ಸಾಧನೆಗೆ ಅಡ್ಡಿ
- ಪರಿಶುದ್ಧ ಮನಸ್ಸು ಮುಖ್ಯ
- ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ಅಭಿಮತ
ಶಿವಮೊಗ್ಗ: ಅಂತರಂಗ ಮತ್ತು ಬಹಿರಂಗ ಶುದ್ಧಿಯಿಂದ ದೇವರ (god) ಕೃಪೆ ಹಾಗೂ ಆಶೀರ್ವಾದ (blessing) ಪಡೆಯಲು ಸಾಧ್ಯ ಎಂದು ಕರ್ಕಿ ಶ್ರೀ ಕ್ಷೇತ್ರದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ (swamiji) ತಿಳಿಸಿದರು.
ನಗರದ ದೈವಜ್ಞ ಕಲ್ಯಾಣ ಮಂದಿರದಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದಿಂದ ಏರ್ಪಡಿಸಿದ್ದ ಮಹಾಗಣಪತಿಗೆ ರಜತ ಕವಚ, ಪೀಠ, ಪ್ರಭಾವಳಿ ಸಮರ್ಪಣೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಶ್ರೇಷ್ಠ ವ್ಯಕ್ತಿ ಆಗಬೇಕು. ಉನ್ನತ ಸ್ಥಾನಮಾನ ಗಳಿಸಬೇಕೆಂಬ ಅಭಿಲಾಷೆ ಪ್ರತಿಯೊಬ್ಬರಲ್ಲೂ ಇರುವುದು ಸಹಜ. ಆದರೆ ದ್ವೇಷ, ಅಸೂಯೆ ಮತ್ತು ಸ್ವಾರ್ಥ ಚಿಂತನೆ ನಮ್ಮ ಸಾಧನೆಗೆ ಅಡ್ಡಿಯಾಗಿವೆ. ಭಗವಂತನ ದಯೆ, ಕೃಪೆ ಮತ್ತು ಪ್ರೀತಿಗೆ ಪಾತ್ರವಾಗಲು, ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಯಾಗಿ ಗುರುತಿಸಿಕೊಳ್ಳಲು ಪರಿಶುದ್ಧ ಮನಸ್ಸು ಮುಖ್ಯ ಎಂದು ಹೇಳಿದರು.
ಪೂರ್ಣಕುಂಭದೊಂದಿಗೆ ಪೂಜ್ಯರನ್ನು ಸ್ವಾಗತಿಸಲಾಯಿತು. ಪೂರ್ಣಾಹುತಿ, ಮಹಾಭಿಷೇಕ, ನೂತನ ರಜತ ಪ್ರಭಾವಳಿ ಸಮರ್ಪಣೆ, ಮಹಾಮಂಗಳಾರತಿ ನಡೆಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ಬೆಳ್ಳಿಯನ್ನು ದೇಣಿಗೆಯಾಗಿ ನೀಡಿದ ದಾನಿಗಳಿಗೆ ಗೌರವ ಸಮರ್ಪಿಸಲಾಯಿತು.
ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಎಸ್.ಪಾಂಡುರಂಗ ಶೇಟ್, ಉಪಾಧ್ಯಕ್ಷ ಆರ್.ಗಿರೀಶ್, ಖಜಾಂಚಿ ಸುಬ್ರಹ್ಮಣ್ಯ, ಕಾರ್ಯದರ್ಶಿ ನಿರ್ಮಲಾ ಪ್ರಕಾಶ್, ಸಹ ಕಾರ್ಯದರ್ಶಿ ರಾಘವೇಂದ್ರ ಕೆ.ಶೇಟ್, ಪ್ರಮುಖರಾದ ಸೋಮೇಶ್ ಪಿ.ಶೇಟ್, ಎಸ್.ಡಿ.ಕಮಲಾಕ್ಷ, ಮಂಜುನಾಥ ಜಿ.ಶೇಟ್, ಬಿಳಕಿ ಕೃಷ್ಣಮೂರ್ತಿ, ಎಚ್.ಡಿ.ಚಂದ್ರಹಾಸ ಇತರರಿದ್ದರು.
"
ದೈವಜ್ಞ ಸಮಾಜದವರು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ. ಉತ್ತಮ ವಿದ್ಯಾಭ್ಯಾಸ ಪಡೆಯುವ ಜತೆಗೆ ಒಳ್ಳೆಯ ಸಂಸ್ಕಾರಗಳನ್ನು ಬೆಳೆಸಿಕೊಳ್ಳಬೇಕು. ಐಎಎಸ್, ಕೆಎಎಸ್ ಮಾಡುವ ಮೂಲಕ ಉನ್ನತ ಸ್ಥಾನ ಗಳಿಸಿ ಸಮಾಜ ಸದೃಢಗೊಳಿಸಲು ಚಿಂತನೆ ನಡೆಸಬೇಕು.
— ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ಶ್ರೀ ಕ್ಷೇತ್ರ ಕರ್ಕಿ