ಸಾಗರ: ಸಾಗರದ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಚುನಾವಣೆಗೆ ಮಾರಿಕಾಂಬ ಹಿತರಕ್ಷಣಾ ಸಮಿತಿಯಿಂದ 33 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು ಎಂದು ಸಮಿತಿ ಸಂಚಾಲಕ ಎಂ.ಡಿ.ಆನಂದ್ ಹೇಳಿದರು.
ಹಾಲಿ ಸಮಿತಿ 13 ವರ್ಷಗಳಿಂದ ಅನಧಿಕೃತವಾಗಿ ಆಡಳಿತ ನಡೆಸಿಕೊಂಡು ಬರುತ್ತಿದೆ. ಲೆಕ್ಕಪತ್ರ ಪಾರದರ್ಶಕವಾಗಿಲ್ಲ. ಇದೀಗ ಮತ್ತೆ ಚುನಾವಣೆ ನಿಲ್ಲಲು ಹಾಲಿ ಅಧ್ಯಕ್ಷ ಕೆ.ಎನ್.ನಾಗೇಂದ್ರ ತಯಾರಿ ನಡೆಸಿದ್ದಾರೆ. 13 ವರ್ಷ ಆಡಳಿತ ನಡೆಸಿ, ನಾಲ್ಕು ಜಾತ್ರೆ ಮಾಡಿದರೂ ಮತ್ತೆ ನಾಗೇಂದ್ರ ಮತ್ತವರ ತಂಡ ಅಧಿಕಾರಕ್ಕೆ ಅಂಟಿಕೊಳ್ಳಲು ಕಾರಣ ಏನು? ಲಾಭಕ್ಕಾಗಿಯೇ ಮತ್ತೆ ಸ್ಪರ್ಧೆ ಮಾಡುತ್ತಿದ್ದು, ಇದನ್ನು ಸದ್ಯದಲ್ಲಿಯೇ ಬಹಿರಂಗ ಪಡಿಸುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈಗಾಗಲೇ ನಮ್ಮ ಸಮಿತಿಯಿಂದ 5 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 33 ಆಕಾಂಕ್ಷಿಗಳ ಪೈಕಿ ನಾಲ್ವರು ಮಹಿಳೆಯರಿದ್ದು, ಇನ್ನೋರ್ವ ಮಹಿಳೆ ಸ್ಥಾನ ಸದ್ಯದಲ್ಲಿಯೇ ಭರ್ತಿ ಮಾಡಲಾಗುತ್ತದೆ. ಎಲ್ಲ ಜಾತಿ, ವರ್ಗದಿಂದಲೂ ಹಿತರಕ್ಷಣಾ ಸಮಿತಿಯು ಕಣಕ್ಕೆ ಇಳಿಸಿದೆ. ಹಿಂದಿನ ಸಮಿತಿ ಸುಮಾರು 6 ಕೋಟಿ ರೂ. ಲೆಕ್ಕಾಚಾರವನ್ನೇ ಕೊಟ್ಟಿಲ್ಲ. ವಿವಿಧ ಸಮಿತಿ ಹೆಸರಿನಲ್ಲಿ ದುಂದುವೆಚ್ಚ ಮಾಡಲಾಗಿದೆ. ಇದೆಲ್ಲವನ್ನೂ ನಮ್ಮ ಸಮಿತಿ ಅಧಿಕಾರಕ್ಕೆ ಬಂದರೆ ತನಿಖೆ ಮಾಡಿಸುತ್ತೇವೆ ಎಂದರು.
ಸಮಿತಿ ಕಾನೂನು ಸಲಹೆಗಾರ ವಿ.ಶಂಕರ್ ಮಾತನಾಡಿ, ಹಾಲಿ ಸಮಿತಿ 13 ವರ್ಷ ಆಡಳಿತ ನಡೆಸಿದ್ದು, ಮತ್ತೆ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯಲು ಬೇರೆಯವರ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ನ್ಯಾಯಾಲಯ ಚುನಾವಣೆ ನಡೆಸಲು ಸೂಚನೆ ನೀಡಿದ್ದರೂ ಅದನ್ನು ವಿಳಂಬ ಮಾಡಿದೆ. ಹಾಲಿ ಸಮಿತಿ ಕಾರ್ಯದರ್ಶಿ ಬಿ.ಗಿರಿಧರ ರಾವ್ ಸೇರಿ ಹಲವರಿಗೆ ಈಗಲೂ ಚುನಾವಣೆ ನಡೆಸಲು ಮನಸ್ಸಿಲ್ಲ. ಹಾಲಿ ಸಮಿತಿ ದುರಾಡಳಿತ ನಡೆಸಿದರೂ ಮತ್ತೆ ಚುನಾವಣೆಗೆ ನಿಲ್ಲಲು ಪ್ರಯತ್ನ ನಡೆಸಿದೆ ಎಂದು ದೂರಿದರು. ಮಂಜುನಾಥ್, ಟಿ.ರಾಮಪ್ಪ, ನಿತ್ಯಾನಂದ ಶೆಟ್ಟಿ, ಜಿ.ರಾಮಪ್ಪ, ಧರ್ಮರಾಜ್ ಬೆಳಲಮಕ್ಕಿ ಹಾಜರಿದ್ದರು.