ಮಾರಶೆಟ್ಟಿಹಳ್ಳಿಯಲ್ಲಿ ಆಯೋಜಿಸಿದ್ದ ಮರಾಠ ಸಮಾಜದ ಕಾರ್ಯಕ್ರಮದಲ್ಲಿ ನಿಗಮದ ಅಧ್ಯಕ್ಷ ಮರಿಯೋಜಿ ರಾವ್ ಅವರನ್ನು ಸನ್ಮಾನಿಸಲಾಯಿತು. ಸತೀಶ್ ಸಾವಂತ್, ಭದ್ರಾವತಿ ಅಧ್ಯಕ್ಷ ಲೋಕೇಶ ರಾವ್, ದಿನೇಶ್ ರಾವ್, ಚಂದ್ರರಾವ್ ಗಾರ್ಗೆ, ಗೀತಾ ಬಾಯಿ, ಕವಿತಾ ಬಾಯಿ ಇತರರಿದ್ದರು.
ಹೊಳೆಹೊನ್ನೂರು: ಸಮಾಜದ ಮುಖಂಡರು ಪಕ್ಷಾತೀತವಾಗಿ ಒಂದಾದರೆ ಸಮಾಜ ಎಲ್ಲ ಕ್ಷೇತ್ರಗಳಲ್ಲೂ ಸದೃಢ ಆಗುವುದರಲ್ಲಿ ಎರಡು ಮಾತಿಲ್ಲ ಎಂದು ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷ ಮರಿಯೋಜಿ ರಾವ್ ಹೇಳಿದರು.
ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ಆಯೋಜಿಸಿದ್ದ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತಿವೆ. ಶಿವಾಜಿ ಮಹಾರಾಜರ ಕಾಲದಿಂದಲೂ ಭಿನ್ನಾಭಿಪ್ರಾಯಗಳು ಕೊನೆಯಾಗಿಲ್ಲ. ಎಲ್ಲ ಕಡೆ ಪ್ರವಾಸ ಮಾಡಿ ಒಗ್ಗಟ್ಟಿಗೆ ಶ್ರಮಿಸಲಾಗುವುದು ಎಂದರು.
ಜೀಜಾಬಾಯಿ ಸಮಾಜಕ್ಕೆ ಪುಣ್ಯಪುರುಷರನ್ನು ಕೊಡುಗೆ ನೀಡಿದ ಸ್ಮರಣೆಗಾಗಿ ಜೀಜಾ ಉಜ್ವಲ ಭಾಗ್ಯ ಯೋಜನೆ ಜಾರಿಗೆ ತರಲಾಗಿದೆ. ಸಮಾಜದ ಪೂರ್ವಿಕರನ್ನು ಎಂದಿಗೂ ಮರೆಯಬಾರದು. ವಿಧಾನಸಭೆಗೆ 40-50 ಶಾಸಕರನ್ನು ಕೊಡುಗೆ ನೀಡುವಷ್ಟು ಮರಾಠರು ಸಬಲರಾಗಿದ್ದೆವೆ. 36 ತಾಲೂಕುಗಳಲ್ಲಿ ನಮ್ಮ ಸಮಾಜದ ಮತಗಳೇ ನಿರ್ಣಾಯಕವಾಗಿವೆ ಎಂದು ಅಭಿಪ್ರಾಯಪಟ್ಟರು.
ಯಾವುದೇ ಕಾರಣಕ್ಕೂ ಸಮಾಜ ನಿರ್ಮಾಣದಲ್ಲಿ ರಾಜಕೀಯ ತಲೆದೋರಬಾರದು. ಸಮಾಜಗಳಲ್ಲಿ ಭಿನ್ನಾಭಿಪ್ರಾಯ ಗಣನೆಗೆ ತೆಗೆದುಕೊಳ್ಳದೆ, ಸ್ಥಳೀಯವಾಗಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ. ವೈಯಕ್ತಿಕ ಹಿತಾಸಕ್ತಿಗಳು ಸಮಾಜ ಒಡಕಿಗೆ ಕಾರಣವಾಗದಂತೆ ಎಚ್ಚರವಹಿಸಿ ಎಂದು ಸಲಹೆ ನೀಡಿದರು.
ಹಿಂದು ಸಾಮ್ರಾಜ್ಯ ಪರಿಕಲ್ಪನೆಗೆ ಜೀವ ತುಂಬಿದ ಕೀರ್ತಿ ಮರಾಠ ದಾರ್ಶನಿಕರಿಗೆ ಸಲ್ಲುತ್ತದೆ. ಬಲಾಢ್ಯ ಹಿಂದು ರಾಷ್ಟ್ರದ ಬದಲಾವಣೆ ಯಾರಿಂದಲೂ ಸಾದ್ಯವಿಲ್ಲ. ಎಲ್ಲ ರಂಗದಲ್ಲೂ ಹಿಂದುಗಳು ಬಲಶಾಲಿಗಳಾಗುತ್ತಿದ್ದಾರೆ. ಮರಾಠ ಮಹಿಳೆಯರಿಗೆ ಪ್ರತ್ಯೇಕವಾಗಿ ಸಹಕಾರ ಸಂಘ ರಚನೆ ಮಾಡಿ, ಕೌಶಲ ಕಲಿಸಿ ಲಕ್ಷಾಂತರ ಮಹಿಳೆಯರನ್ನು ಸ್ವಾವಲಂಬಿಯಾಗಿಸುವ ಗುರಿ ಹೊಂದಲಾಗಿದೆ ಎಂದರು.
ಜಿಲ್ಲಾ ಕ್ಷತ್ರಿಯ ಮರಾಠ ಸಂಘದ ಜಿಲ್ಲಾಧ್ಯಕ್ಷ ಸಚಿನ್ ಸಿಂದ್ಯಾ ಮಾತನಾಡಿ, ಸಮಾಜಗಳು ಶೈಕ್ಷಣಿಕ ಸಾಮಾಜಿಕವಾಗಿ ಬೆಳವಣಿಗೆಯಾಗಬೇಕು. ಸರ್ಕಾರದ ಯೋಜನೆಯ ಲಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ನಮ್ಮ ಮಕ್ಕಳನ್ನು ಶೈಕ್ಷಣಿಕವಾಗಿ ಬಲಾಢ್ಯರನ್ನಾಗಿಸಬೇಕಿದೆ. ಪ್ರತಿಮೆ ಸ್ಥಾಪನೆ ಹಾಗೂ ಭವನಗಳ ನಿರ್ಮಾಣದಿಂದ ಮಾತ್ರ ಸಮಾಜ ಬಲಶಾಲಿಯಾಗುತ್ತದೆ ಎಂಬ ಕಲ್ಪನೆ ತಪ್ಪು. ಅಧಿಕಾರ ಇದ್ದಾಗ ನಾಲ್ಕಾರು ಜನರಿಗೆ ಸಹಾಯ ಮಾಡುವುದನ್ನು ಮರೆಯಬಾರದು ಎಂದು ತಿಳಿಸಿದರು.
ಮರಾಠ ಸಮಾಜದ ಜಿಲ್ಲಾ ಉಪಾಧ್ಯಕ್ಷ ಸತೀಶ್ ಸಾವಂತ್, ಭದ್ರಾವತಿ ಅಧ್ಯಕ್ಷ ಲೋಕೇಶ ರಾವ್, ದಿನೇಶ್ ರಾವ್, ಚಂದ್ರರಾವ್ ಗಾರ್ಗೆ, ಗೀತಾ ಬಾಯಿ, ಕವಿತಾ ಬಾಯಿ, ಬಾಳೋಜಿ ಕೃಷ್ಣೋಜಿ ರಾವ್, ಎಲ್.ಕೆ.ಚಂದ್ರಪ್ಪ, ಶಾಂತಕುಮಾರ್, ಭೀಮರಾವ್, ಹಾಲೋಜಿ ರಾವ್, ರಮೇಶ ರಾವ್, ಮೋಹನ ರಾವ್, ಸತ್ಯನಾರಾಯಣ ಇತರರಿದ್ದರು.
ಸ್ತ್ರೀ ಸಬಲೀಕರಣಕ್ಕಾಗಿ 2600 ಹೊಲಿಗೆ ಯಂತ್ರಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಪ್ರತಿಯೊಬ್ಬರೂ ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ. ಮರಾಠ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮೀಸಲಿಡಲಾಗಿದೆ. 3687 ಬೊರ್‌ವೆಲ್ ಮಂಜೂರು ಮಾಡಲಾಗಿದೆ. ವಿದೇಶಿ ವ್ಯಾಸಂಗಕ್ಕಾಗಿ ಶೂನ್ಯ ಬಡ್ಡಿದರದಲ್ಲಿ 10 ವಿದ್ಯಾರ್ಥಿಗಳಿಗೆ 50 ಲಕ್ಷ ರೂ. ನೀಡಲಾಗುತ್ತಿದೆ.