ಮಾವು ಮತ್ತು ಹಲಸು ಮೇಳದ ಕರಪತ್ರವನ್ನು ಹಾಪ್‌ಕಾಮ್ಸ್ ಜಿಲ್ಲಾಧ್ಯಕ್ಷ ಆರ್.ವಿಜಯಕುಮಾರ್ ಬಿಡುಗಡೆಗೊಳಿಸಿದರು. ಉಂಬ್ಳೆಬೈಲು ಮೋಹನ್, ನಾರಾಯಣಪ್ಪ, ಕಾಂತರಾಜ್, ಅಕ್ಷಯ್ ಇತರರಿದ್ದರು.
- ರೈತರಿಂದ ನೇರವಾಗಿ ತಂದ ರಾಸಾಯನಿಕಮುಕ್ತ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ
- ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಹಣ್ಣುಗಳು ಲಭ್ಯ
- ಹಾಪ್‌ಕಾಮ್ಸ್ ಜಿಲ್ಲಾಧ್ಯಕ್ಷ ವಿಜಯಕುಮಾರ್ ಮಾಹಿತಿ
ಶಿವಮೊಗ್ಗ: ವಿನೋಬನಗರದ 100 ಅಡಿ ರಸ್ತೆಗೆ ಹೊಂದಿಕೊಂಡಿರುವ ಎಪಿಎಂಸಿ ಪ್ರಾಂಗಣದ ಹಾಪ್‌ಕಾಮ್ಸ್ ಮೈದಾನದಲ್ಲಿ ಜೂ.5ರಿಂದ 7ರವರೆಗೆ ಮಾವು ಮತ್ತು ಹಲಸು ಮೇಳ(Mango-Halasu Mela) ಹಮ್ಮಿಕೊಳ್ಳಲಾಗಿದೆ ಎಂದು ಹಾಪ್‌ಕಾಮ್ಸ್ ಶಿವಮೊಗ್ಗ ಜಿಲ್ಲಾಧ್ಯಕ್ಷ ಆರ್.ವಿಜಯಕುಮಾರ್ ಹೇಳಿದರು.
ಜಿಲ್ಲಾ ಹಾಪ್‌ಕಾಮ್ಸ್, ತೋಟಗಾರಿಕೆ ಇಲಾಖೆ, ರಾಜ್ಯ ಸಹಕಾರಿ ತೋಟಗಾರಿಕಾ ಮಾರಾಟ ಮಹಾಮಂಡಳ, ರಾಮನಗರದ ಮಾವು ಮತ್ತು ಹಲಸು ಬೆಳೆಗಾರರ ಸಹಕಾರ ಸಂಘದ ಜಂಟಿ ಆಶ್ರಯದಲ್ಲಿ ಆಯೋಜಿಸಿರುವ ಮೇಳದಲ್ಲಿ ರೈತರಿಂದ ನೇರವಾಗಿ ತಂದ ರಾಸಾಯನಿಕಮುಕ್ತ ಹಣ್ಣು(Chemical-Free Fruits)ಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
30 ಮಳಿಗೆಗಳನ್ನು ತೆರೆಯಲಾಗುತ್ತಿದೆ. ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಹಣ್ಣುಗಳು ಲಭ್ಯವಾಗಲಿದೆ. ರಾಮನಗರದ ಪ್ರಸಿದ್ಧ ಮಾವಿನ ತಳಿಗಳ ಜತೆಗೆ ಹಲಸು, ಹಲಸಿನ ಉತ್ಪನ್ನಗಳು, ಅನಾನಸ್ ಹಾಗೂ ತಾಜಾ ಮಾವಿನ ಜ್ಯೂಸ್ ಕೂಡ ಮೇಳದ ಪ್ರಮುಖ ಆಕರ್ಷಣೆ ಎಂದರು.
ಗಾಂಧಿಪಾರ್ಕ್ ಬಳಿ ಇರುವ ಹಾಪ್‌ಕಾಮ್ಸ್(Hopcoms) ಕಟ್ಟಡದಲ್ಲಿ ಕೋಲ್ಡ್ ಸ್ಟೋರೇಜ್ ಮಾದರಿ ಗ್ಲಾಸ್ ಬಾಕ್ಸ್ ಹೊಂದಿದ ಆಧುನಿಕ ಹಣ್ಣು ಮತ್ತು ತರಕಾರಿ ಮಾರಾಟ ಮಳಿಗೆಯನ್ನು ಶೀಘ್ರ ಆರಂಭಿಸಲಾಗುವುದು. ಕಳೆದ ಬಾರಿ ಮಾವಿನ ಹಣ್ಣಿಗಿಂತ ಹಲಸಿನ ಹಣ್ಣಿಗೆ ಬೇಡಿಕೆ ಹೆಚ್ಚಾಗಿತ್ತು. ಹಾಗಾಗಿ ಈ ಸಲ ನಾಲ್ಕೈದು ಮಳಿಗೆಗಳನ್ನು ತೆರೆಯಲಾಗುವುದು ಎಂದು ತಿಳಿಸಿದರು.
ಮೇಳದಲ್ಲಿ ಜಪಾನ್ ತಳಿ ಮಿಯಾಜಾಕಿ(Miyazaki), ಆಲ್ಫೋನ್ಸಾ, ಮಲಗೋವ, ಮಲ್ಲಿಕಾ, ಹಿಮಂಪಾಸ್, ಕೇಸರ್, ಸಕ್ರೆಗುತ್ತಿ, ಕಾಲಪೋಡು, ರಸಪುರಿ, ಸಿಂಧೂರ ಸೇರಿ ಹಲವು ತಳಿಗಳು ಮೇಳದಲ್ಲಿ ಇರಲಿವೆ ಎಂದು ಹೇಳಿದರು. ಹಾಪ್‌ಕಾಮ್ಸ್ ನಿರ್ದೇಶಕರಾದ ಉಂಬ್ಳೆಬೈಲು ಮೋಹನ್, ನಾರಾಯಣಪ್ಪ, ಕಾಂತರಾಜ್, ವ್ಯವಸ್ಥಾಪಕ ನಿರ್ದೇಶಕ ಅಕ್ಷಯ್, ವಾಸಣ್ಣ, ಸಿದ್ದರಾಜು, ಉಮೇಶ್, ಶರತ್ ಮರಿಯಪ್ಪ ಸುದ್ದಿಗೋಷ್ಠಿಯಲ್ಲಿದ್ದರು.
"
ಶಿವಮೊಗ್ಗ ಜಿಲ್ಲಾ ಹಾಪ್‌ಕಾಮ್ಸ್ ರಾಜ್ಯದಲ್ಲೇ ದ್ವಿತೀಯ ಸ್ಥಾನದಲ್ಲಿದೆ. 2027ರಿಂದ ವಸತಿ ನಿಲಯಗಳಿಗೂ ಹಣ್ಣು ವಿತರಿಸುವ ಉದ್ದೇಶ ಹೊಂದಿದ್ದೇವೆ. ಇದು ರೈತರಿಂದ ನೇರ ಖರೀದಿ ಪ್ರಕ್ರಿಯೆಗೆ ಮತ್ತಷ್ಟು ಉತ್ತೇಜನ ನೀಡಲಿದೆ.
— ಆರ್.ವಿಜಯಕುಮಾರ್, ಹಾಪ್‌ಕಾಮ್ಸ್ ಜಿಲ್ಲಾಧ್ಯಕ್ಷ