ಗುಡುಮಗಟ್ಟೆಯ ರಮೇಶ್ ಅಲಿಯಾಸ್ ರಮೇಶ್ ಪೂಜಾರ್ ಶಿಕ್ಷೆಗೆ ಒಳಗಾದವ
- ಹೂವಿನ ಗಿಡ ಕಡಿಯಬೇಡ ಎಂದಿದ್ದಕ್ಕೆಮಚ್ಚು, ದೊಣ್ಣೆಯಿಂದ ಹಲ್ಲೆ
- 2 ವರ್ಷ ಜೈಲು ಮತ್ತು 10 ಸಾವಿರ ರೂ. ದಂಡ ವಿಧಿಸಿದ ನ್ಯಾಯಾಲಯ
- ಗುಡುಮಗಟ್ಟೆಯ ರಮೇಶ್ ಅಲಿಯಾಸ್ ರಮೇಶ್ ಪೂಜಾರ್ ಶಿಕ್ಷೆಗೆ ಒಳಗಾದವ
ಶಿವಮೊಗ್ಗ: ಮನೆ ಪಕ್ಕದ ಖಾಲಿ ನಿವೇಶನದಲ್ಲಿದ್ದ ಹೂವಿನ ಗಿಡಗಳನ್ನು ಕಡಿಯಬೇಡ ಎಂದು ಬುದ್ಧವಾದ ಹೇಳಿದ್ದಕ್ಕೆ ಮಹಿಳೆ ಮೇಲೆ ಮಚ್ಚು ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದ ವ್ಯಕ್ತಿಗೆ ಭದ್ರಾವತಿಯ 1ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ(JMFC Court) ಎರಡು ವರ್ಷ ಜೈಲುಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿದೆ.
ಭದ್ರಾವತಿ ತಾಲೂಕಿನ ಗುಡುಮಗಟ್ಟೆಯ ಪಿ.ಎಂ.ರಮೇಶ್ ಅಲಿಯಾಸ್ ರಮೇಶ್ ಪೂಜಾರ್ (42) ಶಿಕ್ಷೆಗೆ ಒಳಗಾದವ. 2021ರ ಸೆ.28ರಂದು ರಮೇಶ್ ಅವರು ಸುನಿಲ್‌ಕುಮಾರ್ ಅವರ ಮನೆ ಪಕ್ಕದ ಖಾಲಿ ನಿವೇಶನ(Vacant land)ದಲ್ಲಿದ್ದ ಹೂವಿನ ಗಿಡಗಳನ್ನು ಕತ್ತರಿಸುತ್ತಿದ್ದರು. ಈ ವೇಳೆ ಸುನಿಲ್‌ಕುಮಾರ್ ಅವರ ತಾಯಿ ಶಾರದಮ್ಮ ಅವರು ಹೂವಿನ ಗಿಡ(Flower plant)ಗಳನ್ನು ಕೀಳದಂತೆ ಕೇಳಿಕೊಂಡಿದ್ದರು. ಇದರಿಂದ ಸಿಟ್ಟಾದ ರಮೇಶ್, ಶಾರದಮ್ಮ ಅವರ ಜತೆ ಜಗಳ ಮಾಡಿ ಮಚ್ಚಿನಿಂದ ಬಲಿಗಾಲಿನ ಪಾದ, ದೊಣ್ಣೆಯಿಂದ ಹಲ್ಲೆ ಮಾಡಿದ್ದ. ಜೀವ ಬೆದರಿಕೆ(Life threat)ಯನ್ನೂ ಹಾಕಿದ್ದ. ಈ ಬಗ್ಗೆ ಸುನಿಲ್‌ಕುಮಾರ್ ಅವರು ಹೊಳೆಹೊನ್ನೂರು ಠಾಣೆಗೆ ದೂರು ನೀಡಿದ್ದರು.
ಹೊಳೆಹೊನ್ನೂರು ಠಾಣೆಯ ಎಎಸ್‌ಐ ಕೃಷ್ಣಾನಾಯ್ಕಾ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ವಿ.ರವಿಕುಮಾರ್ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ಪ್ರಕಟಿಸಿದ್ದಾರೆ. ಸರ್ಕಾರಿ ಅಭಿಯೋಜಕ ತಿಪ್ಪೇಶ್‌ರಾವ್ ಸರ್ಕಾರದ ಪರ ವಾದ ಮಂಡಿಸಿದ್ದರು.